ನಟ ಡಾಲಿ ಧನಂಜಯ್ ಅವರಿಗೆ ಇಂದು (ಆಗಸ್ಟ್ 23) ಹುಟ್ಟುಹಬ್ಬ. ಅವರ ಬರ್ತ್ಡೇ ದಿನ ಹೊಸ ಸಿನಿಮಾ ಘೋಷಣೆ ಆಗಿದೆ. ಈ ಚಿತ್ರಕ್ಕೆ ‘ಜಿಂಗೋ’ ಎಂಬ ಶೀರ್ಷಿಕೆ ಇಡಲಾಗಿದೆ. ಅವರು ಈ ಬಾರಿ ‘ಡೇರ್ ಡೆವಿಲ್ ಮುಸ್ತಫಾ’ ನಿರ್ದೇಶಕ ಶಶಾಂಕ್ ಸೋಗಲ್ ಜೊತೆ ಕೈ ಜೋಡಿಸಿದ್ದಾರೆ. ಈ ಸಿನಿಮಾದ ಕ್ಯಾರೆಕ್ಟರ್ ಇಂಟ್ರೋಡಕ್ಷನ್ ಮಾಡೋ ಟೀಸರ್ ಗಮನ ಸೆಳೆದಿದೆ. ಧನಂಜಯ್ ಅವರು ರಾಜಕಾರಣಿಯ ಪಾತ್ರ ಮಾಡುತ್ತಿದ್ದಾರೆ ಎನ್ನಲಾಗಿದೆ.
ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರು ಬರೆದ ‘ಅಬಚುರಿನಾ ಪೋಸ್ಟ್ ಆಫೀಸ್’ ಕಥೆಯನ್ನು ಆಧರಿಸಿ ಶಶಾಂಕ್ ಅವರು ‘ಡೇರ್ ಡೆವಿಲ್ ಮುಸ್ತಫಾ’ ಸಿನಿಮಾ ಮಾಡಿದ್ದರು. ಈ ಚಿತ್ರ ಎಲ್ಲರ ಗಮನ ಸೆಳೆದಿತ್ತು. ಈಗ ಅವರು ‘ಜಿಂಗೋ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ‘ಡೇರ್ ಡೆವಿಲ್ ಮುಸ್ತಫಾ’ ಚಿತ್ರದಲ್ಲಿ ಶಾಂತಿಯ ಮಂತ್ರ ಪ್ರಕಟಿಸಿದ್ದ ಅವರು ಈ ಬಾರಿ ಕ್ರಾಂತಿಯ ಮೊರೆ ಹೋಗಿದ್ದಾರೆ. ‘ಶಾಂತಿಯ ತೋಟದ ಹಣ್ಣಿಗೆ ಬೆಲೆ ಇಲ್ಲ, ನಾವು ಉತ್ತಿ-ಬಿತ್ತ ಬೇಕಾಗಿರೋದು ಕ್ರಾಂತಿಯ ತೋಟ’ ಎನ್ನುವ ಡೈಲಾಗ್ ಗಮನ ಸೆಳೆದಿದೆ.
ಧನಂಜಯ್ ಬರ್ತ್ಡೇ ಅಂಗವಾಗಿ ‘ಜಿಂಗೋ’ ಚಿತ್ರದ ಮೊದಲ ಝಲಕ್ ತೋರಿಸಿದ್ದಾರೆ. ರಾಜಕಾರಣಿಯಾಗಿ ಅವರು ಮಿಂಚಿದ್ದಾರೆ. ಉದ್ದ ಕೂದಲು ಬಿಟ್ಟು ಖಡಕ್ ಡೈಲಾಗ್ ಹೊಡೆದಿದ್ದಾರೆ. ‘ಜಿಂಗೋ’ ಅಸಲಿಗೆ ರಾಜಕಾರಣಿನಾ ಅಥವಾ ಕ್ರಾಂತಿಕಾರನಾ ಎಂಬ ಪ್ರಶ್ನೆಯನ್ನೂ ಹುಟ್ಟುಹಾಕಿದೆ. ಈ ಚಿತ್ರಕ್ಕೆ ಹ್ಯಾರಿಸ್ ಅಹಮದ್ ಕಥೆ-ಚಿತ್ರಕಥೆ ಬರೆದಿದ್ದಾರೆ.
ಇದನ್ನೂ ಓದಿ: ‘ತಪ್ಪಾಗಿದ್ರೆ ಶಿಕ್ಷೆ ಆಗಲಿ’; ದರ್ಶನ್ ಪ್ರಕರಣದ ಬಗ್ಗೆ ಧನಂಜಯ್ ಮಾತು
ಈ ಚಿತ್ರವನ್ನು ‘ತ್ರಿಷೂಲ್ ವಿಷನರಿ ಸ್ಟುಡಿಯೋಸ್’ ಹಾಗೂ ‘ಡಾಲಿ ಪಿಕ್ಚರ್ಸ್’ ಬ್ಯಾನರ್ ಅಡಿಯಲ್ಲಿ ಬಿ. ನರೇಂದ್ರ ರೆಡ್ಡಿ ಹಾಗೂ ಡಾಲಿ ಧನಂಜಯ್ ಜಂಟಿಯಾಗಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ನವನೀತ್ ಶ್ಯಾಮ್ ಸಂಗೀತ, ಶರತ್ ವಸಿಷ್ಠ ಸಂಕಲನ, ರಾಹುಲ್ ರಾಯ್ ಛಾಯಾಗ್ರಹಣ ಚಿತ್ರಕ್ಕೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.