ಕಮರ್ಷಿಯಲ್ ಸಿನಿಮಾಗಳ ಜೊತೆಗೆ ಭಕ್ತಿ ಪ್ರಧಾನ ಸಿನಿಮಾಗಳು ಕೂಡ ಸಿದ್ಧಗೊಳ್ಳುತ್ತವೆ. ಈ ಮೊದಲು ಹರಿದಾಸರ ಕುರಿತ ಸಿನಿಮಾಗಳು ರಿಲೀಸ್ ಆಗಿ ಮೆಚ್ಚುಗೆ ಪಡೆದಿವೆ. ಈಗ ಕನ್ನಡದಲ್ಲಿ ವಿಜಯದಾಸರ ಕುರಿತಾಗಿ ಸಿನಿಮಾ ಸಿದ್ಧವಾಗಿದೆ. ‘ದಾಸವರೇಣ್ಯ ಶ್ರೀ ವಿಜಯದಾಸರು’ (Dasavarenya Sri Vijaya Dasaru) ಎಂದು ಈ ಚಿತ್ರಕ್ಕೆ ಟೈಟಲ್ ಇಡಲಾಗಿದೆ. ಏಪ್ರಿಲ್ 12ರಂದು ಸಿನಿಮಾ ರಿಲೀಸ್ ಆಗಲಿದೆ. ಇತ್ತೀಚೆಗೆ ತಂಡದವರು ಸುದ್ದಿಗೋಷ್ಠಿ ನಡೆಸಿ ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದಾರೆ. ವಿದೇಶದಲ್ಲೂ ಚಿತ್ರಕ್ಕೆ ಟಿಕೆಟ್ ಬುಕಿಂಗ್ ಓಪನ್ ಆಗಿದೆ.
ಈ ಮೊದಲು ರಿಲೀಸ್ ಆದ ‘ಶ್ರೀ ಜಗನ್ನಾಥದಾಸರು’ ಸಿನಿಮಾ ಮೆಚ್ಚುಗೆ ಪಡೆಯಿತು. ಕಳೆದವರ್ಷ
‘ಶ್ರೀ ಪ್ರಸನ್ನವೆಂಕಟದಾಸರು’ ಸಿನಿಮಾ ರಿಲೀಸ್ ಆಯಿತು. ಈಗ ಕರ್ನಾಟಕದ ಶ್ರೇಷ್ಠ ಹರಿದಾಸರಲ್ಲಿ ಒಬ್ಬರಾದ ವಿಜಯದಾಸರ ಚಿತ್ರ ಸಹ ರಿಲೀಸ್ಗೆ ರೆಡಿ ಇದೆ. ತ್ರಿವಿಕ್ರಮ ಜೋಶಿ ಅವರು ‘ಎಸ್ಪಿಜೆ ಮೂವೀಸ್’ ಬ್ಯಾನರ್ ಮೂಲಕ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಇದರ ಜೊತೆಗೆ ಅವರು ವಿಜಯದಾಸರ ಪಾತ್ರವನ್ನೂ ನಿರ್ವಹಿಸಿದ್ದಾರೆ. ಅವರ ಪತ್ನಿ ಅರಳಮ್ಮನ ಪಾತ್ರದಲ್ಲಿ ಶ್ರೀಲತಾ ಅವರು ನಟಿಸುತ್ತಿದ್ದಾರೆ.
ವಿಜಯಾನಂದ ನಾಯಕ್, ಪ್ರಭಂಜನ ದೇಶಪಾಂಡೆ, ಮಾಜಿ ಶಾಸಕರಾದ ಬಸವನಗೌಡ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ‘ದಾಸವರೇಣ್ಯ ಶ್ರೀವಿಜಯದಾಸರು’ ಚಿತ್ರಕ್ಕೆ ವಿಜಯಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಚಿತ್ರಕ್ಕೆ ಜೆ.ಎಂ.ಪ್ರಹ್ಲಾದ್ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಈ ರೀತಿಯ ಸಿನಿಮಾಗಳಿಗೆ ಸಂಭಾವಣೆ ಬರೆಯೋದು ನಿಜಕ್ಕೂ ಚಾಲೆಂಜಿಂಗ್. ಅಂಥ ಚಾಲೆಂಜ್ನ ಪಹ್ಲಾದ್ ಸ್ವೀಕರಿಸಿ, ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಹಂಪಿ, ಕನಕಗಿರಿ ಮುಂತಾದ ಕಡೆ ಸಿನಿಮಾದ ಶೂಟಿಂಗ್ ನಡೆದಿದೆ. ಮಧುಸೂದನ್ ಹವಾಲ್ದಾರ್ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.
‘ದಾಸವರೇಣ್ಯ ಶ್ರೀವಿಜಯದಾಸರು’ ಬಗ್ಗೆ ನಿರ್ಮಾಪಕ ಹಾಗೂ ನಟ ತ್ರಿವಿಕ್ರಮ ಜೋಶಿ ಮಾಹಿತಿ ನೀಡಿದ್ದಾರೆ. ಕನ್ನಡದಲ್ಲಿ ‘ನವಕೋಟಿ ನಾರಾಯಣ’, ‘ಭಕ್ತ ಕನಕದಾಸ’ ಸಿನಿಮಾ ಬಳಿಕ ಹರಿದಾಸರ ಕುರಿತಾದ ಯಾವುದೇ ಸಿನಿಮಾ ರಿಲೀಸ್ ಆಗಿರಲಿಲ್ಲವಂತೆ. ನಂತರ ‘ಶ್ರೀಜಗನ್ನಾಥದಾಸರು ಹಾಗೂ ‘ಶ್ರೀಪ್ರಸನ್ನವೆಂಕಟದಾಸರು’ ಸಿನಿಮಾ ಬಂತು. ಈಗ ‘ದಾಸವರೇಣ್ಯ ಶ್ರೀ ವಿಜಯದಾಸರು’ ಸಿನಿಮಾ ಬರುತ್ತಿದೆ ಎಂದು ತ್ರಿವಿಕ್ರಮ ಜೋಶಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ‘ದಾಸವರೇಣ್ಯ ಶ್ರೀ ವಿಜಯ ದಾಸರು’ ಸಿನಿಮಾ ಆಡಿಯೋ ಲಾಂಚ್ ಮಾಡಿದ ಕೇಂದ್ರ ಸಚಿವ
ತ್ರಿವಿಕ್ರಮ ಜೋಶಿ ಅವರು ವೃತ್ತಿಯಲ್ಲಿ ಇಂಜಿನಿಯರ್ ಹಾಗೂ ಉದ್ಯಮಿ. ಅವರಿಗೆ ರಾಜಕೀಯದ ಜೊತೆಗೂ ನಂಟಿದೆ. ದುಡ್ಡು ಮಾಡುವ ಉದ್ದೇಶ ಇಲ್ಲದೆ ಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕು ಎಂಬ ಹಂಬಲದಿಂದ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರಂತೆ. ಈ ಸಿನಿಮಾ ವಿದೇಶದಲ್ಲೂ ರಿಲೀಸ್ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:37 pm, Thu, 28 March 24