ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾ ಕೆಲ ದಿನಗಳ ಹಿಂದಷ್ಟೆ ಬಿಡುಗಡೆ ಆಗಿದೆ. ಭಾರಿ ಬಜೆಟ್ನ ಈ ಸಿನಿಮಾ ಬಿಡುಗಡೆ ಆದಾಗ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿತ್ತು. ಧ್ರುವ ಸರ್ಜಾ ದ್ವಿಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಬಿಡುಗಡೆ ಆಗಿತ್ತು. ಆದರೆ ಸಿನಿಮಾದ ಬಿಡುಗಡೆ ಬಳಿಕ ಹಲವರು ಸಿನಿಮಾದ ಬಗ್ಗೆ ಋಣಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ಹೀಗೆ ಸಿನಿಮಾಕ್ಕೆ ನೆಗೆಟಿವ್ ವಿಮರ್ಶೆ ನೀಡಿದ ಯೂಟ್ಯೂಬರ್ ಒಬ್ಬರಿಗೆ ಧ್ರುವ ಸರ್ಜಾ ಅಭಿಮಾನಿಗಳು ಕೆಲವರು ಬೆದರಿಕೆ ಹಾಕಿದ್ದಾರೆ. ಹೀಗೆಂದು ಸ್ವತಃ ಯೂಟ್ಯೂಬರ್ ಆರೋಪ ಮಾಡಿದ್ದಾರೆ.
ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾ ನೋಡಿದ್ದ ಸುಧಾಕರ್ ಹೆಸರಿನ ಕಂಟೆಂಟ್ ಕ್ರಿಯೇಟರ್, ಸಿನಿಮಾ ಚೆನ್ನಾಗಿಲ್ಲ ಎಂದಿದ್ದರು, ಅಲ್ಲದೆ ಚಿತ್ರತಂಡ ಉದ್ದೇಶಪೂರ್ವಕವಾಗಿ ಟಿಕೆಟ್ಗಳನ್ನು ಬುಕ್ ಮಾಡಿ ನಕಲಿ ಹೌಸ್ಫುಲ್ ಪ್ರದರ್ಶನ ಮಾಡಿಸುತ್ತಿದೆ. ಬುಕ್ ಮೈ ಶೋನಲ್ಲಿ ಥೀಯೇಟರ್ ಫುಲ್ ತೋರಿಸುತ್ತಿದೆ ಚಿತ್ರಮಂದಿರಕ್ಕೆ ಹೋದರೆ ಜನವೇ ಇರಲಿಲ್ಲ ಎಂದಿದ್ದರು. ಅಲ್ಲದೆ, ಧ್ರುವ ಸರ್ಜಾ ನಟನೆಯನ್ನೂ ಸಹ ಟೀಕೆ ಮಾಡಿದ್ದರು, ಪ್ರಾಣಿಗಳ ರೀತಿ ಅರಚುತ್ತಿರುತ್ತಾರೆ, ಅದನ್ನು ನೋಡಿ ಜನ ಥಿಯೇಟರ್ನಲ್ಲಿ ನಗುತ್ತಿದ್ದರು ಎಂದಿದ್ದರು.
ಸುಧಾಕರ್ ಗೌಡ ನೀಡಿರುವ ವಿಮರ್ಶೆಗೆ, ಧ್ರುವ ಸರ್ಜಾ ಅಭಿಮಾನಿಗಳು ತೀವ್ರ ಆಕ್ರೋಶ ಹೊರಹಾಕಿದ್ದರು. ‘ನಿನಗೆ ಸಿನಿಮಾ ಇಷ್ಟವಾಗಿಲ್ಲವೆಂದರೆ ಅದನ್ನು ನಿನ್ನ ಬಳಿ ಇಟ್ಟುಕೊ ಹೊರಗೆ ಯಾಕೆ ಹೇಳಬೇಕು’ ಎಂದು ಪ್ರಶ್ನೆ ಮಾಡಿದ್ದರು. ಧ್ರುವ ಸರ್ಜಾ ಅಭಿಮಾನಿಗಳ ವಿರೋಧ ವ್ಯಕ್ತವಾದ ಬಳಿಕ ಸುಧಾಕರ್, ಧ್ರುವ ಅಭಿಮಾನಿಗಳ ಬಳಿ ಕ್ಷಮೆ ಸಹ ಕೇಳಿದ್ದರು. ಆದರೆ ಆದರೂ ಸಹ ಬೆದರಿಕೆ, ಟ್ರೋಲಿಂಗ್ ಮುಂದುವರೆದ ಕಾರಣ ದೀಗ ಸುಧಾಕರ್ ಹೊಸ ವಿಡಿಯೋ ಒಂದನ್ನು ಅಪ್ಲೋಡ್ ಮಾಡಿದ್ದು, ‘ಸುಮಾರು 300 ಕ್ಕೂ ಹೆಚ್ಚು ಕರೆಗಳು ಬಂದಿವೆ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಮಾತ್ರವೇ ಅಲ್ಲದೆ, ಕೊಲೆ ಬೆದರಿಕೆ ಸಹ ಹಾಕಲಾಗಿದೆ’ ಎಂದಿದ್ದಾರೆ.
ಇದನ್ನೂ ಓದಿ:ಸೋಮವಾರ ತಗ್ಗಿತು ‘ಮಾರ್ಟಿನ್’ ಸಿನಿಮಾ ಗಳಿಕೆ; ಒಟ್ಟಾರೆ ಕಲೆಕ್ಷನ್ ಎಷ್ಟು?
ಸುಧಾಕರ್ ಸಹ ಧ್ರುವ ಅಭಿಮಾನಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದು, ತನ್ನ ವಿಳಾಸವನ್ನು ವಿಡಿಯೋದಲ್ಲಿ ನೀಡಿದ್ದು, ಇದೇ ನನ್ನ ವಿಳಾಸ, ಬಂದು ಮಾತನಾಡೋಣ, ಚರ್ಚೆ ಮಾಡೋಣ ಎನ್ನುವ ಉದ್ದೇಶಿದಿಂದ ಬರುವಿರಾದರೆ ಬನ್ನಿ, ಜಗಳ ಮಾಡಲು ಬರುವಿರಾದರೆ ನಾನೂ ಸಹ ತಯಾರಾಗಿಯೇ ಇರುತ್ತೀನಿ’ ಎಂದಿದ್ದಾರೆ.
‘ಮಾರ್ಟಿನ್’ ಸಿನಿಮಾ ಕಳೆದ ವಾರವಷ್ಟೆ ಬಿಡುಗಡೆ ಆಗಿದೆ. ಎಪಿ ಅರ್ಜುನ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಸಿನಿಮಾ ದೇಶಪ್ರೇಮದ ಕತೆಯನ್ನು ಒಳಗೊಂಡಿದೆ. ಸಿನಿಮಾವನ್ನು ಉದಯ್ ಮೆಹ್ತಾ ನಿರ್ಮಾಣ ಮಾಡಿದ್ದಾರೆ. ಆದರೆ ಸಿನಿಮಾ ಅಷ್ಟೇನೂ ಚೆನ್ನಾಗಿಲ್ಲ ಎಂಬ ಅಭಿಪ್ರಾಯಗಳು ಹೊರಬಿದ್ದಿವೆ. ಆದರೆ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:48 pm, Tue, 15 October 24