ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದಲ್ಲಿ ದಿನಗಳೆದಂತೆ ಒಂದಕ್ಕಿಂತಲೂ ಒಂದು ಭೀಕರ ಘಟನೆಗಳು ಹೊರಬರುತ್ತಿವೆ. ನಿನ್ನೆ (ಜೂನ್ 15) ದರ್ಶನ್ ಹಾಗೂ ಗ್ಯಾಂಗ್ ಅನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾಗ ವಾದ ಮಂಡಿಸಿದ್ದ ವಿಶೇಷ ಅಭಿಯೋಜಕರು, ದರ್ಶನ್ ಮತ್ತು ಗ್ಯಾಂಗ್ನವರು ರೇಣುಕಾ ಸ್ವಾಮಿಗೆ ಎಲೆಕ್ಟ್ರಿಕ್ ಶಾಕ್ ನೀಡಿ ಚಿತ್ರಹಿಂಸೆ ಕೊಟ್ಟಿದ್ದಾರೆ ಎಂಬ ಅಂಶವನ್ನು ಬಯಲುಗೊಳಿಸಿದ್ದರು. ಇಂದು ಅದಕ್ಕಿಂತಲೂ ಹೇಯ ಕೃತ್ಯವನ್ನು ಈ ಗ್ಯಾಂಗ್ ಎಸಗಿರುವ ಅಂಶ ಬಯಲಾಗಿದೆ.
ರೇಣುಕಾ ಸ್ವಾಮಿ ಅಪಹರಣದಲ್ಲಿ ಪ್ರಮುಖ ಪಾತ್ರವಹಿಸಿದ್ದ ಚಿತ್ರದುರ್ಗ ಜಿಲ್ಲೆಯ ದರ್ಶನ್ ಅಭಿಮಾನಿ ಬಳಗದ ಅಧ್ಯಕ್ಷ ರಾಘವೇಂದ್ರ ಎಂಬಾತ ಮಾಡಿರುವ ಕುಕೃತ್ಯವೊಂದು ಇದೀಗ ಬಯಲಾಗಿದೆ. ರೇಣುಕಾ ಸ್ವಾಮಿಯನ್ನು ಅಪಹರಿಸಿ ಶೆಡ್ಗೆ ಕರೆದುಕೊಂಡು ಹೋಗಿ ಹಲ್ಲೆ ಮಾಡಿರುವುದಲ್ಲದೆ, ರೇಣುಕಾ ಸ್ವಾಮಿಯನ್ನು ಕೊಂದ ನಂತರ ಆತನ ಮೈಮೇಲಿದ್ದ ಚಿನ್ನಾಭರಣವನ್ನು ಈ ವ್ಯಕ್ತಿ ದೋಚಿದ್ದಾನೆ ಎನ್ನಲಾಗುತ್ತಿದೆ.
ರೇಣುಕಾ ಸ್ವಾಮಿ ಕೊಲೆ ಕೂಡಲೇ ರಾಘವೇಂದ್ರ ಆ ಸ್ಥಳದಿಂದ ಪರಾರಿ ಆಗಿದ್ದನಂತೆ. ಬಳಿಕ ಆತನಿಗೆ ಕರೆ ಮಾಡಿ 10 ಲಕ್ಷ ರೂಪಾಯಿ ಹಣ ಕೊಡುತ್ತೀವಿ ಎಂದಾಗ ಆತ ವಾಪಸ್ ಬಂದಿದ್ದಾನೆ. ಮೃತದೇಹವನ್ನು ಎಸೆಯಲು ರಾಘವೇಂದ್ರ ಸಹ ಜೊತೆಗೆ ಹೋಗಿದ್ದಾನೆ, ಆ ವೇಳೆ ರೇಣುಕಾ ಸ್ವಾಮಿ ಮೈಮೇಲಿದ್ದ ಚಿನ್ನದ ಆಭರಣಗಳನ್ನು ರಾಘವೇಂದ್ರ ದೋಚಿದ್ದಾನೆ. ಚಿನ್ನದ ಉಂಗುರ, ಚಿನ್ನದ ಸರ, ಬೆಳ್ಳಿ ಕಡಗ ಮತ್ತು ವಾಚುಗಳನ್ನು ತೆಗೆದುಕೊಂಡಿದ್ದಾನೆ.
ಇದನ್ನೂ ಓದಿ:ರೇಣುಕಾ ಸ್ವಾಮಿ ಕೊಲೆ: ಪ್ರಕರಣದ 17 ಆರೋಪಿಗಳು ಎಸಗಿರುವ ಕೃತ್ಯಗಳೇನು?
ತನ್ನ ಪತ್ನಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆಸಿಕೊಂಡಿದ್ದ ರಾಘವೇಂದ್ರ, ಲಾಡ್ಜ್ನಲ್ಲಿ ರೂಂ ಮಾಡಿಕೊಂಡು ಆಕೆಯನ್ನು ಇರಿಸಿದ್ದ. ಅಲ್ಲದೆ ರೇಣುಕಾ ಸ್ವಾಮಿ ಮೈಮೇಲಿದ್ದ ಚಿನ್ನಾಭರಣಗಳನ್ನು ಕದ್ದಿದ್ದ ರಾಘವೇಂದ್ರ ಆ ಆಭರಣಗಳನ್ನು ಆತನ ಪತ್ನಿಗೆ ನೀಡಿದ್ದರು. ಇಂದು ಚಿತ್ರದುರ್ಗಕ್ಕೆ ರಾಘವೇಂದ್ರನನ್ನು ಕರೆತಂದಿರುವ ಪೊಲೀಸರು ಸ್ಥಳ ಮಹಜರು ಮಾಡಿದ್ದು, ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ರೇಣುಕಾ ಸ್ವಾಮಿಯ ಅಪಹರಣದಲ್ಲಿಯೂ ಸಹ ರಾಘವೇಂದ್ರನದ್ದೇ ಪ್ರಮುಖ ಪಾತ್ರವಿತ್ತು. ರಾಘವೇಂದ್ರನೇ ಜಗ್ಗು, ಅನು ಎಂಬ ದರ್ಶನ್ ಅಭಿಮಾನಿಗಳನ್ನು ಸೇರಿಸಿಕೊಂಡು, ರೇಣುಕಾ ಸ್ವಾಮಿಯನ್ನು ಅಪಹರಿಸಿ ಕಾರಿನಲ್ಲಿ ಪಟ್ಟಣಗೆರೆ ಶೆಡ್ಗೆ ಕರೆತಂದು ಬಿಟ್ಟಿದ್ದರು. ಶೆಡ್ನ ಒಳಗೆ ರಾಘವೇಂದ್ರ, ರೇಣುಕಾ ಸ್ವಾಮಿ ಮೇಲೆ ಹಲ್ಲೆ ಸಹ ಮಾಡಿದ್ದ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ