AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಇದ್ರೆ ನೆಮ್ಮದಿಯಾಗಿರ್ಬೇಕು’ ಹಾಡು ಬಿಡುಗಡೆಗೆ ಹೊಸ ದಿನಾಂಕ ನಿಗದಿ

Darshan Thoogudeepa: ದರ್ಶನ್ ನಟನೆಯ ‘ಡೆವಿಲ್’ ಸಿನಿಮಾದ ‘ಇದ್ರೆ ನೆಮ್ದಿಯಾಗ್ ಇರ್ಬೇಕು’ ಹಾಡು ಆಗಸ್ಟ್ 15 ರಂದು ಬಿಡುಗಡೆ ಆಗಬೇಕಿತ್ತು. ಆದರೆ ದರ್ಶನ್ ಮತ್ತೆ ಜೈಲು ಸೇರಿದ್ದರಿಂದ ಬಿಡುಗಡೆ ಮಾಡಿರಲಿಲ್ಲ. ಇದೀಗ ಈ ಹಾಡು ಬಿಡುಗಡೆಗೆ ಹೊಸ ದಿನಾಂಕವನ್ನು ಚಿತ್ರತಂಡ ನಿಗದಿ ಮಾಡಿದೆ. ‘ಇದ್ರೆ ನೆಮ್ದಿಯಾಗ್ ಇರ್ಬೇಕು’ ಹಾಡು ಬಿಡುಗಡೆ ಯಾವಾಗ?

‘ಇದ್ರೆ ನೆಮ್ಮದಿಯಾಗಿರ್ಬೇಕು’ ಹಾಡು ಬಿಡುಗಡೆಗೆ ಹೊಸ ದಿನಾಂಕ ನಿಗದಿ
Darshan
ಮಂಜುನಾಥ ಸಿ.
|

Updated on: Aug 20, 2025 | 11:30 AM

Share

ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದ ಆರೋಪಿ ದರ್ಶನ್ ಮತ್ತೆ ಜೈಲು ಪಾಲಾಗಿದ್ದಾರೆ. ಹೈಕೋರ್ಟ್​​ನಲ್ಲಿ ಜಾಮೀನು ಪಡೆದು ನೆಮ್ಮದಿಯಾಗಿದ್ದ ದರ್ಶನ್ ಇದೀಗ ಸುಪ್ರೀಂಕೋರ್ಟ್ ಆದೇಶದಿಂದಾಗಿ ನೆಮ್ಮದಿ ಕಳೆದುಕೊಂಡಿದ್ದಾರೆ. ಮತ್ತೆ ಜೈಲು ವಾಸಕ್ಕೆ ತೆರಳಿದ್ದು, ಈ ಬಾರಿ ಕನಿಷ್ಟ ಆರು ತಿಂಗಳು ಅವರು ಜೈಲಿನಲ್ಲೇ ದಿನ ಕಳೆಯಬೇಕಿದೆ. ದರ್ಶನ್ ಜೈಲಿಗೆ ಹೋಗಿದ್ದರಿಂದ ಅವರ ನಟನೆಯ ‘ಡೆವಿಲ್’ ಸಿನಿಮಾಕ್ಕೆ ಸಂಕಷ್ಟ ಶುರುವಾಗಿದೆ. ಆದರೆ ಸಿನಿಮಾದ ನಿರ್ಮಾಪಕರು ‘ಡೆವಿಲ್’ ಸಿನಿಮಾ ಅನ್ನು ಬಿಡುಗಡೆ ಮಾಡಲು ರೆಡಿಯಾಗಿದ್ದು, ಸಿನಿಮಾದ ಹಾಡೊಂದರ ಬಿಡುಗಡೆಗೆ ಹೊಸ ದಿನಾಂಕ ನಿಗದಿ ಆಗಿದೆ.

ಆಗಸ್ಟ್ 15 ರಂದು ‘ಡೆವಿಲ್’ ಸಿನಿಮಾದ ‘ಇದ್ರೆ ನೆಮ್ಮದಿಯಾಗ್ ಇರ್ಬೇಕು’ ಹಾಡು ಬಿಡುಗಡೆ ಆಗುವುದಾಗಿ ಘೋಷಿಸಲಾಗಿತ್ತು. ಆದರೆ ಅದಕ್ಕೆ ಮುಂಚೆಯೇ ದರ್ಶನ್ ಮತ್ತೆ ಜೈಲು ಸೇರಿದ್ದರಿಂದ ಹಾಡು ಬಿಡುಗಡೆ ಮುಂದೂಡಲಾಯ್ತು. ಇದೀಗ ಈ ಹಾಡು ಬಿಡುಗಡೆಗೆ ಹೊಸ ದಿನಾಂಕ ನಿಗದಿ ಮಾಡಲಾಗಿದೆ. ‘ಇದ್ರೆ ನೆಮ್ಮದಿಯಾಗ್ ಇರ್ಬೇಕು’ ಹಾಡು ಆಗಸ್ಟ್ 24ಕ್ಕೆ ಬೆಳಿಗ್ಗೆ 10.05 ಕ್ಕೆ ಸಾಂಗ್ ಬಿಡುಗಡೆ ಆಗಲಿದೆಯೆಂದು ಚಿತ್ರತಂಡ ಘೋಷಣೆ ಮಾಡಿದೆ.

‘ಇದ್ರೆ ನೆಮ್ಮದಿಯಾಗ್ ಇರ್ಬೇಕು’ ಎಂಬುದು ದರ್ಶನ್ ಅವರ ವೈರಲ್ ಆಡಿಯೋನಲ್ಲಿ ಇದ್ದ ಮಾತಾಗಿತ್ತು. ವರ್ಷಗಳ ಹಿಂದೆ ಅವರ ಪತ್ನಿ ವಿಜಯಲಕ್ಷ್ಮಿ ಅವರಿಗೆ ಅಶ್ಲೀಲವಾಗಿ ಬೈದಾಗ ‘ಇದ್ರೆ ನೆಮ್ಮದಿಯಾಗ್ ಇರ್ಬೇಕು’ ಎಂಬ ವಾಕ್ಯವನ್ನು ದರ್ಶನ್ ಬಳಸಿದ್ದರು. ಆ ವಾಕ್ಯವನ್ನೇ ಬಳಸಿ ಈಗ ಹಾಡು ಮಾಡಲಾಗಿದೆ. ಪತ್ನಿಯನ್ನು ಬೈಯ್ಯಲು ಬಳಸಿದ್ದ ವಾಕ್ಯವನ್ನು ಈಗ ಹಾಡಾಗಿ ‘ಸೆಲೆಬ್ರೇಟ್’ ಮಾಡುತ್ತಿರುವುದು ಕೆಲವರಿಗೆ ಆಶ್ಚರ್ಯ ಸಹ ತಂದಿದೆ.

ಇದನ್ನೂ ಓದಿ:ದರ್ಶನ್ ‘ಡೆವಿಲ್’ ಸಿನಿಮಾ ಪ್ರಚಾರ ಮಾಡಲಿರುವ ಸ್ಟಾರ್ ನಟಿ

‘ಡೆವಿಲ್’ ಸಿನಿಮಾಕ್ಕೆ ಆರಂಭದಿಂದಲೂ ವಿಘ್ನಗಳು ಎದುರಾಗುತ್ತಲೇ ಇವೆ. ಕಳೆದ ವರ್ಷ ಜೂನ್ ತಿಂಗಳಲ್ಲಿ ಸಿನಿಮಾದ ಶೂಟಿಂಗ್ ಮೈಸೂರಿನಲ್ಲಿ ನಡೆಯುತ್ತಿರುವ ವೇಳೆಯಲ್ಲಿಯೇ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಬಂಧನ ಆಗಿತ್ತು. ಅದಾದ ಬಳಿಕ ಸುಮಾರು ಏಳೆಂಟು ತಿಂಗಳು ಸಿನಿಮಾ ಶೂಟಿಂಗ್ ನಿಂತು ಹೋಗಿತ್ತು. ಬಳಿಕ ಜಾಮೀನಿನ ಮೇಲೆ ಹೊರಬಂದ ಬಳಿಕ ಮತ್ತೆ ಶೂಟಿಂಗ್ ಪ್ರಾರಂಭ ಮಾಡಿದರು. ಇನ್ನೇನು ಸಿನಿಮಾದ ಪ್ರಚಾರ ಪ್ರಾರಂಭ ಮಾಡಬೇಕು ಎಂದುಕೊಂಡಿರುವಾಗ ಈಗ ಮತ್ತೆ ಜೈಲು ಸೇರಿದ್ದಾರೆ.

ಮೂಲಗಳ ಪ್ರಕಾರ ದರ್ಶನ್ ‘ಡೆವಿಲ್’ ಸಿನಿಮಾದ ಎಲ್ಲ ಕೆಲಸಗಳನ್ನು ಪೂರ್ಣಗೊಳಿಸಿದ್ದಾರೆ. ಸಿನಿಮಾದ ಚಿತ್ರೀಕರಣ, ಡಬ್ಬಿಂಗ್ ಎಲ್ಲ ಕಾರ್ಯವನ್ನೂ ಮುಗಿಸಿದ್ದಾರೆ. ಸಿನಿಮಾದ ಇನ್ನಿತರೆ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಮಾತ್ರವೇ ಬಾಕಿ ಉಳಿದಿದ್ದು, ಅವುಗಳು ಚಾಲ್ತಿಯಲ್ಲಿವೆ. ಸಿನಿಮಾ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆ ಮಾಡುವುದಾಗಿ ಘೋಷಣೆ ಆಗಿತ್ತು. ದರ್ಶನ್ ಜೈಲಿಗೆ ಹೋಗಿದ್ದರಿಂದ ಸಿನಿಮಾ ಬಿಡುಗಡೆ ತಡವಾಗಬಹುದು ಎಂದು ಅಭಿಮಾನಿಗಳು ಅಂದುಕೊಂಡಿದ್ದರು. ಆದರೆ ಮೂಲಗಳ ಪ್ರಕಾರ ನಿಗದಿಯಂತೆ ಸಿನಿಮಾ ಅಕ್ಟೋಬರ್ ತಿಂಗಳಲ್ಲಿಯೇ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ