ಅಭಿಮಾನಿಗಳು ಮಾಡಿದ ಸಮಾಜ ಸೇವೆಯ ಚಿತ್ರಗಳ ಹಂಚಿಕೊಂಡ ದರ್ಶನ್

|

Updated on: Feb 19, 2025 | 8:24 AM

Darshan Thoogudeepa: ನಟ ದರ್ಶನ್ ತೂಗುದೀಪ ತಮ್ಮ ಅಭಿಮಾನಿಗಳ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಹುಟ್ಟುಹಬ್ಬದಂದು ಅಭಿಮಾನಿಗಳು ಮಾಡಿರುವ ಸಮಾಜ ಸೇವೆಯ ಸರಣಿ ಚಿತ್ರಗಳನ್ನು ದರ್ಶನ್ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ದರ್ಶನ್ ಜೈಲಿಗೆ ಹೋದ ಬಳಿಕ ಅವರ ಅಭಿಮಾನಿಗಳ ಬಗ್ಗೆ ಋಣಾತ್ಮಕ ಅಭಿಪ್ರಾಯ ನಿರ್ಮಾಣವಾಗಿತ್ತು. ಅದರ ಬೆನ್ನಲ್ಲೆ ದರ್ಶನ್, ಅಭಿಮಾನಿಗಳು ಮಾಡಿರುವ ಸೇವೆಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಅಭಿಮಾನಿಗಳು ಮಾಡಿದ ಸಮಾಜ ಸೇವೆಯ ಚಿತ್ರಗಳ ಹಂಚಿಕೊಂಡ ದರ್ಶನ್
Darshan Thoogudeepa
Follow us on

ಜೈಲಿಂದ ಹೊರಬಂದ ಬಳಿಕ ನಿಧಾನಕ್ಕೆ ಸಾಮಾನ್ಯ ಜೀವನ ಶೈಲಿಗೆ ಮರಳುತ್ತಿರುವ ದರ್ಶನ್, ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗುತ್ತಿದ್ದಾರೆ. ಹುಟ್ಟುಹಬ್ಬದ ಕೆಲ ದಿನಗಳ ಹಿಂದೆ ವಿಡಿಯೋ ಹಂಚಿಕೊಂಡಿದ್ದ ನಟ ದರ್ಶನ್, ನಿನ್ನೆಯಷ್ಟೆ ಅಭಿಮಾನಿಗಳಿಗೆ ಧನ್ಯವಾದ ಹೇಳಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಇದೀಗ ತಮ್ಮ ಅಭಿಮಾನಿಗಳು ಮಾಡಿರುವ ಸಾಮಾಜಿಕ ಕಾರ್ಯದ ಚಿತ್ರಗಳನ್ನು ಹಂಚಿಕೊಂಡು ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.

ತಮ್ಮ ಅಭಿಮಾನಿಗಳು ಮಾಡಿರುವ ಸಮಾಜ ಸೇವೆಯ ಹಲವು ಚಿತ್ರಗಳನ್ನು ನಟ ದರ್ಶನ್ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಎಲ್ಲ ಚಿತ್ರಕ್ಕೂ ‘ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡ ಎಲ್ಲಾ ನನ್ನ ಸೆಲೆಬ್ರಿಟಿಸ್ ಗಳಿಗೆ ಹೃದಯಪೂರ್ವಕ ಧನ್ಯವಾದಗಳು’ ಎಂದು ಕ್ಯಾಪ್ಷನ್ ನೀಡಿದ್ದಾರೆ. ಅಭಿಮಾನಿಗಳು ಮಾಡಿರುವ ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣೆ, ಆಸ್ಪತ್ರೆಯಲ್ಲಿ ಆರೋಗ್ಯ ಕಿಟ್ ವಿತರಣೆ, ಅನಾಥಾಶ್ರಮ, ವೃದ್ಧಾಶ್ರಮಗಳಲ್ಲಿ ಭೋಜನ ವ್ಯವಸ್ಥೆ, ಉಚಿತ ಅನ್ನದಾನ, ಆರೋಗ್ಯ ತಪಾಸಣೆ ಶಿಬಿರ, ರಕ್ತದಾನ ಶಿಬಿರಗಳ ಫೋಟೊಗಳನ್ನು ನಟ ದರ್ಶನ್ ಹಂಚಿಕೊಂಡಿದ್ದಾರೆ. ಸುಮಾರು 18 ವಿವಿಧ ಕಾರ್ಯಕ್ರಮಗಳನ್ನು ದರ್ಶನ್ ಹಂಚಿಕೊಂಡಿದ್ದಾರೆ.

ದರ್ಶನ್ ಈ ಬಾರಿ ಸರಳವಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದು, ತಮ್ಮ ಹುಟ್ಟುಹಬ್ಬದಂದು ಸಮಾಜ ಸೇವೆ ಮಾಡುವಂತೆ ಅಭಿಮಾನಿಗಳಿಗೆ ಕರೆ ನೀಡಿದ್ದರು. ದರ್ಶನ್ ಕರೆಗೆ ಓಗೊಟ್ಟು ಅಭಿಮಾನಿಗಳು ಸಮಾಜ ಸೇವೆ ಮಾಡಿದ್ದು, ಅದರ ಚಿತ್ರಗಳನ್ನು ನಟ ದರ್ಶನ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:ದರ್ಶನ್ ಮತ್ತೆ ಮೈಸೂರಿಗೆ ತೆರಳಲು ಅನುಮತಿ ನೀಡಿದ ನ್ಯಾಯಾಲಯ

ಅಸಲಿಗೆ ನಟ ದರ್ಶನ್, ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ಬಳಿಕ ದರ್ಶನ್​ರ ಅಭಿಮಾನಿಗಳ ದುರ್ವರ್ತನೆ ಬಗ್ಗೆ ತೀವ್ರ ಟೀಕೆ ಎದುರಾಗಿತ್ತು. ಪೊಲೀಸರು, ಮಾಧ್ಯಮದವರು, ಇತರೆ ನಟ-ನಟಿಯರ ಬಗ್ಗೆ ದರ್ಶನ್ ಅಭಿಮಾನಿಗಳು ಬಳಸುತ್ತಿದ್ದ ಅವಾಚ್ಯ ಭಾಷೆ, ಅತಿರೇಕದ ವರ್ತನೆಗಳಿಂದಾಗಿ ದರ್ಶನ್ ಅಭಿಮಾನಿಗಳು ಸಮಾಜಕ್ಕೆ ಘಾತುಕರು ಎಂಬ ಅಭಿಪ್ರಾಯ ನಿರ್ಮಾಣವಾಗಿತ್ತು. ಆ ಅಭಿಪ್ರಾಯವನ್ನು ಹೋಗಲಾಡಿಸಲೆಂದೇ ಈಗ ದರ್ಶನ್, ತಮ್ಮ ಅಭಿಮಾನಿಗಳು ಮಾಡಿರುವ ಸಮಾಜ ಸೇವೆಯ ಚಿತ್ರಗಳನ್ನು ಒಂದೊಂದಾಗಿ ಹಂಚಿಕೊಳ್ಳುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ