ಪ್ರವಾಹದ ವಿರುದ್ಧ ಈಜಲು ನಿರ್ಧರಿಸಿದ ‘ಧೀರ ಭಗತ್ ರಾಯ್’; ಡಿ.6ಕ್ಕೆ ಬಿಡುಗಡೆ
ದೊಡ್ಡ ಬಜೆಟ್ನ ಸಿನಿಮಾಗಳ ಎದುರಿನಲ್ಲಿ ಸಣ್ಣ ಬಜೆಟ್ನ ಸಿನಿಮಾಗಳನ್ನು ತೆರೆಕಾಣಿಸಲು ನಿರ್ಮಾಪಕರು ಹಿಂದೇಟು ಹಾಕುವುದು ಕಾಮನ್. ಆದರೆ ಕೆಲವು ಚಿತ್ರತಂಡಗಳು ದೊಡ್ಡ ಪ್ರವಾಹದ ವಿರುದ್ಧ ಕೂಡ ಈಜುವ ನಿರ್ಧಾರ ತೆಗೆದುಕೊಳ್ಳುತ್ತವೆ. ಅಂಥ ಸಿನಿಮಾಗಳ ಸಾಲಿನಲ್ಲಿ ನಿಲ್ಲುತ್ತಿದೆ ‘ಧೀರ ಭಗತ್ ರಾಯ್’ ಚಿತ್ರ. ಈ ಸಿನಿಮಾದಲ್ಲಿ ಹೊಸ ಕಲಾವಿದರು ನಟಿಸಿದ್ದಾರೆ.
ಈ ವರ್ಷ ಡಿಸೆಂಬರ್ನಲ್ಲಿ ‘ಪುಷ್ಪ 2’ ಸಿನಿಮಾ ಧೂಳೆಬ್ಬಿಸಲಿದೆ. ಡಿಸೆಂಬರ್ 5ರಂದು ಆ ಸಿನಿಮಾ ತೆರೆಕಾಣಲಿದೆ. ಮರುದಿನವೇ ಕನ್ನಡದ ‘ಧೀರ ಭಗತ್ ರಾಯ್’ ಸಿನಿಮಾ ಕೂಡ ಬಿಡುಗಡೆ ಆಗಲಿದೆ. ಇದನ್ನು ಪ್ರವಾಹದ ವಿರುದ್ಧ ಈಜುವುದು ಎಂದೇ ಹೇಳಬೇಕು. ಯಾಕೆಂದರೆ, ನೂರಾರು ಕೋಟಿ ರೂಪಾಯಿ ಬಜೆಟ್ನಲ್ಲಿ ನಿರ್ಮಾಣ ಆಗಿರುವ ‘ಪುಷ್ಪ 2’ ಸಿನಿಮಾ ಬಿಡುಗಡೆ ಆದಾಗ ಬಹುಪಾಲು ಚಿತ್ರಮಂದಿರಗಳನ್ನು ಆಕ್ರಮಿಸಿಕೊಳ್ಳುತ್ತದೆ. ಆದರೆ ಅದೇ ಸಮಯದಲ್ಲಿ ‘ಧೀರ ಭಗತ್ ರಾಯ್’ ಸಿನಿಮಾ ಬಿಡುಗಡೆಯಾದರೆ ಚಿತ್ರಮಂದಿರಗಳ ಕೊರತೆ ಎದುರಾಗುವ ಸಾಧ್ಯತೆ ಇರುತ್ತದೆ. ಹಾಗಿದ್ದರೂ ಕೂಡ ದೊಡ್ಡ ಸಿನಿಮಾದ ಎದುರಿನಲ್ಲೇ ಪೈಪೋಟಿಗೆ ಇಳಿಯಲು ‘ಧೀರ ಭಗತ್ ರಾಯ್’ ಸಿನಿಮಾ ತಂಡ ನಿರ್ಧರಿಸಿದೆ.
ಟ್ರೇಲರ್ ಮೂಲಕ ‘ಧೀರ ಭಗತ್ ರಾಯ್’ ಸಿನಿಮಾ ಗಮನ ಸೆಳೆದಿದೆ. ಸಮಾಜದಲ್ಲಿನ ಅನ್ಯಾಯಗಳ ವಿರುದ್ಧ ಗುಡುಗುವಂತಹ ಕಥೆ ಈ ಸಿನಿಮಾದಲ್ಲಿ ಇದೆ. ಉಳುವವನೇ ಹೊಲದ ಒಡೆಯ ಎಂಬ ಘೋಷವಾಕ್ಯದೊಂದಿಗೆ ಬಂದ ಭೂಸುಧಾರಣಾ ಕಾಯ್ದೆಯ ಅಂಶಗಳನ್ನು ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ‘ಕಾಟೇರ’ ಸಿನಿಮಾದಲ್ಲಿ ಸಹ ಇಂಥದ್ದೇ ವಿಷಯ ಇತ್ತು. ಹಾಗಾಗಿ ‘ಕಾಟೇರ’ ರೀತಿಯೇ ತಮ್ಮ ಸಿನಿಮಾಗೆ ಕೂಡ ಜನಬೆಂಬಲ ಸಿಗಲಿಗೆ ಎಂಬ ಆತ್ಮವಿಶ್ವಾಸ ‘ಧೀರ ಭಗತ್ ರಾಯ್’ ಚಿತ್ರತಂಡಕ್ಕೆ ಇದೆ.
ಈ ಸಿನಿಮಾದಲ್ಲಿ ಹೊಸ ಪ್ರತಿಭೆಗಳು ಪ್ರಮುಖ ಪಾತ್ರ ಮಾಡಿದ್ದಾರೆ. ರಾಕೇಶ್ ದಳವಾಯಿ ಅವರು ಹೀರೋ ಆಗಿ ನಟಿಸಿದ್ದಾರೆ. ಟ್ರೇಲರ್ನಲ್ಲಿ ಅವರ ಆ್ಯಕ್ಷನ್ ಅಬ್ಬರ ಕಾಣಿಸಿದೆ. ಹೊಸ ನಿರ್ದೇಶಕ ಕರ್ಣನ್ ಅವರು ಈ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಚೊಚ್ಚಲ ಸಿನಿಮಾದಲ್ಲೇ ಅವರು ಗಂಭೀರವಾದ ಕಥಾವಸ್ತುವನ್ನು ಆಯ್ದುಕೊಂಡಿದ್ದಾರೆ. ಟ್ರೇಲರ್ ಮೂಲಕ ಅವರ ಕಸುಬು ಕಾಣಿಸಿದೆ.
‘ವೈಟ್ ಲೋಟಸ್ ಎಂಟರ್ಟೇನ್ಮೆಂಟ್’, ‘ಶ್ರೀ ಓಂ ಸಿನಿ ಎಂಟರ್ಟೇನರ್ಸ್’ ಸಂಸ್ಥೆಗಳ ಮೂಲಕ ‘ಧೀರ ಭಗತ್ ರಾಯ್’ ಸಿನಿಮಾ ನಿರ್ಮಾಣ ಆಗಿದೆ. ಹಲವು ವರ್ಷಗಳ ಹಿಂದೆ ‘ಬಾಹುಬಲಿ’ ಸಿನಿಮಾದ ಎದುರಿನಲ್ಲಿ ಕನ್ನಡದ ‘ರಂಗಿತರಂಗ’ ಸಿನಿಮಾ ಬಿಡುಗಡೆಯಾಗಿ ಗೆದ್ದಿತ್ತು. ಅದನ್ನೇ ಸ್ಫೂರ್ತಿಯಾಗಿ ಇಟ್ಟುಕೊಂಡು ‘ಪುಷ್ಪ 2’ ಸಿನಿಮಾದ ಎದುರು ‘ಧೀರ ಭಗತ್ ರಾಯ್’ ಸಿನಿಮಾವನ್ನು ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ. ಪೈಪೋಟಿ ಹೇಗಿರಬಹುದು ಎಂಬುದನ್ನು ಕಾದುನೋಡಬೇಕು.
ಇದನ್ನೂ ಓದಿ: ಯಶ್ಗೆ ಕನ್ನಡದಲ್ಲೇ ಪ್ರಶ್ನೆ ಕೇಳಿದ ಮುಂಬೈ ವ್ಯಕ್ತಿ; ರಾಕಿಂಗ್ ಸ್ಟಾರ್ ಉತ್ತರ ಹೇಗಿತ್ತು?
ಈ ಸಿನಿಮಾಗೆ ಪೂರ್ಣಚಂದ್ರ ತೇಜಸ್ವಿ ಅವರು ಸಂಗೀತ ನೀಡಿದ್ದಾರೆ. ಎನ್.ಎಂ. ವಿಶ್ವ ಅವರ ಸಂಕಲನ ಈ ಚಿತ್ರಕ್ಕಿದೆ. ಹೊಸ ನಟಿ ಸುಚರಿತಾ ಅವರು ನಾಯಕಿಯಾಗಿ ಅಭಿನಯಿಸಿದ್ದಾರೆ. ನೀನಾಸಂ ಅಶ್ವತ್ಥ್, ಶರತ್ ಲೋಹಿತಾಶ್ವ, ಹರಿರಾಮ್, ಪ್ರವೀಣ್ ಗೌಡ ಹೆಚ್.ಸಿ, ಕೆ.ಎಮ್. ಸಂದೇಶ್, ಸುಧೀರ್ ಕುಮಾರ್ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.