ದರ್ಶನ್ ಮತ್ತೆ ಮೈಸೂರಿಗೆ ತೆರಳಲು ಅನುಮತಿ ನೀಡಿದ ನ್ಯಾಯಾಲಯ
ಫೆ.20ರವರೆಗೆ ಮೈಸೂರಿಗೆ ಹೋಗಲು ನಟ ದರ್ಶನ್ ಅವರಿಗೆ ಕೋರ್ಟ್ ಅನುಮತಿ ನೀಡಿದೆ. ವೈದ್ಯರನ್ನು ಭೇಟಿ ಮಾಡುವ ಉದ್ದೇಶದಿಂದ ಅವರು ಮೈಸೂರಿಗೆ ತೆರಳಲಿದ್ದಾರೆ. ಹೈಕೋರ್ಟ್ನಿಂದ ದರ್ಶನ್ ಅವರಿಗೆ ಜಾಮೀನು ಸಿಕ್ಕಿದ್ದರೂ ಕೂಡ ಕೆಲವು ಷರತ್ತುಗಳಿಗೆ ಅವರು ಬದ್ಧರಾಗಿ ಇರಬೇಕಿದೆ. ಬೇರೆ ಕಡೆಗಳಿಗೆ ತೆರಳಲು ಅವರು ಅನುಮತಿ ಪಡೆಯಬೇಕು.

ನಟ ದರ್ಶನ್ ಅವರಿಗೆ ಮೈಸೂರಿನ ಬಗ್ಗೆ ವಿಶೇಷ ಪ್ರೀತಿ. ಶೂಟಿಂಗ್ ಇಲ್ಲದಿದ್ದಾಗ ಅವರು ಹೆಚ್ಚಾಗಿ ಮೈಸೂರಿನಲ್ಲಿ ಕಾಲ ಕಳೆಯುತ್ತಿದ್ದರು. ಆದರೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅರೆಸ್ಟ್ ಆದ ಬಳಿಕ ಮೈಸೂರಿನ ಸಂಪರ್ಕ ಕಡಿತಗೊಂಡಿತು. ಜಾಮೀನು ಸಿಕ್ಕಿದ್ದರೂ ಕೂಡ ದರ್ಶನ್ ಅವರು ಬೆಂಗಳೂರು ಬಿಟ್ಟು ಬೇರೆ ಕಡೆಗೆ ತೆರಳುವಂತಿಲ್ಲ ಎಂಬ ಷರತ್ತು ಇದೆ. ಒಂದು ವೇಳೆ ಬೆಂಗಳೂರಿನಿಂದ ಹೊರಗೆ ಹೋಗಬೇಕಾದ ಸಂದರ್ಭ ಬಂದರೆ ನ್ಯಾಯಾಲಯದಿಂದ ಅನುಮತಿ ಪಡೆಯಬೇಕು. ಈ ಮೊದಲು ಕೂಡ ಅವರು ಕೋರ್ಟ್ ಅನುಮತಿ ಪಡೆದು ಮೈಸೂರಿಗೆ ತೆರಳಿದ್ದರು. ಈಗ ಇನ್ನೊಮ್ಮೆ ಅವರಿಗೆ ನ್ಯಾಯಾಲಯದಿಂದ ಅನುಮತಿ ಸಿಕ್ಕಿದೆ.
ಫೆಬ್ರವರಿ 20ರ ತನಕ ಮೈಸೂರಿಗೆ ತೆರಳಲು ಆರೋಪಿ ದರ್ಶನ್ಗೆ ಕೋರ್ಟ್ ಅನುಮತಿ ನೀಡಿದೆ. ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ನಿಂದ ದರ್ಶನ್ ಅವರು ಅನುಮತಿ ಪಡೆದುಕೊಂಡಿದ್ದಾರೆ. ಅವರಿಗೆ ಬೆನ್ನು ನೋವು ಇದೆ. ಅದಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಅನಾರೋಗ್ಯದ ಕಾರಣ ವೈದ್ಯರನ್ನು ಭೇಟಿ ಮಾಡಬೇಕಿದೆ. ಹಾಗಾಗಿ ಅವರು ಮೈಸೂರಿಗೆ ತೆರಳಲಿದ್ದಾರೆ.
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಎ2 ಆಗಿದ್ದಾರೆ. ಅವರ ಸ್ನೇಹಿತೆ ಪವಿತ್ರಾ ಗೌಡ ಮೊದಲ ಆರೋಪಿ ಆಗಿದ್ದಾರೆ. ಅವರಿಬ್ಬರನ್ನು ಸೇರಿ ಇನ್ನುಳಿದ ಆರೋಪಿಗಳಿಗೆ ಕೂಡ ಹೈಕೋರ್ಟ್ನಲ್ಲಿ ಜಾಮೀನು ನೀಡಲಾಗಿದೆ. ಬೇಲ್ ಸಿಕ್ಕಿದ್ದರೂ ಕೂಡ ಆತಂಕ ಕಡಿಮೆ ಆಗಿಲ್ಲ. ಯಾಕೆಂದರೆ, ಹೈಕೋರ್ಟ್ ನೀಡಿದ ಜಾಮೀನು ಪ್ರಶ್ನಿಸಿ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದೆ. ಅದರ ವಿಚಾರಣೆ ಮಾರ್ಚ್ 18ರಂದು ನಡೆಯಲಿದೆ.
ಕೊಲೆ ಕೇಸ್ನಲ್ಲಿ ಸಂಕಷ್ಟ ಎದುರಿಸುತ್ತಿರುವುದರಿಂದ ದರ್ಶನ್ ಅವರ ಸಿನಿಮಾ ಕೆಲಸಗಳು ವಿಳಂಬ ಆದವು. 2024ರಲ್ಲಿ ಅವರ ಯಾವುದೇ ಸಿನಿಮಾ ತೆರೆ ಕಾಣಲಿಲ್ಲ. ಭಾರಿ ನಿರೀಕ್ಷೆ ಮೂಡಿಸಿರುವ ‘ದಿ ಡೆವಿಲ್’ ಸಿನಿಮಾದ ಟೀಸರ್ ಇತ್ತೀಚೆಗೆ ಬಿಡುಗಡೆ ಆಯಿತು. ನಿರ್ದೇಶಕ ಜೋಗಿ ಪ್ರೇಮ್ ಜೊತೆಗೂ ದರ್ಶನ್ ಕೈ ಜೋಡಿಸಿದ್ದಾರೆ. ಆ ಕುರಿತು ಕೂಡ ಫೆ.16ರಂದು ಅನೌನ್ಸ್ಮೆಂಟ್ ಮಾಡಲಾಗಿದೆ.
ಇದನ್ನೂ ಓದಿ: ಸುಪ್ರೀಂ ಕೋರ್ಟ್ನಲ್ಲಿ ದರ್ಶನ್ ಕೇಸ್; ಹಿರಿಯ ವಕೀಲ ಕಪಿಲ್ ಸಿಬಲ್ ಭೇಟಿ
ಬೆನ್ನು ನೋವು ಇರುವ ಕಾರಣದಿಂದ ಈ ವರ್ಷ ಬರ್ತ್ಡೇ ಪ್ರಯುಕ್ತ ಅಭಿಮಾನಿಗಳನ್ನು ಭೇಟಿ ಮಾಡಲು ದರ್ಶನ್ಗೆ ಆಗಿರಲಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಅವರು ಪೋಸ್ಟ್ ಮಾಡಿದ್ದಾರೆ. ‘ಆದಷ್ಟು ಬೇಗ ನಿಮ್ಮನ್ನು ಕಾಣುವ ಹಂಬಲ, ಕಾತುರ ನನ್ನಲ್ಲಿಯೂ ಇದೆ. ನಿಮ್ಮನ್ನು ಪಡೆದಿರುವ ನಾನೇ ಧನ್ಯ’ ಎಂದು ಅವರು ಬರೆದುಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.