ಸಿನಿಮಾ, ರಾಜಕೀಯ, ಕುಟುಂಬ: ದರ್ಶನ್ಗಿದ್ದ ಯೋಜನೆಗಳ ಬಿಚ್ಚಿಟ್ಟ ಬಾಲ್ಯದ ಗೆಳೆಯ ಕಾಡು ಶಿವ
ಪರಪ್ಪನ ಅಗ್ರಹಾರದಲ್ಲಿ ದರ್ಶನ್ ತೂಗುದೀಪ ಅವರನ್ನು ಭೇಟಿಯಾದ ಕೆಲವು ವ್ಯಕ್ತಿಗಳಲ್ಲಿ ಅವರ ಬಾಲ್ಯದ ಗೆಳೆಯ ಕಾಡು ಶಿವ ಒಬ್ಬರು. ದರ್ಶನ್, ಜೈಲಿನಲ್ಲಿ ಬಡುತ್ತಿರುವ ನೋವಿನ ಬಗ್ಗೆ, ದರ್ಶನ್ ಇದ್ದ ಯೋಜನೆಗಳ ಬಗ್ಗೆ ಕಾಡು ಶಿವ ಮಾತನಾಡಿದ್ದಾರೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿ ನಟ ದರ್ಶನ್ ಜೈಲಿನಲ್ಲಿದ್ದಾರೆ. ದರ್ಶನ ಅವರನ್ನು ಭೇಟಿಯಾಗಲು ಅಭಿಮಾನಿಗಳು ಸೇರಿದಂತೆ ಹಲವರು ಜೈಲಿಗೆ ಬಂದು ಹೋಗುತ್ತಿದ್ದಾರೆ. ಆದರೆ ಕುಟುಂಬ ಸದಸ್ಯರು ಮತ್ತು ಆಯ್ದ ಕೆಲವರನ್ನು ಬಿಟ್ಟರೆ ದರ್ಶನ್ ಇನ್ಯಾರನ್ನೂ ಭೇಟಿ ಆಗಿಲ್ಲ. ಕೆಲವು ಸಿನಿಮಾ ನಟ, ನಿರ್ಮಾಪಕರು ಸಹ ದರ್ಶನ್ ಅನ್ನು ಜೈಲಿನಲ್ಲಿ ಭೇಟಿ ಆಗಲು ಸಾಧ್ಯವಾಗಿಲ್ಲ, ಸ್ವತಃ ದರ್ಶನ್ ಆಯ್ದ ವ್ಯಕ್ತಿಗಳನ್ನಷ್ಟೆ ಭೇಟಿ ಆಗುತ್ತಿದ್ದಾರೆ. ಜೈಲಿನಲ್ಲಿ ದರ್ಶನ್ ಅವರನ್ನು ಭೇಟಿಯಾದ ಕೆಲವೇ ವ್ಯಕ್ತಿಗಳಲ್ಲಿ ಬಾಲ್ಯದ ಗೆಳೆಯ ಕಾಡು ಶಿವು ಸಹ ಒಬ್ಬರು.
ದರ್ಶನ್ ಅವರನ್ನು ದಶಕಗಳಿಂದಲೂ ನೋಡಿಕೊಂಡು ಬಂದಿರುವ ಕಾಡು ಶಿವು ತಮ್ಮ ಹಾಗೂ ದರ್ಶನ್ರ ನಡುವಿನ ಬಾಂಧವ್ಯದ ಜೊತೆಗೆ ದರ್ಶನ್ಗೆ ಇದ್ದ ಯೋಚನೆಗಳು, ಮಗನ ಬಗ್ಗೆ ಇದ್ದ ಆಸೆ ಇನ್ನೂ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ‘ಮೈಸೂರಿನ ಇಟ್ಟಿಗೆ ಗೂಡಿದಂತೂ ದರ್ಶನ್ ಅವರನ್ನು ನೋಡಿದ್ದೀನಿ. ನಮ್ಮದು ಬಹಳ ಹಳೆಯ ಬಾಂಧವ್ಯ. ಮೈಸೂರಿನ ಪ್ರಭಾ ಥಿಯೇಟರ್ ನಲ್ಲಿ ಸಿನಿಮಾ ನಟರ ಕಟೌಟ್ ನೋಡಿ ನಂದೂ ಹೀಗೆ ಕಟೌಟ್ ನಿಲ್ಲುತ್ತೆ ಅಂತ ಹೇಳಿಕೊಂಡಿದ್ದರು, ಹಾಗೆಯೇ ಆಯಿತು’ ಎಂದಿದ್ದಾರೆ.
‘ದರ್ಶನ್ ಹಲವು ಯೋಜನೆಗಳನ್ನು ಹಾಕಿಕೊಂಡಿದ್ದರು. ಬಂಡಿಯಲ್ಲಿ ಮಹದೇಶ್ವರನ ಬೆಟ್ಟಕ್ಕೆ ಹೋಗಬೇಕು ಎಂದುಕೊಂಡಿದ್ದರು. ಜೂನ್ ತಿಂಗಳಲ್ಲಿ ಬಂಡಿಗಳನ್ನು ಕಟ್ಟಿಕೊಂಡು ಮಹದೇಶ್ವರ ಬೆಟ್ಟಕ್ಕೆ ಹೋಗುವ ಯೋಜನೆ ಹಾಕಿಕೊಂಡಿದ್ದರು ಆದರೆ ಅಷ್ಟರಲ್ಲಾಗಲೆ ಹೀಗಾಯ್ತು. ದರ್ಶನ್ ಅವನ ಸ್ವಂತ ವಿಷಯಕ್ಕೆ ಎಂದೂ ಸಮಸ್ಯೆಗೆ ಸಿಕ್ಕಿಕೊಂಡವರಲ್ಲ, ಯಾವಾಗಲೂ ಬೇರೆಯವರ ವಿಷಯಕ್ಕೆ ಸಮಸ್ಯೆಗೆ ಸಿಕ್ಕಿರುವುದು ಹೆಚ್ಚು’ ಎಂದಿದ್ದಾರೆ ಕಾಡು ಶಿವ.
ಇದನ್ನೂ ಓದಿ:ದರ್ಶನ್ಗೆ ಜಾಮೀನು ಏಕೆ ನೀಡಬಾರದು ಎಂಬುದಕ್ಕೆ ಕಾರಣಗಳ ಪಟ್ಟಿಯನ್ನೇ ಸಿದ್ಧಪಡಿಸಿದ ಪೊಲೀಸರು
‘ಮಗನ ಬಗ್ಗೆ ದರ್ಶನ್ಗೆ ಬಹಳ ಕನಸುಗಳು ಇವೆ. ನನ್ನ ರೀತಿಯಲ್ಲಿಯೇ ಕಷ್ಟಪಟ್ಟೆ ಅವನು ಸಿನಿಮಾ ರಂಗ ಪ್ರವೇಶಿಸಬೇಕು, ಒಂದೇ ಬಾರಿಗೆ ನಾಯಕ ನಟ ಆಗಬಾರದು ಮೊದಲು ಬೇರೆ-ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡಿ ಅನುಭವ ಪಡೆದುಕೊಂಡು ಬಳಿಕ ಅಷ್ಟೆ ಸಿನಿಮಾ ನಟನಾಗಬೇಕು ಎಂದುಕೊಂಡಿದ್ದರು. ವಿಜಯಲಕ್ಷ್ಮಿ ಅವರೊಟ್ಟಿಗೂ ಸಹ ದರ್ಶನ್ ಚೆನ್ನಾಗಿದ್ದರು. ಸಿನಿಮಾಗಳು ಚೆನ್ನಾಗಿ ನಡೆಯುತ್ತಿದ್ದವು, ಸಿನಿಮಾಗಳಲ್ಲಿ ಬೇಡಿಕೆ ಕಡಿಮೆಯಾದಾಗ ರಾಜಕೀಯಕ್ಕೆ ಬರುವ ಯೋಚನೆಯೂ ಇತ್ತು. ಎಲ್ಲವೂ ಚೆನ್ನಾಗಿ ನಡೆಯುವಾಗ ಹೀಗಾಗಿದೆ. ’ ಎಂದಿದ್ದಾರೆ.
‘ಜೈಲಿನಲ್ಲಿ ನಾಲ್ಕು ಗೋಡೆ ಮಧ್ಯೆ ಕಾಲ ಕಳೆಯೋದು ದರ್ಶನ್ಗೆ ಕಷ್ಟವಾಗುತ್ತಿದೆ. ಯಾವಾಗಲೂ ಗೆಳೆಯರ ಜೊತೆ ಇದ್ದ ವ್ಯಕ್ತಿ ಅವರು. ಈಗ ಎಲ್ಲರಿಗೂ ಪಶ್ಚಾತಾಪ ಇದೆ, ನಾವು ಅವರೊಡನೆ ಮಾತಾಡುವಾಗ ಯಾವತ್ತೂ ನೋವ್ ತೋರಿಸ್ಕೊಂಡಿರಲಿಲ್ಲ. ನಮಗೆ ಅವರ ಸ್ಥಿತಿ ನೋಡಿ ತುಂಬಾ ನೋವಾಯ್ತು, ಪ್ರಕರಣದ ಇತರೆ ಆರೋಪಿಗಳಾದ ನಾಗರಾಜ್, ಲಕ್ಷ್ಮಣ್ ಸಹ ಪರಿಚಿತರೇ ಅವರಿಗೆಲ್ಲ ಬಹಳ ಪಶ್ಚಾತ್ತಾಪ ಆಗಿದೆ. ಅವರನ್ನೆಲ್ಲ ನೋಡಲು ಆಗುತ್ತಿಲ್ಲ’ ಎಂದಿದ್ದಾರೆ ಶಿವ. ಇನ್ನು ಜೈಲಿನಲ್ಲಿ ದರ್ಶನ್ ತಲೆ ಬೋಳಿಸಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ ಅದು ಸುಳ್ಳು, ದರ್ಶನ್ ತಲೆ ಕೂದಲು ಗುಂಡು ಹೊಡೆಸಿಲ್ಲ, ಮೆಂಟೇನ್ ಮಾಡೋಕೆ ಆಗದೆ ಕಟ್ ಮಾಡಿಸಿದ್ದಾರೆ’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ