ಪ್ರೀತಿಯ ಸೆಲೆಬ್ರಿಟಿಗಳಿಗೆ ಬಹಿರಂಗ ಪತ್ರ ಬರೆದ ದರ್ಶನ್

|

Updated on: Feb 18, 2025 | 11:59 AM

Darshan Thoogudeepa: ದರ್ಶನ್ ಜೈಲಿಗೆ ಹೋದ ಬಳಿಕ ಅವರ ಅಭಿಮಾನಿಗಳ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುವಂಥಹಾ ಘಟನೆಗಳು ನಡೆದಿದ್ದವು. ದರ್ಶನ್ ಅನ್ನು ಅವರ ಅಭಿಮಾನಿಗಳೇ ಹಾಳು ಮಾಡಿದ್ದಾರೆಂಬ ಮಾತುಗಳು ಸಹ ಕೇಳಿ ಬಂದವು. ದರ್ಶನ್ ಸಹ ಜೈಲಿನಿಂದ ಹೊರಬಂದ ಬಳಿಕ ಅಭಿಮಾನಿಗಳ ಬಗ್ಗೆ ಯಾವುದೇ ಪೋಸ್ಟ್ ಹಂಚಿಕೊಂಡಿರಲಿಲ್ಲ. ಇದೀಗ ಅಭಿಮಾನಿಗಳಿಗೆ ಧನ್ಯವಾದ ಹೇಳಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಪ್ರೀತಿಯ ಸೆಲೆಬ್ರಿಟಿಗಳಿಗೆ ಬಹಿರಂಗ ಪತ್ರ ಬರೆದ ದರ್ಶನ್
Darshan Thoogudeepa
Follow us on

ನಟ ದರ್ಶನ್ ಹುಟ್ಟುಹಬ್ಬ (ಫೆಬ್ರವರಿ 16) ನಡೆದಿದೆ. ಈ ಬಾರಿ ಅತ್ಯಂತ ಸರಳವಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ ದರ್ಶನ್. ಯಾವ ಅಭಿಮಾನಿಗಳನ್ನೂ ಸಹ ಭೇಟಿಯಾಗದೆ ಸರಳವಾಗಿ ಕುಟುಂಬ ಮತ್ತು ಕೆಲವೇ ಕೆಲವು ಗೆಳೆಯರ ಜೊತೆಗೂಡಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ. ಹುಟ್ಟುಹಬ್ಬಕ್ಕೆ ಕೆಲ ದಿನಗಳ ಮುಂಚಿತವಾಗಿಯೇ ವಿಡಿಯೋ ಹಂಚಿಕೊಂಡಿದ್ದ ದರ್ಶನ್, ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿಲ್ಲ ಎಂದಿದ್ದರು. ಇದೀಗ ಹುಟ್ಟುಹಬ್ಬ ಆಗಿ ಎರಡು ದಿನಗಳ ಬಳಿಕ ಪ್ರೀತಿಯ ಅಭಿಮಾನಿಗಳಿಗಾಗಿ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ.

ಅಭಿಮಾನಿಗಳನ್ನು ಸೆಲೆಬ್ರಿಟಿಗಳು ಎಂದೇ ಕರೆಯುವ ದರ್ಶನ್, ‘ಪ್ರೀತಿಯ ಸೆಲೆಬ್ರಿಟಿಗಳೇ, ನಿಮ್ಮ ಬಗ್ಗೆ ಎಷ್ಟು ಹೇಳಿದರೂ ಕಡಿಮೆ ಎಂದು ಭಾಸವಾಗುತ್ತದೆ. ಕಷ್ಟದಲ್ಲಿದ್ದಾಗ ಸದಾ ಬೆಂಬಲದಲ್ಲಿ ನಿಲ್ಲುವಂತ ಈ ನಿಷ್ಕಲ್ಮಶ ಹೃದಯಗಳಿಗೆ ನಾನು ಸದಾ ಚಿರಋಣಿ. ನಿಮ್ಮ ಪ್ರೀತಿ-ಪ್ರೋತ್ಸಾಹ ಮತ್ತು ಬೆಂಬಲವೇ ನನ್ನ ಜೀವನದ ನಿಜವಾದ ಆಸ್ತಿ. ನನ್ನ ಹುಟ್ಟುಹಬ್ಬವನ್ನು ವಿಶೇಷವಾಗಿಸುವ ನಿಮ್ಮ ಪ್ರೀತಿಯ ಆಶೀರ್ವಾದಕ್ಕೆ ನಾನು ಮನದಾಳದಿಂದ ಕೃತಜ್ಞನಾಗಿದ್ದೇನೆ. ನೀವು ಹಲವೆಡೆ ಮಾಡುತ್ತಿರುವ ದಾನ-ಧರ್ಮ ಕಾರ್ಯಗಳು ಸಹಸ್ರಾರು ಹೃದಯಗಳನ್ನು ಸ್ಪರ್ಶಿಸುವಂತಹದ್ದು. ನಿಮ್ಮ ಈ ಕೆಲಸಗಳು ಅನೇಕರಿಗೆ ದಾರಿದೀಪವಾಗಲಿ’ ಎಂದಿದ್ದಾರೆ.

‘ನಿಮ್ಮ ಮನದಾಳದ ಪ್ರೀತಿಯ ಹಾರೈಕೆಗಳು ನನ್ನ ಮುಂದಿನ ಹೆಜ್ಜೆಗೆ ದಾರಿ ತೋರುವ ಬೆಳಕು ಎಂದರೆ ಅತಿಶಯೋಕ್ತಿಯಲ್ಲ. ಆದಷ್ಟು ಬೇಗ ನಿಮ್ಮನ್ನು ಕಾಣುವ ಹಂಬಲ, ಕಾತುರ ನನ್ನಲಿಯೂ ಇದೆ. ನಿಮ್ಮನ್ನು ಪಡೆದಿರುವ ನಾನೇ ಧನ್ಯ’ ಎಂದಿದ್ದಾರೆ ದರ್ಶನ್.

ಇದನ್ನೂ ಓದಿ:ದರ್ಶನ್ ಸಿನಿಮಾದ ಹಾಡು ಹೇಳುತ್ತಾ ಮೈ ಮರೆತ ರಚಿತಾ ರಾಮ್

ದರ್ಶನ್​ ಜೈಲಿಗೆ ಹೋದಾಗ ಅವರ ಅಭಿಮಾನಿಗಳು, ಪೊಲೀಸ್ ಠಾಣೆ, ಜೈಲಿನ ಬಳಿ ಕಾದು ನಿಲ್ಲುತ್ತಿದ್ದರು. ದರ್ಶನ್ ಬಿಡುಗಡೆ ಆಗಲೆಂದು ಕೆಲವರು ಪೂಜೆ ಸಹ ಮಾಡಿಸಿದ್ದರು. ಆದರೆ ಅದೇ ಸಮಯದಲ್ಲಿ ಅವರ ಹಲವು ಅಭಿಮಾನಿಗಳು, ಪೊಲೀಸರ ವಿರುದ್ಧ, ಮಾಧ್ಯಮಗಳ ವಿರುದ್ಧ ಪೋಸ್ಟ್​ಗಳನ್ನು ಹಂಚಿಕೊಳ್ಳುವುದು, ಘೋಷಣೆಗಳನ್ನು ಕೂಗುವುದು ಮಾಡಿದ್ದರು. ಕೊಲೆಯಾದ ರೇಣುಕಾ ಸ್ವಾಮಿ ಪರವಾಗಿ ಮಾತನಾಡಿದ ಸೆಲೆಬ್ರಿಟಿಗಳ ವಿರುದ್ಧವೂ ಅವಾಚ್ಯ ಶಬ್ದಗಳನ್ನು ಬಳಸಿ ಪೋಸ್ಟ್​ಗಳನ್ನು ಹಂಚಿಕೊಂಡಿದ್ದರು.

ದರ್ಶನ್ ಜೈಲಿಗೆ ಹೋದ ಬಳಿಕ ದರ್ಶನ್ ಅಭಿಮಾನಿಗಳ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿತ್ತು. ದರ್ಶನ್ ಅನ್ನು ಅವರ ಅಭಿಮಾನಿಗಳೇ ಹಾಳು ಮಾಡಿದ್ದಾರೆಂಬ ಮಾತುಗಳು ಸಹ ಕೇಳಿ ಬಂದವು. ದರ್ಶನ್ ಸಹ ಜೈಲಿನಿಂದ ಹೊರಬಂದ ಬಳಿಕ ಅಭಿಮಾನಿಗಳ ಬಗ್ಗೆ ಯಾವುದೇ ಪೋಸ್ಟ್ ಹಂಚಿಕೊಂಡಿರಲಿಲ್ಲ. ಇದೀಗ ಅಭಿಮಾನಿಗಳಿಗೆ ಧನ್ಯವಾದ ಹೇಳಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ