ದರ್ಶನ್ ಪ್ರಕರಣ: ಪತ್ರಕರ್ತನ ಮೇಲೆ ಹಲ್ಲೆ, ದೂರು ದಾಖಲು
ನಟ ದರ್ಶನ್ ತೂಗುದೀಪ ಅವರನ್ನು ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾಗ, ವರದಿ ಮಾಡಲು ತೆರಳಿದ್ದ ಪತ್ರಕರ್ತರೊಬ್ಬರ ಮೇಲೆ ಅಪರಿಚಿತರು ಹಲ್ಲೆ ಮಾಡಿದ್ದಾರೆ. ಕೆಲವರ ಮೊಬೈಲ್ಗಳನ್ನು ಸಹ ಕಿತ್ತುಕೊಳ್ಳಲಾಗಿದೆ.
ದರ್ಶನ್ (Darshan Thoogudeepa) ಕೊಲೆ ಆರೋಪಿಯಾಗಿ ಜೈಲು ಸೇರಿದ್ದಾರೆ. ದರ್ಶನ್ ರೀತಿ ಅವರ ಅಭಿಮಾನಿಗಳು ಸಹ ಒರಟು ಸ್ವಭಾವದವರೇ. ದರ್ಶನ್ ಅನ್ನು ಇರಿಸಲಾಗಿರುವ ಜೈಲಿನ ಬಳಿ, ಕೋರ್ಟ್ಗೆ ಕರೆದುಕೊಂಡು ಹೋದಾಗ ಹಿಂಬಾಲಿಸುವುದು, ‘ಡಿ ಬಾಸ್’ ಘೋಷಣೆಗಳನ್ನು ಕೂಗುವುದು ಮಾಡುತ್ತಲೇ ಇದ್ದಾರೆ. ಸಾಮಾಜಿಕ ಜಾಲತಾಣದಂತೂ ಕೊಲೆ ಆರೋಪಿ ದರ್ಶನ್ ಅವರನ್ನು ಬೆಂಬಲಿಸಿ ಚಿತ್ರ-ವಿಚಿತ್ರ ಪೋಸ್ಟ್ಗಳನ್ನು ಮಾಡುತ್ತಿದ್ದಾರೆ. ಇದೀಗ ದರ್ಶನ್ ಪ್ರಕರಣ ವರದಿ ಮಾಡಲು ತೆರಳಿದ್ದ ಪತ್ರಕರ್ತರೊಬ್ಬರ ಮೇಲೆ ತೀವ್ರವಾಗಿ ಹಲ್ಲೆ ಮಾಡಿರುವ ಆರೋಪಕ್ಕೆ ಕೆಲ ದರ್ಶನ್ ಅಭಿಮಾನಿಗಳು ಗುರಿಯಾಗಿದ್ದಾರೆ.
ನಿನ್ನೆ (ಜೂನ್ 16) ದರ್ಶನ್, ಪವಿತ್ರಾ ಗೌಡ ಹಾಗೂ ಇನ್ನೂ ಹಲವು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಈ ವೇಳೆ ಮ್ಯಾಜಿಸ್ಟ್ರೇಟ್ ಕೋರ್ಟ್ ಆವರಣದಲ್ಲಿ ಭಾರಿ ಸಂಖ್ಯೆಯ ಜನ ಸೇರಿದ್ದರು. ಪತ್ರಕರ್ತರೂ ಸಹ ಸಾಕಷ್ಟು ಸಂಖ್ಯೆಯಲ್ಲಿದ್ದರು. ಈ ವೇಳೆ ಮೊಬೈಲ್ ಹಿಡಿದು ವರದಿ ಮಾಡುತ್ತಿದ್ದ ಇಂಗ್ಲೀಷ್ ಪತ್ರಿಕೆಯ ವರದಿಗಾರನೊಬ್ಬನ ಮೇಲೆ ಅನಾಮಿಕ ಗುಂಪೊಂದು ತೀವ್ರವಾಗಿ ಹಲ್ಲೆ ಮಾಡಿ ಪರಾರಿಯಾಗಿದೆ.
ನೃಪತುಂಗ ರಸ್ತೆಯ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟಿನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದರ್ಶನ್ ಕುರಿತ ವಿಚಾರಣೆ ಆರಂಭವಾಗುವ ಸಮಯದಲ್ಲಿ ಅಲ್ಲಿಯೇ ನೀರಿನ ಟ್ಯಾಂಕ್ ಒಂದರ ಬಳಿ ಪತ್ರಕರ್ತ ರಕ್ಷಿತ್ ಗೌಡ ಎಂಬುವರು ನಿಂತಿದ್ದರು. ಆಗ ಅಲ್ಲಿಗೆ ಬಂದ ಕೆಲವು ಅಪರಿಚಿತರು ನೀನು ಯಾರು ಎಂದು ಪ್ರಶ್ನಿಸಿದ್ದಾರೆ. ಪತ್ರಕರ್ತ ಎಂದಾಗ ರಕ್ಷಿತ್ ಗೌಡ ಮೇಲೆ ಹಲ್ಲೆ ಮಾಡಲು ಆರಂಭಿಸಿದ್ದಾರೆ. ಆ ಅಪರಿಚಿತರು ರಕ್ಷಿತ್ ಗೌಡ ಸುಮಾರು 50 ಮೀಟರ್ ಎಳೆದೊಯ್ದು ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಹಲ್ಲೆಯಿಂದ ರಕ್ಷಿತ್ ಗೌಡ ಮೂಗು, ಬಾಯಿಗಳಲ್ಲಿ ರಕ್ತ ಬಂದಿದೆ.
ಇದನ್ನೂ ಓದಿ:ರೇಣುಕಾ ಸ್ವಾಮಿ ಹತ್ಯೆ ಪ್ರಕರಣ: ಜೂನ್ 20ರವರೆಗೆ ದರ್ಶನ್ ಹಾಗೂ ಗ್ಯಾಂಗ್ ಪೊಲೀಸ್ ಕಸ್ಟಡಿ ಮುಂದುವರಿಕೆ
ರಕ್ಷಿತ್ ಗೌಡ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಅಪರಿಚಿತರು, ಇನ್ನೊಮ್ಮೆ ಕೋರ್ಟ್ ಆವರಣದಲ್ಲಿ ಕಾಣಿಸಿಕೊಂಡರೆ ಕೊಲ್ಲುತ್ತೇವೆಂದು ಬೆದರಿಕೆ ಹಾಕಿದ್ದಾರೆ. ಅಲ್ಲದೆ ಅವರ ಮೊಬೈಲ್ ಅನ್ನು ಸಹ ಕಸಿದುಕೊಂಡು ಪರಾರಿಯಾಗಿದ್ದಾರೆ. ಘಟನೆಯ ಸಂಬಂಧ ರಕ್ಷಿತ್ ಗೌಡ ಹಲಸೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ವರದಿ ಮಾಡಲು ನ್ಯಾಯಾಲಯಕ್ಕೆ ಹೋಗಿದ್ದ ಹಲವು ಪತ್ರಕರ್ತರಿಗೆ ಕಹಿ ಅನುಭವ ಆಗಿದೆ ಎನ್ನಲಾಗುತ್ತಿದೆ. ಹಲವು ವರದಿಗಾರರಿಂದ ಅವರ ಮೊಬೈಲ್ ಗಳನ್ನು ಕೆಲವು ಅಪರಿಚಿತರು ಕಸಿದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಅದಾದ ಬಳಿಕ ಪೊಲೀಸರು ಮಧ್ಯ ಪ್ರವೇಶಿಸಿ ಕೆಲವರ ಮೊಬೈಲ್ಗಳನ್ನು ಮರಳಿ ಕೊಡಿಸಿದ್ದಾರೆ. ಹೀಗೆ ಮೊಬೈಲ್ಗಳನ್ನು ಏಕೆ ಕಸಿದುಕೊಳ್ಳಲಾಯ್ತು ಎಂಬುದು ತಿಳಿದು ಬರಬೇಕಿದೆ.
ದರ್ಶನ್ ಬಂಧನವಾಗಿದ್ದ ದಿನ, ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಬಳಿ ಪೊಲೀಸ್ ಅಧಿಕಾರಿಯೊಬ್ಬರು ಪತ್ರಕರ್ತರೊಬ್ಬರ ಮೇಲೆ ಹಲ್ಲೆ ಮಾಡಿದ್ದು ವರದಿಯಾಗಿತ್ತು. ಈಗ ದರ್ಶನ್ ಅಭಿಮಾನಿಗಳು ಎನ್ನಲಾಗುತ್ತಿರುವ ಕೆಲವು ಅಪರಿಚಿತರು ಹಲ್ಲೆ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ