ಹಾಸ್ಯ ನಟರು ನಾಯಕ ನಟರಾಗಿ ಗುರುತಿಸಿಕೊಳ್ಳುವುದು ಹೊಸದೇನೂ ಅಲ್ಲ. ಕೆಲವು ಹಾಸ್ಯ ನಟರು ನಾಯಕ ನಟರಾಗಿಯೂ ಹೆಸರು ಮಾಡಿದ್ದಾರೆ. ಯಶಸ್ಸು ಗಳಿಸಿದ್ದಾರೆ. ಆದರೆ ಕೆಲವು ಹಾಸ್ಯ ನಟರು, ನಾಯಕ ನಟರಾದ ಬಳಿಕ ಇದ್ದ ಅವಕಾಶಗಳನ್ನು ಕಳೆದುಕೊಂಡು ಮೂಲೆಗುಂಪಾದ ಉದಾಹರಣೆಯೂ ಇದೆ. ಹಾಸ್ಯ ನಟನಾಗಿ, ಪೋಷಕ ನಟನಾಗಿ ಗುರುತಿಸಿಕೊಂಡಿದ್ದ ನಟ ಧರ್ಮಣ್ಣ ಈಗಾಗಲೇ ‘ರಾಜಯೋಗ’ ಸಿನಿಮಾ ಮೂಲಕ ನಾಯಕ ನಟನಾಗಿ ಬಡ್ತಿ ಪಡೆದಿದ್ದಾರೆ ಮಾತ್ರವಲ್ಲದೆ ಆ ಸಿನಿಮಾ ಮೂಲಕ ಸಿನಿಪ್ರಿಯರ ಗಮನ ಸೆಳೆಯುವಲ್ಲಿ ಯಶಸ್ವಿಯೂ ಆಗಿದ್ದಾರೆ. ಈಗ ಮತ್ತೊಮ್ಮೆ ಹೊಸ ಸಿನಿಮಾವೊಂದರಲ್ಲಿ ಧರ್ಮಣ್ಣ ನಾಯಕನಾಗಿ ನಟಿಸುತ್ತಿದ್ದಾರೆ.
‘ಹಂಪಿ ಎಕ್ಸ್‌ಪ್ರೆಸ್’ ಹೆಸರಿನ ಸಿನಿಮಾದಲ್ಲಿ ಧರ್ಮಣ್ಣ ಕಡೂರು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಸಿನಿಮಾದ ಮುಹೂರ್ತ ನೆರವೇರಿದ್ದು, ಸಿನಿಮಾಕ್ಕೆ ನಿರ್ದೇಶಕ ಯೋಗರಾಜ ಭಟ್ಟರು ಶುಭಕೋರಿ, ಸಿನಿಮಾಕ್ಕೆ ಚಾಲನೆ ನೀಡಿದ್ದಾರೆ. ‘ಹಂಪಿ ಎಕ್ಸ್‌ಪ್ರೆಸ್’ ಸಿನಿಮಾ ಹಂಪಿಯಲ್ಲಿ ನಡೆದ ನಿಜ ಘಟನೆಯೊಂದಕ್ಕೆ ತುಸು ಕಾಲ್ಪನಿಕತೆ ತುಂಬಿ ಮಾಡಲಾಗುತ್ತಿರುವ ಸಿನಿಮಾ ಎನ್ನಲಾಗುತ್ತಿದೆ. ಸಿನಿಮಾದಲ್ಲಿ ಧರ್ಮಣ್ಣ ನಾಯಕನಾಗಿದ್ದು, ಕ್ಯಾಮೆರಾ ಮ್ಯಾನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಇದನ್ನೂ ಓದಿ:‘ಕಲಾಸಿಪಾಳ್ಯ’ ಸಿನಿಮಾಕ್ಕೆ ದರ್ಶನ್ ಪಡೆದ ಸಂಭಾವನೆ ಎಷ್ಟು? ‘ಡೆವಿಲ್’ ಸಿನಿಮಾಕ್ಕೆ ಎಷ್ಟು?
ಸಿನಿಮಾದ ಕತೆ, ಚಿತ್ರಕತೆ ಬರೆದು ಪಾಟೀಲ್ ಲಿಂಗನಗೌಡ ಹರಪನಹಳ್ಳಿ ನಿರ್ದೇಶನ ಮಾಡುತ್ತಿದ್ದಾರೆ. ಹಂಪಿ ಟಾಕೀಸ್ ಬಳಗದವರು ಸಿನಿಮಾದ ನಿರ್ಮಾಣ ಮಾಡುತ್ತಿದ್ದಾರೆ. ಮನ್ ಪ್ರಸಾದ್ ಛಾಯಾಗ್ರಹಣ ಮಾಡಲಿದ್ದಾರೆ. ಸಿನಿಮಾದಲ್ಲಿ ಧರ್ಮಣ್ಣ ಕಡೂರು ಹೊರತಾಗಿ ಪದ್ಮಶ್ರೀ ಮಂಜಮ್ಮ ಜೋಗತಿ, ಪದ್ಮಶ್ರೀ ಮಂಜಮ್ಮ ಜೋಗತಿ, ಮಹಾಂತೇಶ್ ಹಿರೇಮಠ್ , ರಂಜಿತಾ ಪುಟ್ಟಸ್ವಾಮಿ, ರಾಮ್ ನಾಡಗೌಡ್ ಇನ್ನಿತರರು ನಟಿಸಲಿದ್ದಾರೆ.
ಎರಡನೇ ಬಾರಿ ಸಿನಿಮಾದಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸುತ್ತಿರುವ ಕುರಿತು ಖುಷಿ ವ್ಯಕ್ತಪಡಿಸಿರುವ ನಟ ಧರ್ಮಣ್ಣ ಕಡೂರು, ‘ನಿಮ್ಮೆಲ್ಲರ ಪ್ರೀತಿ ಪ್ರೋತ್ಸಾಹಗಳಿಂದ ನಾನು ಮತ್ತೊಂದು ಸಿನಿಮಾದಲ್ಲಿ ಮುಖ್ಯ ಪಾತ್ರಧಾರಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಸಿನಿಮಾದ ಮುಹೂರ್ತ ನೆರವೇರಿದೆ. ಸಿನಿಮಾ ಹೆಸರು ‘ಹಂಪಿ ಎಕ್ಸ್‌ಪ್ರೆಸ್’ ಅಕ್ಕರೆಯಿಂದ ಸಿನಿಮಾದ ಹೆಸರನ್ನು ಅನಾವರಣ ಮಾಡಿದ ಪ್ರೀತಿಯ ಯೋಗರಾಜ್ ಭಟ್ ಸರ್ ಅವರಿಗೆ ಕೋಟಿ ಧನ್ಯವಾದಗಳು. ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ, ಹಾರೈಕೆಗಳು ನಮ್ಮ ‘ಹಂಪಿ ಎಕ್ಸ್‌ಪ್ರೆಸ್’ ಸಿನಿಮಾ ತಂಡದ ಮೇಲಿರಲಿ’
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ