ಮೂರು ತಿಂಗಳಲ್ಲಿ 15 ಕೆಜಿ ತೂಕ ಕಳೆದುಕೊಂಡ ದರ್ಶನ್

|

Updated on: Sep 01, 2024 | 10:00 AM

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ತೂಗುದೀಪ ಬಂಧನವಾಗಿ ಮೂರು ತಿಂಗಳಾಗುತ್ತಾ ಬಂದಿದೆ. ಈ ಮೂರು ತಿಂಗಳಲ್ಲಿ ನಟ ದರ್ಶನ್ 15 ಕೆಜಿ ತೂಕ ಕಳೆದುಕೊಂಡಿದ್ದಾರೆ. ಈಗ ಬಳ್ಳಾರಿ ಜೈಲಿನಲ್ಲಿಯೂ ಕೆಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಮೂರು ತಿಂಗಳಲ್ಲಿ 15 ಕೆಜಿ ತೂಕ ಕಳೆದುಕೊಂಡ ದರ್ಶನ್
Follow us on

ರೇಣುಕಾ ಸ್ವಾಮಿ ಕೊಲೆ ಆರೋಪದಲ್ಲಿ ದರ್ಶನ್ ಬಂಧನವಾಗಿ ಮೂರು ತಿಂಗಳಾಗುತ್ತಾ ಬಂದಿದೆ. ಹೊರಗೆ ಸ್ವಚ್ಛಂದವಾಗಿ ಗೆಳೆಯರೊಟ್ಟಿಗೆ ಪಾರ್ಟಿ ಮಾಡುತ್ತಾ, ಸಿನಿಮಾ ಚಿತ್ರೀಕರಣ ಮಾಡುತ್ತಾ, ಅಭಿಮಾನಿಗಳ ಹೊಗಳಿಕೆಗಳಿಕೆಗಳಲ್ಲಿ ತೇಲಾಡುತ್ತಾ ಆರಾಮದಿಂದ ಇದ್ದ ನಟ ದರ್ಶನ್ ಜೈಲಿನ ಸೀಮಿತ ಸೌಲಭ್ಯಗಳ ಪರಿಸ್ಥಿತಿಯಲ್ಲಿ, ಐಶಾರಾಮಿ ಬದುಕಿನಿಂದ ದೂರಾಗಿ ಬದುಕು ನಡೆಸುತ್ತಿದ್ದಾರೆ. ಜೈಲು ವಾಸ ದರ್ಶನ್​ರ ಮನಸ್ಸಿನ ಮೇಲೆ ಪರಿಣಾಮ ಬೀರಿದೆಯೋ ಇಲ್ಲವೊ ಆದರೆ ದೇಹದ ಮೇಲೆ ಪರಿಣಾಮ ಬೀರಿದೆ. ಜೈಲು ಸೇರಿದಾಗಿನಿಂದ ಸುಮಾರು 15 ಕೆಜಿ ತೂಕ ಕಳೆದುಕೊಂಡಿದ್ದಾರೆ ನಟ ದರ್ಶನ್.

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅನ್ನು ಜೂನ್ 11 ರಂದು ಬಂಧಿಸಲಾಗಿತ್ತು. 14 ದಿನಗಳ ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು ಆಗಿನಿಂದಲೂ ಜೈಲಿನಲ್ಲೇ ಕಾಲ ಕಳೆಯುತ್ತಿದ್ದಾರೆ ದರ್ಶನ್. ಜೈಲಿನ ಊಟ, ಏಕಾಂಗಿತನದಿಂದ ದರ್ಶನ್ ದೇಹತೂಕ ಕಳೆದುಕೊಂಡಿದ್ದಾರೆ. ಜೈಲಿಗೆ ಹೋಗುವ ಮುಂಚೆ ಇದ್ದ ತೂಕಕ್ಕಿಂತಲೂ ಸುಮಾರು 15 ಕೆಜಿ ತೂಕವನ್ನು ನಟ ದರ್ಶನ್ ಕಳೆದುಕೊಂಡಿದ್ದಾರೆ. ಜೈಲಿಗೆ ಹೋಗುವಾಗ ದರ್ಶನ್ ಇದ್ದ ತೂಕಕ್ಕೂ ಮೊಮ್ಮೆ ಬಳ್ಳಾರಿ ಜೈಲಿಗೆ ಬಂದಾಗ ಮತ್ತೆ ತೂಕ ಹಾಕಲಾಗಿದ್ದು, ಎರಡರ ನಡುವೆ ಅಂತರ 15 ಕೆಜಿ ಇದೆ. ಬಳ್ಳಾರಿ ಜೈಲಿನಲ್ಲಿ ದರ್ಶನ್ ಇನ್ನಷ್ಟು ತೂಕ ಕಳೆದುಕೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ:ಪತಿ ದರ್ಶನ್​ಗಾಗಿ ಏನೇನು ತಂದಿದ್ದರು ವಿಜಯಲಕ್ಷ್ಮಿ? ಆ ವಸ್ತು ವಾಪಸ್ ಕಳಿಸಿದ್ದೇಕೆ?

ಇನ್ನು ದರ್ಶನ್ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರ ಬಗ್ಗೆ ಜೈಲು ಅಧಿಕಾರಿಗಳ ಬಳಿ ಚಿಕಿತ್ಸೆ ಹಾಗೂ ಕೆಲವು ಸೌಲಭ್ಯಗಳಿಗೆ ಮನವಿ ಮಾಡಿದ್ದಾರೆ. ಬೆನ್ನು ನೋವಿರುವ ಕಾರಣ, ಭಾರತೀಯ ಶೈಲಿಯ ಶೌಚಾಲಯ ಬಳಸಲಾಗದು, ಪಾಶ್ಚಾತ್ಯ ಶೈಲಿಯ ಟಾಯ್ಲೆಟ್ ವ್ಯವಸ್ಥೆ ಮಾಡಿಕೊಡಿ ಎಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಡಿಐಜಿ ಶೇಷಾ ಅವರು, ಬೆನ್ನು ನೋವಿಗೆ ಜೈಲು ವೈದ್ಯರೇ ಚಿಕಿತ್ಸೆ ನೀಡಲಿದ್ದಾರೆ. ಬೆನ್ನು ನೋವಿನ ಈ ಹಿಂದಿನ ಚಿಕಿತ್ಸೆಗಳ ಮಾಹಿತಿ ಕೇಳಿದ್ದೇವೆ ಅದನ್ನು ಪರಿಶೀಲಿಸಿ ಜೈಲಿನ ವೈದ್ಯರೇ ಚಿಕಿತ್ಸೆ ನೀಡಲಿದ್ದಾರೆ ಎಂದಿದ್ದಾರೆ. ಇನ್ನು ಪಾಶ್ಚಾತ್ಯ ಟಾಯ್ಲೆಟ್​ಗೆ ಅಥವಾ ಸರ್ಜಿಕಲ್ ಚೇರ್ ವ್ಯವಸ್ಥೆ ಮಾಡಲಾಗುವುದು ಎಂದಿದ್ದಾರೆ.

ಇನ್ನು ದರ್ಶನ್ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಚಾರ್ಜ್ ಶೀಟ್ ಸಿದ್ಧಪಡಿಸಿದ್ದು ಕೆಲವೇ ದಿನಗಳಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಿದ್ದಾರೆ. ಹೈದರಾಬಾದ್​ನ ವಿಧಿ ವಿಜ್ಞಾನ ಪ್ರಯೋಗಾಲಯದಿಂದ ಪ್ರಕರಣಕ್ಕೆ ಸಂಬಂಧಿಸಿದ ಎಂಟು ವರದಿಗಳು ಬರುವುದು ಬಾಕಿ ಇದೆ. ಆದರೆ ಆ ವರದಿಗಳು ಬರುವುದು ತಡವಾಗುತ್ತಿರುವ ಕಾರಣ ಚಾರ್ಜ್ ಶೀಟ್ ಸಲ್ಲಿಕೆ ಮಾಡಲು ಪೊಲೀಸರು ಮುಂದಾಗಿದ್ದಾರೆ. 90 ದಿನಗಳ ಒಳಗಾಗಿ ಚಾರ್ಜ್ ಶೀಟ್ ಸಲ್ಲಿಸಬೇಕೆಂಬ ನಿಯಮವಿರುವ ಕಾರಣ ಪೊಲೀಸರು ನಿಗದಿತ ಸಮಯದ ಒಳಗಾಗಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಿದ್ದಾರೆ. ಆ ಬಳಿಕ ದರ್ಶನ್ ಹಾಗೂ ಇತರೆ ಆರೋಪಿಗಳು ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಈಗಾಗಲೇ ಪವಿತ್ರಾ ಸೇರಿದಂತೆ ಕೆಲವು ಆರೋಪಿಗಳು ಜಾಮೀನಿಗೆ ಅರ್ಜಿ ಸಲ್ಲಿಸಿದ್ದು ಆ ಅರ್ಜಿಗಳನ್ನು ನ್ಯಾಯಾಲಯ ತಳ್ಳಿ ಹಾಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ