‘ರಾಬರ್ಟ್​’ನಲ್ಲಿ ದರ್ಶನ್​ ಖಡಕ್​ ಆಗಿ ಹೇಳಿದ ‘ಏ ತುಕಾಲಿ…’ ಡೈಲಾಗ್​ನ ಹಿಂದಿದೆ ಇಂಟರೆಸ್ಟಿಂಗ್​ ವಿಷ್ಯ!

ದರ್ಶನ್​ ನಟನೆಯ ‘ರಾಬರ್ಟ್​’ ಸಿನಿಮಾ ರಿಲೀಸ್​ಗೂ ಮುನ್ನ ಹಲವು ವಿಚಾರಗಳಲ್ಲಿ ಹೈಪ್​ ಸೃಷ್ಟಿಸಿದೆ. ಡೈಲಾಗ್​ಗಳು ಕೂಡ ಚಿತ್ರದ ಮೇಲಿನ ನಿರೀಕ್ಷೆಯಲ್ಲಿ ಹೆಚ್ಚಿಸಿವೆ.

  • TV9 Web Team
  • Published On - 8:23 AM, 9 Mar 2021
‘ರಾಬರ್ಟ್​’ನಲ್ಲಿ ದರ್ಶನ್​ ಖಡಕ್​ ಆಗಿ ಹೇಳಿದ ‘ಏ ತುಕಾಲಿ...’ ಡೈಲಾಗ್​ನ ಹಿಂದಿದೆ ಇಂಟರೆಸ್ಟಿಂಗ್​ ವಿಷ್ಯ!
ರಾಬರ್ಟ್​ ಸಿನಿಮಾದಲ್ಲಿ ದರ್ಶನ್​

‘ಚಾಲೆಂಜಿಂಗ್​ ಸ್ಟಾರ್​’ ದರ್ಶನ್​ ಅವರ ‘ರಾಬರ್ಟ್​’ ಚಿತ್ರದ ಟ್ರೇಲರ್​ ಬಿಡುಗಡೆಯಾದಾಗ ಸಂಭಾಷಣೆಗಳು ಹೆಚ್ಚು ಗಮನ ಸೆಳೆದವು. ರಾಜಶೇಖರ್​ ಮತ್ತು ಚಂದ್ರಮೌಳಿ ಜೊತೆಯಾಗಿ ಈ ಚಿತ್ರಕ್ಕೆ ಡೈಲಾಗ್​ ಬರೆದಿದ್ದಾರೆ. ‘ಏ ತುಕಾಲಿ… ನೀನು ಮಾಸ್​ ಆದ್ರೆ ನಾನು ಆ ಮಾಸ್​ಗೆ ಬಾಸ್​…’ ಎಂಬ ಡೈಲಾಗ್​ ಕೇಳಿ ಅಭಿಮಾನಿಗಳು ಸಖತ್​ ಥ್ರಿಲ್​ ಆಗಿದ್ದಾರೆ. ಅದರ ಹಿಂದೆ ಒಂದು ಇಂಟರೆಸ್ಟಿಂಗ್​ ವಿಷಯ ಇದೆ.

ಆರಂಭದಲ್ಲಿ ‘ತುಕಾಲಿ’ ಎಂಬ ಪದವೇ ಆ ಡೈಲಾಗ್​ನಲ್ಲಿ ಇರಲಿಲ್ಲ. ಅದನ್ನು ಶೂಟಿಂಗ್​ ಸ್ಪಾಟ್​ನಲ್ಲಿ ಸೇರಿಸಲಾಯಿತು ಎಂಬ ವಿಚಾರವನ್ನು ಸಂಭಾಷಣೆಕಾರ ರಾಜಶೇಖರ್​ ಹೇಳಿದ್ದಾರೆ. ‘ಏ ತುಕಾಲಿ ಎಂಬುದು ಈಗ ದೊಡ್ಡ ಹಿಟ್​ ಆಗಿದೆ. ಅದು ಸ್ಪಾಟ್​ನಲ್ಲಿ ಹುಟ್ಟಿಕೊಂಡ ಡೈಲಾಗ್​. ಆ ದೃಶ್ಯದ ಶೂಟಿಂಗ್​ ನಡೆಯುತ್ತಿರುವಾಗ ನಿರ್ದೇಶಕ ತರುಣ್​ ಸುಧೀರ್​ ನನಗೆ ಫೋನ್​ ಮಾಡಿ ಅರ್ಧ ಗಂಟೆಯಲ್ಲಿ ಚಿತ್ರೀಕರಣದ ಸ್ಥಳಕ್ಕೆ ಬರುವಂತೆ ಸೂಚಿಸಿದರು. ಈ ಜಾಗದಲ್ಲಿ ಖಡಕ್​ ಫೀಲ್​ ಇರುವ ಡೈಲಾಗ್​ ಬೇಕು ಎಂದರು’ ಎಂದು ಆ ದಿನದ ಘಟನೆಯನ್ನು ವಿವರಿಸುತ್ತಾರೆ ರಾಜಶೇಖರ್​.

ರಾಜಶೇಖರ್​ ಅವರು ಚಿತ್ರೀಕರಣದ ಸ್ಥಳದಲ್ಲೇ ‘ಏ ತಗಡು… ನೀನು ಮಾಸ್​ ಆದ್ರೆ ನಾನು ಆ ಮಾಸ್​ಗೆ ಬಾಸ್​’ ಎಂದು ಬರೆದರು. ಅದನ್ನು ನಿರ್ದೇಶಕ ತರುಣ್ ಸುಧೀರ್​ ಸ್ವಲ್ಪ ಬದಲಾಯಿಸಿದರು. ‘ತಗಡು’ ಎಂಬುದಕ್ಕಿಂತಲೂ ‘ತುಕಾಲಿ’ ಪದದ ಸೌಂಡಿಂಗ್​ ಚೆನ್ನಾಗಿದೆ ಅಂತ ಚೇಂಜ್​ ಮಾಡಿದರು ಎಂಬ ಮಾಹಿತಿಯನ್ನು ರಾಜಶೇಖರ್​ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಇರುವ ಇನ್ನಷ್ಟು ಪಂಚಿಂಗ್​ ಡೈಲಾಗ್​ಗಳನ್ನು ಕೇಳಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ.

‘ಮಜಾ ಟಾಕೀಸ್​’ನಲ್ಲಿ ಡೈಲಾಗ್​ ಬರೆದು ಅನುಭವ ಹೊಂದಿದ್ದ ರಾಜಶೇಖರ್​ ಅವರಿಗೆ ರಾಬರ್ಟ್​ ಸಿನಿಮಾಗೆ ಸಂಭಾಷಣೆ ಬರೆಯುವ ಅವಕಾಶ ಸಿಕ್ಕಿತು. ‘ಇದು ನನ್ನ ವೃತ್ತಿಜೀವನದಲ್ಲಿ ಸಿಕ್ಕಿರುವ ಸುವರ್ಣಾವಕಾಶ. ಎಲ್ಲರಿಗೂ ಈ ಚಾನ್ಸ್​ ಸಿಗುವುದಿಲ್ಲ. ಅದಕ್ಕೆ ನಾನು ತರುಣ್​ ಸುಧೀರ್​ ಮತ್ತು ನಿರ್ಮಾಪಕ ಉಮಾಪತಿ ಶ್ರೀನಿವಾಸ್​ ಅವರಿಗೆ ಧನ್ಯವಾದ ಹೇಳಲೇಬೇಕು. ದರ್ಶನ್​ ಅವರಿಗೆ ಡೈಲಾಗ್​ ಬರೆಯುವುದು ತುಂಬ ಚಾಲೆಂಜಿಂಗ್​ ವಿಷಯ. ತುಂಬ ಕೇರ್​ಫುಲ್​ ಆಗಿ ಬರೆಯಬೇಕು’ ಎಂದಿದ್ದಾರೆ ರಾಜಶೇಖರ್​

ಇದನ್ನೂ ಓದಿ: Roberrt Movie: ದರ್ಶನ್​ ಕಟೌಟ್​ಗೆ ಹಾಲಿನ ಅಭಿಷೇಕ; ಶುರುವಾಯ್ತು ರಾಬರ್ಟ್​ ಸಿನಿಮಾ ಜ್ವರ

Roberrt vs Kotigobba 3: ಸಿನಿಮಾಗಳ ರಿಲೀಸ್​ಗೂ ಮುನ್ನ ಇನ್ನೊಂದು ರೀತಿಯಲ್ಲಿ ದರ್ಶನ್​-ಸುದೀಪ್​ ಪೈಪೋಟಿ!