ನಟ ದರ್ಶನ್​ ಸೇರಿ ಎಲ್ಲಾ 17 ಆರೋಪಿಗಳ​ ನ್ಯಾಯಾಂಗ ಬಂಧನದ ಅವಧಿ ವಿಸ್ತರಣೆ

| Updated By: ರಾಜೇಶ್ ದುಗ್ಗುಮನೆ

Updated on: Sep 09, 2024 | 2:22 PM

ನಟ ದರ್ಶನ್ ಹಾಗೂ ಗ್ಯಾಂಗ್ ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಜೈಲಿನಲ್ಲಿ ಇದ್ದಾರೆ. ಈ ಪ್ರಕರಣ ನಡೆದು ಮೂರು ತಿಂಗಳು ಕಳೆಯುತ್ತಾ ಬಂದಿವೆ. ಇಂದಿಗೆ (ಸೆಪ್ಟೆಂಬರ್ 9) ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಪೂರ್ಣಗೊಳ್ಳುವುದರಲ್ಲಿ ಇತ್ತು. ಕೋರ್ಟ್​ನಲ್ಲಿ ಇದರ ವಿಚಾರಣೆ ಇಂದು ನಡೆದಿದೆ.

ನಟ ದರ್ಶನ್​ ಸೇರಿ ಎಲ್ಲಾ 17 ಆರೋಪಿಗಳ​ ನ್ಯಾಯಾಂಗ ಬಂಧನದ ಅವಧಿ ವಿಸ್ತರಣೆ
ದರ್ಶನ್
Follow us on

ರೇಣುಕಾ ಸ್ವಾಮಿ ಕೊಲೆ ಕೇಸ್​ಗೆ ಸಂಬಂಧಿಸಿದಂತೆ ನಟ ದರ್ಶನ್ ಸೇರಿದಂತೆ ಎಲ್ಲಾ 17 ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಇಂದಿಗೆ (ಸೆಪ್ಟೆಂಬರ್ 9) ಕೊನೆ ಆಗುವುದರಲ್ಲಿತ್ತು. ಹೀಗಾಗಿ, ಅವರನ್ನು ಕೋರ್ಟ್ ಎದುರು ಹಾಜರುಪಡಿಸಲಾಗಿದೆ. ಈ ವೇಳೆ ಎಲ್ಲಾ 17 ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಸೆಪ್ಟೆಂಬರ್​ 12ರವರೆಗೆ ವಿಸ್ತರಿಸಿ ಕೋರ್ಟ್ ಆದೇಶ ನೀಡಿದೆ.

ದರ್ಶನ್ ಅವರು ಬಳ್ಳಾರಿ ಜೈಲಿನಿಂದ, ಪವಿತ್ರಾ ಗೌಡ ಬೆಂಗಳೂರು ಕೇಂದ್ರ ಕಾರಾಗೃಹದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾದರು. ಅದೇ ರೀತಿ ಈ ಪ್ರಕರಣದಲ್ಲಿ ಬೇರೆ ಬೇರೆ ಜೈಲು ಸೇರಿರುವ ಎಲ್ಲರೂ ವಿಚಾರಣೆ ಎದುರಿಸಿದರು.  ದರ್ಶನ್​ ಸೇರಿದಂತೆ ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಣೆ ಆಗಿದೆ. ಸೆಪ್ಟೆಂಬರ್ 12ರಂದು ಇವರು ಮತ್ತೆ ಕೋರ್ಟ್ ಎದುರು ಹಾಜರಾಗಬೇಕಾಗಿದೆ.

ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್​ಗೆ ಹಾಜರಾದ ಸರ್ಕಾರಿ ವಕೀಲ ಪ್ರಸನ್ನ ಕುಮಾರ್​​ ಅವರು ಪ್ರಕರಣದ ಪ್ರಾಥಮಿಕ ಸಾಕ್ಷ್ಯಾಧಾರಗಳ ಸಲ್ಲಿಸಿದರು. ಪೆನ್​ಡ್ರೈವ್, ಹಾರ್ಡ್​ಡಿಸ್ಕ್ ಸೇರಿ ಹಲವು ಸಾಕ್ಷ್ಯಾಧಾರಗಳ ಸಲ್ಲಿಕೆ ಮಾಡಿದ್ದಾರೆ. ಇವುಗಳನ್ನು ಜಡ್ಜ್ ಪರಿಶೀಲನೆ ಮಾಡಲಿದ್ದಾರೆ.

ಇದನ್ನೂ ಓದಿ: ಚಾರ್ಜ್​ಶೀಟ್​ ಮಾಹಿತಿ ಪ್ರಸಾರ ನಿರ್ಬಂಧ ಕೋರಿ ಕೋರ್ಟ್ ಮೆಟ್ಟಿಲೇರಿದ ದರ್ಶನ್

ನಟ ದರ್ಶನ್ ಅವರು ಜೈಲು ಸೇರಿ ಮೂರು ತಿಂಗಳು ಕಳೆಯುತ್ತಾ ಬಂದಿದೆ. ಜೂನ್ 11ರಂದು ದರ್ಶನ್, ಪವಿತ್ರಾ ಮೊದಲಾದವರು ಅರೆಸ್ಟ್ ಆದರು. ಆ ಬಳಿಕ ಹಂತ ಹಂತವಾಗಿ ಎಲ್ಲರೂ ಬಂಧನಕ್ಕೆ ಒಳಗಾಗುತ್ತಾ ಬಂದರು. ಈ ಪ್ರಕರಣದಲ್ಲಿ ಒಟ್ಟೂ 17 ಮಂದಿಯನ್ನು ಬಂಧಿಸಲಾಗಿದೆ.

ದರ್ಶನ್ ಅವರು ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಪ್ರಕರಣದಲ್ಲಿ ಅವರು ಯಾವಾಗ ಜಾಮೀನು ಸಲ್ಲಿಕೆ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಅವರ ಪತ್ನಿ ವಿಜಯಲಕ್ಷ್ಮಿ ಅವರು ಈಗಾಗಲೇ ಜಾಮೀನು ಅರ್ಜಿಗೆ ದರ್ಶನ್ ಅವರಿಂದ ಸಹಿ ಪಡೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 2:09 pm, Mon, 9 September 24