ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿ ನಾಲ್ಕು ತಿಂಗಳಾಗಿವೆ. ಅವರ ಕುಟುಂಬದವರು ದರ್ಶನ್ ಅನ್ನು ಕನಿಷ್ಟ ಜಾಮೀನಿನ ಮೇಲಾದರೂ ಹೊರಗೆ ತರುವ ಪ್ರಯತ್ನದಲ್ಲಿದ್ದಾರೆ. ದರ್ಶನ್, ಜೈಲು ಸೇರಿರುವುದರಿಂದ ಅಭಿಮಾನಿಗಳು ಸಹ ಬೇಸರದಲ್ಲಿದ್ದಾರೆ. ಇದೇ ಸಮಯವನ್ನು ಸದುಪಯೋಗಪಡಿಸಿಕೊಂಡಿರುವ ಕೆಲ ನಿರ್ಮಾಪಕರು, ಅಭಿಮಾನಿಗಳ ಸೆಂಟಿಮೆಂಟ್ ಅನ್ನೇ ಬಂಡವಾಳವಾಗಿಟ್ಟುಕೊಂಡು ದರ್ಶನ್ ನಟನೆಯ ಕೆಲ ಹಳೆಯ ಸಿನಿಮಾಗಳನ್ನು ಮರು ಬಿಡುಗಡೆ ಮಾಡುತ್ತಿದ್ದಾರೆ.
ದರ್ಶನ್ ಬಂಧನವಾದ ಬಳಿಕ ದರ್ಶನ್ರ ಕೆಲ ಸಿನಿಮಾಗಳು ಮರು ಬಿಡುಗಡೆ ಆಗಿದೆ. ‘ಶಾಸ್ತ್ರಿ’, ‘ಕರಿಯ’ ಇನ್ನೂ ಕೆಲ ಸಿನಿಮಾಗಳು ಮರು ಬಿಡುಗಡೆ ಆಗಿವೆ. ಇತ್ತೀಚೆಗಷ್ಟೆ ವಿಜಯಲಕ್ಷ್ಮಿ ದರ್ಶನ್ ಅವರು ‘ನವಗ್ರಹ’ ಸಿನಿಮಾ ಶೀಘ್ರವೇ ಮರು ಬಿಡುಗಡೆ ಆಗುವುದಾಗಿ ಇನ್ಸ್ಟಾಗ್ರಾಂನಲ್ಲಿ ಸಂದೇಶ ಹಂಚಿಕೊಂಡಿದ್ದರು. ಇದೀಗ ಹೊಸ ಸುದ್ದಿಯೆಂದರೆ ದರ್ಶನ್ ನಟನೆಯ ‘ನಮ್ಮ ಪ್ರೀತಿಯ ರಾಮು’ ಸಿನಿಮಾ ಸಹ ಮರು ಬಿಡುಗಡೆ ಆಗಲಿದೆ.
ಇದನ್ನೂ ಓದಿ:ದರ್ಶನ್ ವಿರುದ್ಧದ ಕೊಲೆ ಪ್ರಕರಣದ ಬಗ್ಗೆ ಕೋಡಿಶ್ರೀ ಸ್ಫೋಟಕ ಮಾತು
ಆಕ್ಷನ್ ಸ್ಟಾರ್ ಆಗಿದ್ದ ದರ್ಶನ್, ಮೊದಲ ಬಾರಿಗೆ ಆಕ್ಷನ್ ಬಿಟ್ಟು, ನಟನೆಗೆ ಒತ್ತು ಇರುವ ಪಾತ್ರದಲ್ಲಿ ನಟಿಸಿದ ಸಿನಿಮಾ ‘ನಮ್ಮ ಪ್ರೀತಿಯ ರಾಮು’. ಇಳಯರಾಜ ಸಂಗೀತ ನೀಡಿದ್ದ ಈ ಸಿನಿಮಾವನ್ನು ಸಂಜಯ್-ವಿಜಯ್ ಅವರುಗಳು ನಿರ್ದೇಶನ ಮಾಡಿದ್ದರು. ನಂದಕುಮಾರ್ ಮತ್ತು ರಾಮೇಗೌಡ ನಿರ್ಮಾಣ ಮಾಡಿದ್ದರು. ಸಿನಿಮಾ ಹಿಟ್ ಎನಿಸಿಕೊಂಡಿತ್ತು. ಹಾಡುಗಳು ಸಹ ಜನಪ್ರಿಯವಾಗಿದ್ದವು. ಈಗ ಈ ಸಿನಿಮಾ ಮರು ಬಿಡುಗಡೆ ಆಗುತ್ತಿವೆ ಅದೂ ನವೆಂಬರ್ 1 ರ ಕನ್ನಡ ರಾಜ್ಯೋತ್ಸವಕ್ಕೆ.
ದರ್ಶನ್ ಬಂಧನವಾಗುವ ಮುಂಚೆ ‘ಡೆವಿಲ್’ ಸಿನಿಮಾದಲ್ಲಿ ನಟಿಸುತ್ತಿದ್ದರು. ನಿರ್ದೇಶಕ ಮಿಲನ ಪ್ರಕಾಶ್ಗೆ ಇದು ಕಮ್ಬ್ಯಾಕ್ ಸಿನಿಮಾ ಆಗುವುದರಲ್ಲಿತ್ತು. ಆದರೆ ಸಿನಿಮಾದ ಚಿತ್ರೀಕರಣ ಜಾರಿಯಲ್ಲಿರುವಾಗಲೇ ದರ್ಶನ್ ಬಂಧನವಾಗಿ ಸಿನಿಮಾ ನಿಂತು ಹೋಯ್ತು. ನಾಲ್ಕು ತಿಂಗಳಿನಿಂದಲೂ ಚಿತ್ರೀಕರಣ ನಡೆದಿಲ್ಲ. ಬಂಧನಕ್ಕೆ ಮುನ್ನ ಕೆಲ ಭಾಗದ ಚಿತ್ರೀಕರಣ ಮಾತ್ರವೇ ನಡೆದಿತ್ತು. ದರ್ಶನ್ ಹೊರ ಬರುವವರೆಗೆ ಸಿನಿಮಾದ ಚಿತ್ರೀಕರಣ ನಡೆಯುವುದಿಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ