ಕೊಲೆ ಆರೋಪ ಎದುರಿಸುತ್ತಿರುವ ನಟ ದರ್ಶನ್ ತೂಗುದೀಪ ಜೈಲು ಸೇರಿರುವುದು ಅವರ ಅಭಿಮಾನಿಗಳಿಗೆ ಮತ್ತು ಆಪ್ತರಿಗೆ ನೋವುಂಟು ಮಾಡಿದೆ. ರೇಣುಕಾ ಸ್ವಾಮಿ ಎಂಬ ವ್ಯಕ್ತಿಯ ಕೊಲೆ ಕೇಸ್ನಲ್ಲಿ ದರ್ಶನ್ ಎ2 ಆಗಿದ್ದಾರೆ. ಅವರ ಸ್ನೇಹಿತೆ ಪವಿತ್ರಾ ಗೌಡ ಎ1 ಆಗಿದ್ದು, ಅವರು ಕೂಡ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಪರಪ್ಪನ ಅಗ್ರಹಾರದಲ್ಲಿ ಇರುವ ದರ್ಶನ್ ಅವರನ್ನು ನೋಡಬೇಕು ಎಂದು ಅನೇಕ ಅಭಿಮಾನಿಗಳು ಹಂಬಲಿಸುತ್ತಿದ್ದಾರೆ. ಆದರೆ ಅವರನ್ನು ಭೇಟಿ ಮಾಡುವ ಅವಕಾಶ ಸಿಗುತ್ತಿರುವುದು ಕುಟುಂಬದವರಿಗೆ ಮಾತ್ರ. ಈಗ ದರ್ಶನ್ ಅವರ ಜೊತೆ ಮಾತನಾಡಿ ಬಂದಿರುವ ಪತ್ನಿ ವಿಜಯಲಕ್ಷ್ಮಿ ಅವರು ಅಭಿಮಾನಿಗಳಿಗೆ ಮುಖ್ಯವಾದ ಒಂದು ಸಂದೇಶ ನೀಡಿದ್ದಾರೆ.
ಸೋಶಿಯಲ್ ಮೀಡಿಯಾ ಮೂಲಕ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಈ ಪೋಸ್ಟ್ ಮಾಡಿದ್ದಾರೆ. ಅಭಿಮಾನಿಗಳನ್ನು ಉದ್ದೇಶಿಸಿಯೇ ಅವರು ಕೆಲವು ಮಾತುಗಳನ್ನು ಹಂಚಿಕೊಂಡಿದ್ದಾರೆ. ‘ನನ್ನ ಪ್ರೀತಿಯ ಸಹೋದರರೇ.. ದರ್ಶನ್ ಅವರಿಗೆ ನೀವು, ತಮ್ಮ ಅಭಿಮಾನಿಗಳು ಎಂದರೆ ಅಪಾರವಾದ ಪ್ರೀತಿ. ನೀವು ಅವರನ್ನು ಪ್ರೀತಿಸುವಷ್ಟೇ ಅವರು ತಮ್ಮ ‘ಸೆಲೆಬ್ರಿಟಿಗಳನ್ನು’ ತನ್ನ ಹೃದಯದಲ್ಲೇ ಹೊತ್ತಿರುವುದು ನಿಮಗೇ ಗೊತ್ತಿದೆ’ ಎಂದು ವಿಜಯಲಕ್ಷ್ಮಿ ಅವರು ಬರಹ ಆರಂಭಿಸಿದ್ದಾರೆ.
‘ಇದೊಂದು ಪರೀಕ್ಷೆಯ ಸಮಯ. ನನಗೆ, ನಿಮಗೆ, ನಮ್ಮೆಲ್ಲರಿಗೆ. ನಾವು ತಾಳ್ಮೆ ಕಳೆದುಕೊಂಡು ಮಾತನಾಡುವುದರಿಂದ ಹಾನಿಯಾಗುವುದು ನಮಗೆ. ಆದ್ದರಿಂದ ತಾಳ್ಮೆ, ಶಾಂತಿಯಿಂದ ಇರೋಣ. ನಾನು ನಿಮ್ಮ ಆತಂಕವನ್ನು ದರ್ಶನ್ ಅವರಿಗೆ ತಲುಪಿಸಿದ್ದೇನೆ. ಅವರೂ ನಿಮ್ಮ ಪ್ರತಿ ಕಾಳಜಿ ವ್ಯಕ್ತಪಡಿಸಿದ್ದಾರೆ’ ಎಂದಿದ್ದಾರೆ ವಿಜಲಯಕ್ಷ್ಮಿ.
ಇದನ್ನೂ ಓದಿ: ಸಿನಿಮಾ ಆಗುತ್ತಾ ದರ್ಶನ್ ‘ಖೈದಿ ನಂಬರ್ 6106’? ಶೀರ್ಷಿಕೆಗೆ ನಿರ್ಮಾಪಕರಿಂದ ಬೇಡಿಕೆ
‘ನಾವು ನಮ್ಮ ನ್ಯಾಯಾಲಯಗಳ ಮೇಲೆ ವಿಶ್ವಾಸ ಇಡೋಣ. ನಮಗೆ ನ್ಯಾಯ ಸಿಗುವ ಸಂಪೂರ್ಣ ಭರವಸೆ ನನಗಿದೆ. ಇಂತಹ ಕಷ್ಟದ ಸಮಯದಲ್ಲಿ ದರ್ಶನ್ ಅವರ ಅನುಪಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಅವರಿಗೆ ಕೇಡು ಬಯಸುವ/ಮಾಡುವವರನ್ನು ತಾಯಿ ಚಾಮುಂಡೇಶ್ವರಿ ನೋಡಿಕೊಳ್ಳುತ್ತಾಳೆ. ಒಳ್ಳೆಯ ಸಮಯ ಮತ್ತೆ ಮರಳಿ ಬರಲಿದೆ. ಸತ್ಯಮೇವ ಜಯತೆ’ ಎಂದು ವಿಜಯಲಕ್ಷ್ಮಿ ಅವರು ಬರಹಪೂರ್ಣಗೊಳಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಕುರಿತು ಪರ-ವಿರೋಧದ ಚರ್ಚೆ ನಡೆಯುತ್ತಿದೆ. ಕೋರ್ಟ್ ತೀರ್ಪು ಬರುವುದಕ್ಕೂ ಮೊದಲು ದರ್ಶನ್ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಆಡುವುದು ಸರಿಯಲ್ಲ ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ. ರೇಣುಕಾ ಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಕೂಡ ನೆಟ್ಟಿಗರು ಒತ್ತಾಯ ಮಾಡುತ್ತಿದ್ದಾರೆ. ಅನೇಕ ಸೆಲೆಬ್ರಿಟಿಗಳು ಕೂಡ ಇದನ್ನೇ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:27 pm, Wed, 26 June 24