ನಟ ದರ್ಶನ್, ನಿಧಾನಕ್ಕೆ ಸಾರ್ವಜನಿಕ ಜೀವನಕ್ಕೆ ಮರಳುತ್ತಿದ್ದಾರೆ. ದೇವಸ್ಥಾನಗಳಿಗೆ ಭೇಟಿ ನೀಡುವುದು, ಗೆಳೆಯರ ಹುಟ್ಟುಹಬ್ಬದ ಪಾರ್ಟಿಗಳಿಗೆ ಹೋಗುವುದು, ಅಭಿಮಾನಿಗಳನ್ನು ಭೇಟಿ ಮಾಡುವುದು ಇನ್ನಿತರೆ ಕಾರ್ಯಗಳನ್ನು ಮಾಡುತ್ತಿದ್ದಾರೆ. ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ನಟ ದರ್ಶನ್ ಇದೀಗ ಸಿನಿಮಾ ಚಿತ್ರೀಕರಣ ಶುರು ಮಾಡಲು ಮುಂದಾಗಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗುವ ಮುನ್ನ ‘ಡೆವಿಲ್’ ಸಿನಿಮಾದ ಶೂಟಿಂಗ್ ನಲ್ಲಿ ದರ್ಶನ್ ತೊಡಗಿಕೊಂಡಿದ್ದರು. ಇದೀಗ ಸುಮಾರು 9 ತಿಂಗಳುಗಳ ನಂತರ ‘ಡೆವಿಲ್’ ಶೂಟಿಂಗ್ ಮರು ಪ್ರಾರಂಭಿಸಲಿದ್ದಾರೆ.
ಮೂಲಗಳ ಪ್ರಕಾರ ಮುಂದಿನ ವಾರದಿಂದ ದರ್ಶನ್ ನಟನೆಯ ‘ಡೆವಿಲ್’ ಸಿನಿಮಾದ ಶೂಟಿಂಗ್ ಮರು ಪ್ರಾರಂಭ ಆಗಲಿದೆ. ಎರಡನೇ ಹಂತದ ಚಿತ್ರೀಕರಣ ಇದಾಗಿದ್ದು, ಶೂಟಿಂಗ್ಗಾಗಿ ಸೆಟ್ ಇನ್ನಿತರೆಗಳ ನಿರ್ಮಾಣ ಭರದಿಂದ ಸಾಗಿದೆ. ಚಿತ್ರೀಕರಣದಲ್ಲಿ ನಟ ದರ್ಶನ್ ಭಾಗಿ ಆಗಲಿದ್ದಾರೆ. ಬೆನ್ನು ನೋವಿಗೆ ಚಿಕಿತ್ಸೆ ಪಡೆಯುತ್ತಿರುವ ನಟ ದರ್ಶನ್ ಅದರ ಜೊತೆಗೆ ಜಿಮ್ಗೂ ಸಹ ಹೋಗಲು ಆರಂಭಿಸಿದ್ದು, ಸಿನಿಮಾದ ಚಿತ್ರೀಕರಣದಲ್ಲಿ ಭಾಗವಹಿಸಲೆಂದೇ ಜಿಮ್ಗೆ ಹೋಗಿ ದೇಹ ಹುರಿಗೊಳಿಸುತ್ತಿದ್ದಾರೆ. ದರ್ಶನ್ಗೆ ಬೆನ್ನು ನೋವು ಇರುವ ಕಾರಣದಿಂದಾಗಿ ಕೇವಲ ಮಾತಿನ ಭಾಗದ ಚಿತ್ರೀಕರಣ ಮಾತ್ರವೇ ಮಾಡಲಾಗುತ್ತಿದೆ. ಆಕ್ಷನ್ ದೃಶ್ಯಗಳ ಚಿತ್ರೀಕರಣವನ್ನು ತಡವಾಗಿ ಮಾಡಲು ನಿರ್ಧರಿಸಿದೆ ಚಿತ್ರತಂಡ. ಬೆಂಗಳೂರು, ಮೈಸೂರು, ಹೈದರಾಬಾದ್ ಹಾಗೂ ರಾಜಸ್ಥಾನದಲ್ಲಿ ಎರಡನೇ ಹಂತದ ಚಿತ್ರೀಕರಣ ನಡೆಯಲಿದೆ.
ಇದನ್ನೂ ಓದಿ:ನಟ ದರ್ಶನ್ ಜಾಮೀನು ಷರತ್ತು ಸಡಿಲಿಸಿದ ಹೈಕೋರ್ಟ್; ದಾಸ ಈಗ ಸ್ವತಂತ್ರ
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಬಂಧನ ಆದಾಗ ದರ್ಶನ್, ಡೆವಿಲ್ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿ ಆಗಿದ್ದರು. ಆ ಘಟನೆ ನಡೆಯದೇ ಇದ್ದಿದ್ದರೆ ‘ಡೆವಿಲ್’ ಸಿನಿಮಾ ಕಳೆದ ವರ್ಷ ಡಿಸೆಂಬರ್ಗೆ ಬಿಡುಗಡೆ ಆಗಬೇಕಿತ್ತು. ಇನ್ನೂ ಮೂರು-ನಾಲ್ಕು ತಿಂಗಳ ಬಾಕಿ ಇರುವಾಗಲೇ ನಟ ದರ್ಶನ್ ಬಂಧನ ಆಯ್ತು. ಇತ್ತೀಚೆಗಷ್ಟೆ ನಟ ದರ್ಶನ್ ಹುಟ್ಟುಹಬ್ಬದಂದು ‘ಡೆವಿಲ್’ ಸಿನಿಮಾದ ಸಣ್ಣ ಟೀಸರ್ ಬಿಡುಗಡೆ ಮಾಡಲಾಗಿದ್ದು, ಟೀಸರ್ ವೈರಲ್ ಆಗಿತ್ತು.
‘ದಿ ಡೆವಿಲ್’ ಸಿನಿಮಾ ಅನ್ನು ಮಿಲನ ಪ್ರಕಾಶ್ ನಿರ್ದೇಶನ ಮಾಡುತ್ತಿದ್ದಾರೆ. ಬಹಳ ವರ್ಷಗಳ ಬಳಿಕ ಪ್ರಕಾಶ್, ಈ ಸಿನಿಮಾ ಮೂಲಕ ನಿರ್ದೇಶನಕ್ಕೆ ಮರಳುತ್ತಿದ್ದಾರೆ. ಜೈ ಮಾತ ಕಂಬೈನ್ಸ್ ಲಾಂಛನದಲ್ಲಿ ಸಿನಿಮಾದ ನಿರ್ಮಾಣ ಮಾಡಲಾಗಿದೆ. ಪ್ರಕಾಶ್ ಅವರೇ ಚಿತ್ರಕತೆ, ಕತೆ ರಚಿಸಿದ್ದಾರೆ. ಸಿನಿಮಾದಲ್ಲಿ ರಚನಾರೈ, ತುಳಸಿ, ಅಚ್ಯುತ್ ಕುಮಾರ್, ಮರಾಠಿಯ ಮಹೇಶ್ ಮಂಜ್ರೇಕರ್, ಶ್ರೀನಿವಾಸ ಪ್ರಭು, ಶೋಭ್ ರಾಜ್ ಅವರುಗಳು ನಟಿಸುತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದರೆ, ಸುಧಾಕರ್ ಎಸ್ ರಾಜ್ ಛಾಯಾಗ್ರಣ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ