ದರ್ಶನ್ ಜೈಲಿಗೆ ಹೋಗಿದ್ದಕ್ಕೆ ‘ದಿ ಡೆವಿಲ್’ ಬಜೆಟ್ ಜಾಸ್ತಿ ಆಯ್ತಾ? ಉತ್ತರಿಸಿದ ನಿರ್ದೇಶಕ

ಅದ್ದೂರಿ ಬಜೆಟ್​​ನಲ್ಲಿ ‘ದಿ ಡೆವಿಲ್’ ಸಿನಿಮಾ ನಿರ್ಮಾಣ ಆಗಿದೆ. ಈಗ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ನಿರ್ದೇಶಕ ಪ್ರಕಾಶ್ ವೀರ್ ಅವರು ಚಿತ್ರತಂಡದ ಸದಸ್ಯರ ಜೊತೆಗೂಡಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಇಂದು (ಡಿಸೆಂಬರ್ 2) ನಡೆದ ಸುದ್ದಿಗೋಷ್ಠಿಯಲ್ಲಿ ಸಿನಿಮಾದ ಬಜೆಟ್ ಬಗ್ಗೆ ಪ್ರಶ್ನೆ ಎದುರಾಯಿತು.

ದರ್ಶನ್ ಜೈಲಿಗೆ ಹೋಗಿದ್ದಕ್ಕೆ ‘ದಿ ಡೆವಿಲ್’ ಬಜೆಟ್ ಜಾಸ್ತಿ ಆಯ್ತಾ? ಉತ್ತರಿಸಿದ ನಿರ್ದೇಶಕ
The Devil Movie Poster

Updated on: Dec 02, 2025 | 7:20 PM

ನಟ ದರ್ಶನ್ (Darshan) ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕಿಕೊಳ್ಳುವುದಕ್ಕೂ ಮುನ್ನ ‘ದಿ ಡೆವಿಲ್’ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದರು. ಆದರೆ ಅವರ ಬದುಕಿನಲ್ಲಿ ಕಹಿ ಘಟನೆ ನಡೆಯಿತು. ಅವರು ಜೈಲುಪಾಲಾಗುವಂತೆ ಆಯಿತು. ಆ ಬಳಿಕ ‘ದಿ ಡೆವಿಲ್’ (The Devil) ಸಿನಿಮಾದ ಕೆಲಸಗಳು ವಿಳಂಬ ಆದವು. ಹಲವು ತಿಂಗಳ ಕಾಲ ಶೂಟಿಂಗ್ ಸ್ಥಗಿತಗೊಂಡಿತ್ತು. ಮತ್ತೆ ದರ್ಶನ್ ಅವರು ಜಾಮೀನು ಪಡೆದು ಹೊರಗೆ ಬಂದ ಬಳಿಕ ಚಿತ್ರೀಕರಣ ಪುನಾರಂಭ ಮಾಡಲಾಯಿತು. ಈ ಎಲ್ಲ ಘಟನೆಗಳಿಂದಾಗಿ ‘ದಿ ಡೆವಿಲ್’ ಸಿನಿಮಾ ಬಜೆಟ್ ಖಂಡಿತವಾಗಿಯೂ ಜಾಸ್ತಿ ಆಯಿತು. ಆ ಬಗ್ಗೆ ನಿರ್ದೇಶಕ ಪ್ರಕಾಶ್ ವೀರ್ (Prakash Veer) ಅವರು ಮಾತನಾಡಿದ್ದಾರೆ.

ದರ್ಶನ್ ಅವರ ಅನುಪಸ್ಥಿತಿಯಲ್ಲೇ ‘ದಿ ಡೆವಿಲ್’ ಸಿನಿಮಾದ ಸುದ್ದಿಗೋಷ್ಠಿ ನಡೆದಿದೆ. ಡಿಸೆಂಬರ್ 11ರಂದು ಸಿನಿಮಾ ಬಿಡುಗಡೆ ಆಗಲಿದೆ. ಆ ಪ್ರಯುಕ್ತ ಇಂದು (ಡಿಸೆಂಬರ್ 2) ಮಾಧ್ಯಮಗಳ ಎದುರು ಚಿತ್ರತಂಡ ಹಾಜರಿ ಹಾಕಿತ್ತು. ಈ ವೇಳೆ ಸಿನಿಮಾದ ಬಜೆಟ್ ಬಗ್ಗೆ ಪ್ರಶ್ನೆ ಎದುರಾಯಿತು. ಆಗ ನಿರ್ದೇಶಕ ಪ್ರಕಾಶ್ ವೀರ್ ಅವರು ಮಾಹಿತಿ ನೀಡಿದರು.

ದರ್ಶನ್ ಅರೆಸ್ಟ್ ಆದ ಬಳಿಕ ‘ದಿ ಡೆವಿಲ್’ ಸಿನಿಮಾ ನಿಂತುಹೋಗಬಹುದು ಎಂಬ ಭಯ ಅಭಿಮಾನಿಗಳಿಗೆ ಕಾಡಿತ್ತು. ಆಗ ತಮ್ಮ ಆಲೋಚನೆ ಏನಾಗಿತ್ತು ಎಂದು ಪ್ರಕಾಶ್ ವೀರ್ ಹೇಳಿದ್ದಾರೆ. ‘ಒಂದಲ್ಲ ಒಂದಿನ ದರ್ಶನ್ ಅವರು ಹೊರಗೆ ಬರುತ್ತಾರೆ. ಪುನಃ ಸಿನಿಮಾ ಶುರು ಮಾಡುತ್ತೇವೆ. ಕೆಲಸಗಳನ್ನು ಮುಗಿಸುತ್ತೇವೆ ಎಂಬ ಒಂದು ನಂಬಿಕೆ, ಭರವಸೆ ಇತ್ತು’ ಎಂದಿದ್ದಾರೆ ಪ್ರಕಾಶ್ ವೀರ್.

‘ಬಜೆಟ್ ಹೆಚ್ಚು ಕಡಿಮೆ ಆಗೋದು ಸಿನಿಮಾ ನಿರ್ಮಾಣದ ಒಂದು ಭಾಗ. ಹಾಗಾಯ್ತು, ಹೀಗಾಯ್ತು ಅಂತ ಹೇಳಿಕೊಂಡರೆ ನಾನು ನನ್ನ ಮನೆಯ ತೊಂದರೆಯನ್ನು ನಿಮ್ಮ ಬಳಿ ಹೇಳಿಕೊಂಡಂತೆ ಆಗುತ್ತದೆ. ಇಲ್ಲಿ ಯಾವುದೂ ಸಮಸ್ಯೆ ಅಲ್ಲ. ಸೆಟ್​​ನಲ್ಲಿ ಕೂಡ ಕೆಲಸ ಶುರು ಮಾಡಿ ಇಂದು ಇಷ್ಟು ಮುಗಿಸಬೇಕು ಎಂದುಕೊಂಡಿರುತ್ತೇವೆ. ತಕ್ಷಣ ಮಳೆ ಬರುತ್ತದೆ. ಹಾಗೆಯೇ, ಪ್ರತಿ ಹಂತದಲ್ಲೂ ಏನೇ ಸವಾಲು ಬಂದರೂ ಅದನ್ನು ಎದುರಿಸೋಕೆ ನಾವು ಸಿದ್ಧವಾಗಿದ್ದೆವು’ ಎಂದು ಪ್ರಕಾಶ್ ವೀರ್ ಹೇಳಿದ್ದಾರೆ.

ಇದನ್ನೂ ಓದಿ: ಜೈಲಿನಲ್ಲಿ ದರ್ಶನ್​​ಗೆ ಮತ್ತೆ ಸಂಕಷ್ಟ: ವಾಕ್ ಮಾಡಲು ಅವಕಾಶ ಇಲ್ಲ; ಕಠಿಣ ನಿಯಮ ಜಾರಿ

‘ಖಂಡಿತವಾಗಿಯೂ ಬಜೆಟ್​ನಲ್ಲಿ ಹೆಚ್ಚು ಕಡಿಮೆ ಆಗಿದೆ. ಅದನ್ನು ನಿಭಾಯಿಸಿಕೊಂಡು ನಾವು ಇಲ್ಲಿಯ ತನಕ ಬಂದಿದ್ದೇವೆ’ ಎಂದು ಪ್ರಕಾಶ್ ವೀರ್ ಅವರು ಹೇಳಿದ್ದಾರೆ. ನಿರ್ದೇಶನ ಮಾಡುವುದರ ಜೊತೆಗೆ ಪ್ರಕಾಶ್ ಅವರು ಈ ಚಿತ್ರವನ್ನು ನಿರ್ಮಾಣ ಕೂಡ ಮಾಡಿದ್ದಾರೆ. ರಚನಾ ರೈ, ಶರ್ಮಿಳಾ ಮಾಂಡ್ರೆ, ಅಚ್ಯುತ್ ಕುಮಾರ್, ಮಹೇಶ್ ಮಂಜ್ರೇಜರ್, ಶೋಭರಾಜ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.