ಪರಭಾಷೆಯ ಸಿನಿಮಾಗಳು ಕೇವಲ ನಾಮ್ ಕೆ ವಾಸ್ತೆ ಕನ್ನಡಕ್ಕೆ ಡಬ್ (Dubbing) ಆಗುತ್ತವಷ್ಟೆ. ಬಿಡುಗಡೆ ಸಮಯದಲ್ಲಿ ಕೇವಲ ಒಂದು ಚಿತ್ರಮಂದಿರ (Theater) ಅಥವಾ ಎರಡು ಚಿತ್ರಮಂದಿರಗಳಲ್ಲಿ ಮಾತ್ರವೇ ಕನ್ನಡ ಡಬ್ಬಿಂಗ್ ಆವೃತ್ತಿಯನ್ನು ಬಿಡುಗಡೆ ಮಾಡಿ ಮೂಲ ಆವೃತ್ತಿಯನ್ನೇ ಹೆಚ್ಚು ಸ್ಕ್ರೀನ್ಗಳಲ್ಲಿ ಬಿಡುಗಡೆ ಮಾಡುವುದು ನೋಡುತ್ತಲೇ ಬಂದಿದ್ದಾರೆ ಕನ್ನಡ ಪ್ರೇಕ್ಷಕರು. ಆದರೆ ಇದೀಗ ಮಲಯಾಳಂ (Malayalam) ಸಿನಿಮಾದ ಕನ್ನಡ ಆವೃತ್ತಿ ಸುಮಾರು 150 ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ. ಹೀಗಾಗಲು ಕಾರಣ ಈ ಮಲಯಾಳಂ ಸಿನಿಮಾದ ನಿರ್ದೇಶಕ ಹಾಗೂ ನಿರ್ಮಾಪಕ ಕನ್ನಡದವರು.
ಹೊಂಬಾಳೆ ಫಿಲಮ್ಸ್ ನಿರ್ಮಿಸಿ ಲೂಸಿಯಾ ಪವನ್ ನಿರ್ದೇಶನ ಮಾಡಿರುವ ಮಲಯಾಳಂ ಸಿನಿಮಾ ಧೂಮಂ ನಾಳೆ (ಜೂನ್ 22) ರಂದು ತೆರೆಗೆ ಬರುತ್ತಿದೆ. ಮಲಯಾಳಂನ ಸ್ಟಾರ್ ನಟ ಫಹಾದ್ ಫಾಸಿಲ್ ನಟಿಸಿರುವ ಈ ಸಿನಿಮಾದಲ್ಲಿ ಅಚ್ಯುತ್ ಕುಮಾರ್ ಸೇರಿದಂತೆ ಕೆಲವು ಕನ್ನಡದ ನಟರೂ ಇದ್ದಾರೆ. ತೆರೆಯ ಹಿಂದೆ ಹಲವು ಕನ್ನಡಿಗರು ಕೆಲಸ ಮಾಡಿದ್ದಾರೆ. ಸಿನಿಮಾದ ಕತೆಯೂ ನಡೆಯುವುದು ಬೆಂಗಳೂರಿನಲ್ಲಿಯೇ ಎನ್ನಲಾಗುತ್ತಿದೆ. ಹಾಗಾಗಿಯೇ ಧೂಮಂ ಮಲಯಾಳಂ ಸಿನಿಮಾ ಆದರೂ ಕನ್ನಡಿಗರು ಮಾಡಿರುವ ಮಲಯಾಳಂ ಸಿನಿಮಾ ಎನ್ನಬಹುದು.
ಇದೇ ಕಾರಣಕ್ಕೆ ‘ಧೂಮಂ’ ಚಿತ್ರದ ಕನ್ನಡ ಅವತರಣಿಕೆ ಸುಮಾರು 150 ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಅದ್ದೂರಿಯಾಗಿ ಬಿಡುಗಡೆ ಮಾಡುತ್ತಿದೆ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ. ಈ ಸಿನಿಮಾದ ಕನ್ನಡ ಟ್ರೈಲರ್ ಬಿಡುಗಡೆ ಆದಾಗ ಡಬ್ಬಿಂಗ್ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಫಹಾದ್ ಫಾಸಿಲ್ ಧ್ವನಿ ಮ್ಯಾಚ್ ಆಗಿಲ್ಲವೆಂದು, ಡಬ್ಬಿಂಗ್ ಗುಣಮಟ್ಟ ಚೆನ್ನಾಗಿಲ್ಲವೆಂದು ಟೀಕಿಸಲಾಗಿತ್ತು. ಆ ಬಳಿಕ ನಿರ್ದೇಶಕ ಪವನ್ ಕುಮಾರ್ ಅವರು ಸೂಕ್ತ ವ್ಯಕ್ತಿಗಳನ್ನು ಹಿಡಿದು ಮತ್ತೊಮ್ಮೆ ಡಬ್ಬಿಂಗ್ ಮಾಡಿದ್ದು ಅವರೇ ಹೇಳಿಕೊಂಡಿರುವಂತೆ ಕನ್ನಡ ಡಬ್ಬಿಂಗ್ ಬಹಳ ಚೆನ್ನಾಗಿ ಮೂಡಿಬಂದಿದ್ದು ಟ್ರೈಲರ್ ನೋಡಿದ್ದಕ್ಕೂ ಚಿತ್ರಮಂದಿರದಲ್ಲಿ ನೋಡುವ ಡಬ್ಬಿಂಗ್ ಆವೃತ್ತಿಗೆ ದೊಡ್ಡ ವ್ಯತ್ಯಾಸ ಇರಲಿದೆ ಎಂದಿದ್ದಾರೆ.
ಇದನ್ನೂ ಓದಿ:ದ್ವಿತ್ವಗೆ ಮಾತ್ರವಲ್ಲ ಧೂಮಂಗೂ ಅಪ್ಪು ನಾಯಕರಾಗಬೇಕಿತ್ತು, ಆಗಲಿಲ್ಲ ಏಕೆ?
ಫಹಾದ್ ಫಾಸಿಲ್, ಅಪರ್ಣ ಬಾಲಮುರಳಿ, ಅಚ್ಯುತ್ ಕುಮಾರ್, ರೋಶನ್ ಮ್ಯಾಥ್ಯೂ, ವಿನೀತ್ ರಾಧಾಕೃಷ್ಣನ್, ಅನು ಮೋಹನ್, ಜಾಯ್ ಮ್ಯಾಥ್ಯೂ, ನಂದು ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ, ಸುರೇಶ್ ಅವರ ಸಂಕಲನ ಮತ್ತು ಪ್ರೀತಾ ಜಯರಾಮನ್ ಅವರ ಛಾಯಾಗ್ರಹಣ “ಧೂಮಂ” ಚಿತ್ರಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ