ಬಳ್ಳಾರಿ ಜೈಲಧಿಕಾರಿಗಳ ಮೇಲೆ ದೂರು‌ ನೀಡಲು ಸಿದ್ಧವಾದ ದರ್ಶನ್ ಕುಟುಂಬ

ದರ್ಶನ್ ತೂಗುದೀಪ ಪ್ರಸ್ತುತ ಬಳ್ಳಾರಿ ಜೈಲಿನಲ್ಲಿದ್ದು, ಅಲ್ಲಿನ ಅಧಿಕಾರಿಗಳ ಶಿಸ್ತು ದರ್ಶನ್​ ಸಂಕಷ್ಟಕ್ಕೆ ಕಾರಣವಾಗಿದೆ. ಇದೀಗ ದರ್ಶನ್​ಗೆ ಸಿಗಬೇಕಿರುವ ಕೆಲವು ಅಗತ್ಯ ಸೌಲಭ್ಯಗಳನ್ನು ಜೈಲು ಅಧಿಕಾರಿಗಳು ಕೊಟ್ಟಿಲ್ಲವೆಂದು ಆರೋಪಿಸಿ ದರ್ಶನ್ ಪರವಾಗಿ ಅವರ ಕುಟುಂಬದವರು ಮಾನವ ಹಕ್ಕು ಆಯೋಗಕ್ಕೆ ದೂರು ನೀಡಲು ಮುಂದಾಗಿದೆ.

ಬಳ್ಳಾರಿ ಜೈಲಧಿಕಾರಿಗಳ ಮೇಲೆ ದೂರು‌ ನೀಡಲು ಸಿದ್ಧವಾದ ದರ್ಶನ್ ಕುಟುಂಬ
Follow us
ಮಂಜುನಾಥ ಸಿ.
|

Updated on: Sep 20, 2024 | 2:05 PM

ರೇಣುಕಾ ಸ್ವಾಮಿ ಕೊಲೆ ಆರೋಪದಲ್ಲಿ ನಟ ದರ್ಶನ್ ಬಂಧನವಾಗಿ 100 ದಿನಗಳಿಗೂ ಹೆಚ್ಚು ಸಮಯವಾಗಿದೆ. ಆರಂಭದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ದಿನ ಕಳೆದ ದರ್ಶನ್ ಅಲ್ಲಿ ರಾಜಾತಿಥ್ಯ ಸ್ವೀಕರಿಸಿದ ಕಾರಣ ಬಳ್ಳಾರಿ ಜೈಲಿಗೆ ಸ್ಥಳಾಂತರಗೊಂಡಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಸುಖಮಯ ದಿನಗಳನ್ನು ಕಳೆದಿದ್ದ ದರ್ಶನ್​ಗೆ ಬಳ್ಳಾರಿ ಜೈಲಿನಲ್ಲಿ ಕಠಿಣ ನಿಯಮಗಳನ್ನು ಎದುರಿಸುವ ಪರಸ್ಥಿತಿ ನಿರ್ಮಾಣವಾಗಿದೆ. ಬಳ್ಳಾರಿ ಜೈಲಿನ ಅಧಿಕಾರಿಗಳು ಶಿಸ್ತಿನಿಂದ ಕರ್ತವ್ಯ ನಿರ್ವಹಿಸುತ್ತಿದ್ದು, ಇದು ದರ್ಶನ್​ ಅನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಕೆಲವು ‘ಸೌಲಭ್ಯ’ಗಳಿಗಾಗಿ ಪದೇ ಪದೇ ಜೈಲಧಿಕಾರಿಗಳ ಬಳಿ ದರ್ಶನ್ ಮನವಿ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಬೆನ್ನಲ್ಲೆ ದರ್ಶನ್​ರ ಕುಟುಂಬಸ್ಥರು ಬಳ್ಳಾರಿ ಜೈಲು ಸಿಬ್ಬಂದಿ ವಿರುದ್ಧ ದೂರು ನೀಡಲು ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ.

ದರ್ಶನ್​ ಬೇಡಿಕೆ ಇಟ್ಟಿರುವ ಕೆಲವು ವಸ್ತುಗಳನ್ನು ನೀಡಲು ಜೈಲು ಅಧಿಕಾರಿಗಳು ನಿರಾಕರಿಸಿರುವ ಕಾರಣ, ಮಾನವ ಹಕ್ಕು ಆಯೋಗ ದೂರು ನೀಡಲು ದರ್ಶನ್ ಕುಟುಂಬ ನಿರ್ಧರಿಸಿದೆ ಎನ್ನಲಾಗುತ್ತಿದೆ. ದರ್ಶನ್ ಪತ್ನಿ, ತಾಯಿ ಅಥವಾ ಸಹೋದರ, ಬಳ್ಳಾರಿ ಜೈಲು ಅಧಿಕಾರಿಗಳ ವಿರುದ್ಧ ಮಾನವ ಹಕ್ಕು ಆಯೋಗಕ್ಕೆ ದೂರು ದಾಖಲಿಸಲಿದ್ದಾರೆ ಎನ್ನಲಾಗುತ್ತಿದೆ. ದರ್ಶನ್​ಗೆ, ವ್ಯಕ್ತಿಗೆ ಬೇಕಾದ ಕೆಲವು ಕನಿಷ್ಟ ಸೌಲಭ್ಯಗಳನ್ನು ನೀಡಲು ಜೈಲು ಅಧಿಕಾರಿಗಳು ನಿರಾಕರಿಸಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಲು ಸಜ್ಜಾಗಿದ್ದಾರೆ.

ಇದನ್ನೂ ಓದಿ:ಜಾಮೀನಿಗೆ ದರ್ಶನ್ ಅರ್ಜಿ ಸಲ್ಲಿಸೋದು ಯಾವಾಗ? ಇಷ್ಟೊಂದು ವಿಳಂಬವೇಕೆ?

ದರ್ಶನ್, ಬಳ್ಳಾರಿ ಜೈಲಿಗೆ ಸೇರಿದಾಗ ಶೌಚಕ್ಕೆ ಸರ್ಜಿಕಲ್ ಚೇರಿಗೆ ಮನವಿ ಮಾಡಿದ್ದರು. ಅದನ್ನು ಅಧಿಕಾರಿಗಳು ನೀಡಿದ್ದರು. ಹಾಸಿಗೆ, ದಿಂಬಿಗೆ ಬೇಡಿಕೆ ಇಟ್ಟಿದ್ದರು ಅದನ್ನು ನೀಡಲಾಗಿರಲಿಲ್ಲ. ಅದಾದ ಬಳಿಕ ಟಿವಿಗೆ ಬೇಡಿಕೆ ಇಟ್ಟರು, ಅದನ್ನು ಕೊಟ್ಟರಾದರೂ ಮೊದಲಿಗೆ ಟಿವಿ ಕೆಟ್ಟಿತ್ತಾದ್ದರಿಂದ ಅದನ್ನು ರಿಪೇರಿ ಮಾಡಿಸಿ ಕೊಡಲಾಗಿದೆ. ಟಿವಿ ಕೊಟ್ಟಿದ್ದರೂ ಸಹ ಅದರಲ್ಲಿ ಕೇವಲ ಸರ್ಕಾರಿ ಚಾನೆಲ್​ಗಳನ್ನು ಮಾತ್ರವೇ ದರ್ಶನ್​ಗೆ ನೋಡಲು ಅವಕಾಶ ನೀಡಲಾಗಿದೆ. ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್​ ಜೈಲು ಸೇರಿದ ಆರಂಭದಿಂದಲೂ ಹಾಸಿಗೆ ಮತ್ತು ಮೆತ್ತನೆಯ ದಿಂಬಿಗೆ ಡಿಮ್ಯಾಂಡ್ ಮಾಡುತ್ತಲೇ ಇದ್ದಾರೆ. ಬಳ್ಳಾರಿ ಜೈಲಿನಲ್ಲೂ ಅದೇ ಡಿಮ್ಯಾಂಡ್ ಮುಂದುವರೆದಿದೆ ಆದರೆ ಜೈಲು ಅಧಿಕಾರಿಗಳು ವಿಶೇಷ ಹಾಸಿಗೆ ಬಿಂದು ನೀಡಲು ನಿರಾಕರಿಸಿದ್ದಾರೆ. ಇದೇ ಕಾರಣ ಇಟ್ಟುಕೊಂಡು ಇದೀಗ ದರ್ಶನ್ ಕುಟುಂಬ ಮಾನವ ಹಕ್ಕುಗಳ ಸಮಿತಿಗೆ ದೂರು ನೀಡಲು ನಿರ್ಧರಿಸಿದೆ. ಇದಲ್ಲದೆ, ದರ್ಶನ್ ಇರುವ ಜೈಲಿನ ಬಳಿ ಮಾಧ್ಯಮಗಳನ್ನು ನಿಯಂತ್ರಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಸಹ ದರ್ಶನ್ ಕುಟುಂಬ ಅಸಮಾಧಾನ ವ್ಯಕ್ತಪಡಿಸಿದೆ ಎನ್ನಲಾಗುತ್ತಿದೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ತನಿಖೆ ಮುಗಿಸಿರುವ ಪೊಲೀಸರು ಆರೋಪ ಪಟ್ಟಿಯನ್ನು ಸಲ್ಲಿಸಿದ್ದಾಗಿದೆ. ದರ್ಶನ್ ಪರ ವಕೀಲರು ಕೆಲವೇ ದಿನಗಳಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಲಿದ್ದಾರೆ. ಇನ್ನು, ಪ್ರಕರಣವನ್ನು ಫಾಸ್ಟ್ ಕೋರ್ಟ್​ಗೆ ವರ್ಗಾಯಿಸಲು ಸಹ ಚಿಂತನೆ ನಡೆಸಲಾಗಿದೆ ಎನ್ನಲಾಗುತ್ತಿದೆ. ಒಂದೊಮ್ಮೆ ಪ್ರಕರಣವನ್ನು ಫಾಸ್ಟ್ ಕೋರ್ಟ್​ ಅಥವಾ ತ್ವರಿತ ನ್ಯಾಯಾಲಯಕ್ಕೆ ವರ್ಗಾಯಿಸಿದಲ್ಲಿ ಪ್ರಕರಣದ ವಿಚಾರಣೆ ಬೇಗನೆ ಮುಗಿದು ತೀರ್ಪು ಹೊರಬೀಳಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ