ದರ್ಶನ್ ಬೇರೆ ಜೈಲಿಗೆ ಹೋಗದಂತೆ ಲಾಯರ್ ಮಾಡಿರುವ ಪ್ರಯತ್ನ ಏನು?
ನಟ ದರ್ಶನ್ ಅವರ ಜಾಮೀನು ರದ್ದಾಗಿದ್ದು, ಮತ್ತೆ ಜೈಲು ವಾಸ ಅನಿವಾರ್ಯ ಆಗಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಗೃಹಕ್ಕೆ ಅವರನ್ನು ಕಳಿಸಲಾಗಿದೆ. ಬಳಿಕ ದರ್ಶನ್ ಪರ ವಕೀಲರು ಮಾಧ್ಯಮಗಳ ಜೊತೆ ಮಾತನಾಡಿ, ಕೆಲವು ಮಾಹಿತಿ ಹಂಚಿಕೊಂಡಿದ್ದಾರೆ. ಆ ಕುರಿತು ಇಲ್ಲಿದೆ ಪೂರ್ತಿ ವಿವರ..

ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾಗಿರುವ ದರ್ಶನ್, ಪವಿತ್ರಾ ಗೌಡ (Pavithra Gowda) ಮುಂತಾದವರು ಇಷ್ಟು ದಿನ ಜಾಮೀನಿನ ಮೇಲೆ ಆರಾಮಾಗಿ ಕಾಲ ಕಳೆಯುತ್ತಿದ್ದರು. ಆದರೆ ಇಂದು (ಆಗಸ್ಟ್ 14) ಅವರ ಜಾಮೀನನ್ನು ಸುಪ್ರೀಂ ಕೋರ್ಟ್ (Supreme Court) ರದ್ದು ಮಾಡಿ ಆದೇಶ ಹೊರಡಿಸಿದೆ. ಆದ್ದರಿಂದ 7 ಪ್ರಮುಖ ಆರೋಪಿಗಳು ಮತ್ತೆ ಜೈಲುಪಾಲಾಗಿದ್ದಾರೆ. ನಟ ದರ್ಶನ್ (Darshan) ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲೇ ಇರಿಸಲು ಲಾಯರ್ ಮನವಿ ಮಾಡಿಕೊಂಡಿದ್ದಾರೆ. ಆ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ.
‘ಇಂದು ಜಾಮೀನು ರದ್ದಾಗಿರುವ ದರ್ಶನ್ ಹಾಗೂ ಇನ್ನಿತರ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ನ್ಯಾಯಾಧೀಶರು ಎಲ್ಲ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳಿಸಿದ್ದಾರೆ. ದರ್ಶನ್ ಅವರ ಪರವಾಗಿ ನಾವು ವಿಶೇಷ ಮನವಿಯನ್ನು ಮಾಡಿಕೊಂಡಿದ್ದೇವೆ. ದರ್ಶನ್ ಅವರನ್ನು ಬೇರೆ ಜೈಲಿಗೆ ಕಳಿಸಲು ಅಧಿಕಾರಿಗಳು ಆದೇಶ ನೀಡಿದರೆ ನಮ್ಮ ವಾದಕ್ಕೆ ಅವಕಾಶ ನೀಡಬೇಕಾಗುತ್ತದೆ’ ಎಂದು ವಕೀಲರು ತಿಳಿಸಿದ್ದಾರೆ.
‘ದರ್ಶನ್ ಅವರನ್ನು ಬೇರೆ ಜೈಲಿಗೆ ಸ್ಥಳಾಂತರ ಮಾಡಬೇಡಿ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದೇವೆ. ಯಾಕೆಂದರೆ, ಈ ಪ್ರಕರಣದ ವಿಚಾರಣೆ ಬೆಂಗಳೂರಿನಲ್ಲೇ ನಡೆಯುವುದರಿಂದ ನ್ಯಾಯಾಲಯದಲ್ಲಿ ಅವರ ಫಿಸಿಕಲ್ ಹಾಜರಾತಿ ಕಡ್ಡಾಯವಾಗಿದೆ. ವಕೀಲರಾದ ನಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ದರ್ಶನ್ ಬಳಿ ಮಾಹಿತಿ ತೆಗೆದುಕೊಳ್ಳಬೇಕಾಗುತ್ತದೆ. ಅವರನ್ನು ಬೇರೆ ಜೈಲಿಗೆ ಸ್ಥಳಾಂತರ ಮಾಡಿದರೆ ಅಲ್ಲಿಗೆ ಹೋಗಿ ಮಾಹಿತಿ ಪಡೆಯುವುದು ಕಷ್ಟ ಆಗುತ್ತದೆ ಎಂಬುದನ್ನು ನ್ಯಾಯಾಲಕ್ಕೆ ಮನವರಿಕೆ ಮಾಡಿಕೊಟ್ಟಿದ್ದೇವೆ’ ಎಂದಿದ್ದಾರೆ ದರ್ಶನ್ ಪರ ವಕೀಲರು.
‘ಈ ವಿಚಾರಕ್ಕೆ ಸಂಬಂಧಿಸಿದಂತೆ ನಾವು ನ್ಯಾಯಾಲಯಕ್ಕೆ ಅರ್ಜಿ ಕೂಡ ಹಾಕಿದ್ದೇವೆ. ಅದನ್ನು ಪರಿಗಣಿಸುವುದಾಗಿ ಸಾಹೇಬರು ಹೇಳಿದ್ದಾರೆ. ಸುಪ್ರೀಂ ಕೋರ್ಟ್ನಲ್ಲಿ ರಿವ್ಯೂವ್ಗೆ ಹೋಗಲು ಅವಕಾಶ ಇದೆ. ಆದರೆ ಆ ಬಗ್ಗೆ ಯಾವ ಚರ್ಚೆಯೂ ನಮ್ಮಲ್ಲಿ ನಡೆದಿಲ್ಲ. ಮುಂದಿನ ದಿನಗಳಲ್ಲಿ ಆ ಬಗ್ಗೆ ತೀರ್ಮಾನ ನಾವು ತೆಗೆದುಕೊಳ್ಳುವವರಿದ್ದೇವೆ’ ಎಂದು ಲಾಯರ್ ತಿಳಿಸಿದ್ದಾರೆ.
ಇದನ್ನೂ ಓದಿ: ಅರೆಸ್ಟ್ ಆಗಿರುವ ದರ್ಶನ್ ನೋಡಲು ಬಂದ ಅಭಿಮಾನಿಗಳಿಗೆ ಪೊಲೀಸ್ ಲಾಠಿ ರುಚಿ
ಕಳೆದ ಬಾರಿ ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾಗ ಸಿಗರೇಟ್ ಸೇದುತ್ತಾ ರಾಜಾಥಿತ್ಯ ಪಡೆದ ಫೋಟೋ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಲಾಯರ್ಗೆ ಪ್ರಶ್ನೆ ಎದುರಾಗಿದೆ. ‘ಜೈಲಿನಲ್ಲಿ ಹೇಗೆ ಇರಬೇಕು ಎಂಬ ಬಗ್ಗೆ ನಾವು ಯಾವುದೇ ಸಲಹೆ ನೀಡಿಲ್ಲ. ಯಾವ ರೀತಿ ಇರಬೇಕೋ ಆ ಹುಷಾರಿನಲ್ಲಿ ದರ್ಶನ್ ಇರುತ್ತಾರೆ. ಎಲ್ಲ ಆರೋಪಿಗಳನ್ನು ಪರಪ್ಪನ ಅಗ್ರಹಾರದಲ್ಲಿ ಆಗಸ್ಟ್ 23ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳಿಸಿಲಾಗಿದೆ’ ಎಂದು ವಕೀಲರು ಮಾಹಿತಿ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








