
ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದಲ್ಲಿ ಬೆಂಗಳೂರು ಪೊಲೀಸರಿಗೆ ಮತ್ತೊಂದು ಜಯ ದೊರೆತಿದೆ. ಈ ಪ್ರಕರಣದ ಆರಂಭದಿಂದಲೂ ಪೊಲೀಸರು ಪಟ್ಟುಬಿಡದೆ ತನಿಖೆ ನಡೆಸುತ್ತಿದ್ದು, ರೇಣುಕಾ ಸ್ವಾಮಿ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವ ಸತತ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ. ಹೈಪ್ರೊಫೈಲ್ ಕೇಸಾದರೂ ಸಹ ಯಾವುದೇ ಆಂತರಿಕ, ಬಾಹ್ಯ ಒತ್ತಡಗಳಿಗೆ ಮಣಿಯದೆ ದರ್ಶನ್ ಅನ್ನು ಬಂಧಿಸುವುದರಿಂದ ಹಿಡಿದು ಈ ವರೆಗೂ ಪ್ರಕರಣದಲ್ಲಿ ಎಲ್ಲೂ ಪಟ್ಟು ಸಡಿಸಿಲಿಲ್ಲ.
ತನಿಖಾಧಿಕಾರಿ ಎಸಿಪಿ ಚಂದನ್, ಆಗಿನ ಕಮೀಷನರ್ ಬಿ ದಯಾನಂದ ಸೇರಿದಂತೆ ಇನ್ನೂ ಹಲವು ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳ ಸಂಘಟಿತ ಪ್ರಯತ್ನದಿಂದ ಸಾಮಾನ್ಯನಲ್ಲಿ ಸಾಮಾನ್ಯನೊಬ್ಬನ ಕೊಲೆ ಪ್ರಕರಣ ಬೆಳಕಿಗೆ ಬಂತು ಮತ್ತು ಶವ ಸಿಕ್ಕ 48 ಗಂಟೆಗಳ ಒಳಗಾಗಿ ಬಹುತೇಕ ಎಲ್ಲ ಆರೋಪಿಗಳ ಬಂಧನವೂ ಆಯ್ತು. ನೆನಪಿರಲಿ ಆರಂಭದಲ್ಲಿ ಪ್ರಕರಣದ ದಿಕ್ಕು ತಪ್ಪಿಸಲು ಮೂವರು ಅಮಾಯಕರನ್ನು ಹಣ ಕೊಟ್ಟು ತಾವೇ ಕೊಲೆ ಮಾಡಿದ್ದಾಗಿ ಒಪ್ಪಿಕೊಳ್ಳುವಂತೆ ಆರೋಪಿಗಳು ಕಳಿಸಿದ್ದರು.
ಇದನ್ನೂ ಓದಿ:ರೇಣುಕಾ ಸ್ವಾಮಿ ಪ್ರಕರಣದಲ್ಲಿ ಮತ್ತೆ ಜೈಲಿಗೆ ದರ್ಶನ್, ಮುಂದಿರುವ ಆಯ್ಕೆಗಳೇನು?
ಆ ನಂತರವೂ ಸಹ ಸತತ ತನಿಖೆ, ವಿಚಾರಣೆ ಮೂಲಕ ಹಲವು ಸಾಕ್ಷ್ಯಗಳನ್ನು ಪೊಲೀಸರು ಕಲೆ ಹಾಕಿದರು. ಆರಂಭದಲ್ಲಿ 231 ಮಂದಿ ಸಾಕ್ಷಿಗಳ ಹೇಳಿಕೆಗಳನ್ನು ಪೊಲೀಸರು ದಾಖಲಿಸಿದ್ದರು. ಹಲವಾರು ತಾಂತ್ರಿಕ ಸಾಕ್ಷಿಗಳನ್ನು ಕಲೆ ಹಾಕಿದರು. ಎಲ್ಲ ಮಾಡಿದ ಬಳಿಕವೂ ಸಹ ಹೈಕೋರ್ಟ್ನಲ್ಲಿ ಪೊಲೀಸರಿಗೆ ಹಿನ್ನಡೆಯಾಗಿ ಹೈಕೋರ್ಟ್ ಎಲ್ಲ ಆರೋಪಿಗಳಿಗೂ ಜಾಮೀನು ನೀಡಿ ಬಿಟ್ಟಿತ್ತು.
ಆದರೆ ಪ್ರಕರಣದ ಗಟ್ಟಿತನದ ಅರಿವಿದ್ದ ಹಾಗೂ ಆರೋಪಿಗಳ ಪ್ರಭಾವದ ಅರಿವಿದ್ದ ಪೊಲೀಸರು ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂಕೋರ್ಟ್ಗೆ ಮೊರೆ ಹೋದರು. ಅಲ್ಲಿ ಸಾಕಷ್ಟು ವಿಳಂಬದ ಬಳಿಕ, ಜಾಮೀನು ರದ್ದು ಮಾಡಲು ಬೇಕಾದ ಸಾಕ್ಷ್ಯಗಳನ್ನು ಒದಗಿಸಿದರು. ಸರ್ಕಾರಿ ವಕೀಲರು ಸಹ ಪೊಲೀಸರಿಗೆ ಸರಿಯಾದ ಸಂವಹನ ಸಾಧಿಸಿ ಪ್ರಮುಖ ಆರೋಪಿಗಳ ಜಾಮೀನು ರದ್ದಾಗುವಂತೆ ಮಾಡಿದರು.
ಇದೀಗ ಸುಪ್ರೀಂಕೋರ್ಟ್ ದರ್ಶನ್, ಪವಿತ್ರಾ ಸೇರಿದಂತೆ ಇನ್ನೂ ಕೆಲವು ಆರೋಪಿಗಳ ಜಾಮೀನನ್ನು ರದ್ದು ಮಾಡಿದೆ. ಇನ್ನೇನಿದ್ದರು ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಸೂಕ್ತ ಸಾಕ್ಷ್ಯಗಳನ್ನು ಸಲ್ಲಿಕೆ ಮಾಡಿ, ಪ್ರಕರಣದ ತೀರ್ಪು ಬೇಗನೆ ಹೊರಬೀಳುವಂತೆ ಮಾಡಿ ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಿಸುವ ಕಾರ್ಯ ಆಗಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:02 pm, Thu, 14 August 25