ಭಾರತೀಯ ಚಿತ್ರರಂಗದ ದಿಗ್ಗಜ ನಟ ದಿಲೀಪ್ ಕುಮಾರ್ ಅವರು ಇಂದು (ಜು.7) ನಿಧನರಾಗಿರುವುದು ನೋವಿನ ಸಂಗತಿ. ಅವರ ಜೊತೆ ಒಡನಾಡಿದ ಅನೇಕರು ತಮ್ಮ ನೆನಪಿನ ಪುಟ ತೆರೆಯುತ್ತಿದ್ದಾರೆ. ದಿಲೀಪ್ ಕುಮಾರ್ ಆತ್ಮಕ್ಕೆ ಶಾಂತಿ ಕೋರುತ್ತಲೇ ಕೆಲವು ಅವಿಸ್ಮರಣೀಯ ಘಟನೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ನಟ ಪುನೀತ್ ರಾಜ್ಕುಮಾರ್ ಕೂಡ ಒಂದೆರಡು ಬಾರಿ ದಿಲೀಪ್ ಕುಮಾರ್ ಅವರನ್ನು ಭೇಟಿ ಮಾಡಿದ್ದರು. ಆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಸಮೇತ ಮಾಹಿತಿ ಹಂಚಿಕೊಂಡಿರುವ ಪುನೀತ್ ಅವರು ದಿಲೀಪ್ ಕುಮಾರ್ಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
5 ದಶಕಗಳ ಕಾಲ ಬಾಲಿವುಡ್ನಲ್ಲಿ ಸ್ಟಾರ್ ಆಗಿ ಮಿಂಚಿದ ದಿಲೀಪ್ ಕುಮಾರ್ಗೆ ಕರುನಾಡು ಮತ್ತು ಕನ್ನಡ ಚಿತ್ರರಂಗದ ಜೊತೆಗೆ ಒಡನಾಟ ಇತ್ತು. ಚಂದನವನದ ಮೇರು ನಟ ಡಾ. ರಾಜ್ಕುಮಾರ್ ಮತ್ತು ದಿಲೀಪ್ ಕುಮಾರ್ ಅನೇಕ ಸಂದರ್ಭಗಳಲ್ಲಿ ಭೇಟಿ ಆಗಿದ್ದರು. ಅದನ್ನು ಈಗ ಪುನೀತ್ ನೆನಪಿಸಿಕೊಂಡಿದ್ದಾರೆ. ‘ಎರಡು ಬಾರಿ ದಿಲೀಪ್ ಕುಮಾರ್ ಅವನ್ನು ಭೇಟಿ ಮಾಡುವ ಅವಕಾಶ ಸಿಕ್ಕಿದ್ದಕ್ಕೆ ನಾನು ಧನ್ಯ’ ಎಂದು ಅವರು ಹೇಳಿದ್ದಾರೆ.
‘ಅಪ್ಪಾಜಿ (ಡಾ. ರಾಜ್ಕುಮಾರ್) ಮತ್ತು ದಿಲೀಪ್ ಕುಮಾರ್ ಅವರು ಪರಸ್ಪರ ಆದರದ ಭಾವ ಮತ್ತು ಗೌರವವನ್ನು ಹೊಂದಿದ್ದರು. ಅಪ್ಪಾಜಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆಯುವಾಗ ನಾನು ಅವರನ್ನು ಭೇಟಿಯಾಗಿದ್ದು ನೆನಪಾಗುತ್ತಿದೆ. ಭಾರತೀಯ ಚಿತ್ರರಂಗಕ್ಕೆ ನೀಡಿದ ಅಪಾರ ಕೊಡುಗೆಯ ಕಾರಣಕ್ಕಾಗಿ ಅವರನ್ನು ಎಂದಿಗೂ ಸ್ಮರಿಸಲಾಗುವುದು’ ಎಂದು ಟ್ವೀಟ್ ಮಾಡಿರುವ ಪುನೀತ್ ಅವರು ಅಪರೂಪದ ಒಂದು ಫೋಟೋ ಹಂಚಿಕೊಂಡಿದ್ದಾರೆ.
RIP @TheDilipKumar Sir.Blessed to have met him on two occasions. Both Appaji & Dilip Sir shared a warm & mutual respect for each other.I recollect meeting him when Appaji was receiving the Dadasaheb Phalke Award .Will be remembered for his great contribution to Indian Cinema pic.twitter.com/MHQMXh6qzZ
— Puneeth Rajkumar (@PuneethRajkumar) July 7, 2021
ನರೇಂದ್ರ ಮೋದಿ, ರಾಹುಲ್ ಗಾಂಧಿ, ಅಮಿತಾಭ್ ಬಚ್ಚನ್, ಅಕ್ಷಯ್ ಕುಮಾರ್, ಸಲ್ಮಾನ್ ಖಾನ್, ಸೋನು ಸೂದ್, ಬಿ.ಎಸ್. ಯಡಿಯೂರಪ್ಪ ಸೇರಿದಂತೆ ನೂರಾರು ಗಣ್ಯರು ದಿಲೀಪ್ ಕುಮಾರ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಹಲವು ಬಾರಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಜೂ.30ರಂದು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು ಅವರು ನಿಧನರಾದ ಕಹಿ ಸುದ್ದಿ ಹೊರಬಿತ್ತು. 98 ವರ್ಷಗಳ ತುಂಬು ಜೀವನ ನಡೆಸಿದ ದಿಲೀಪ್ ಕುಮಾರ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅಪಾರ ಸಂಖ್ಯೆಯ ಅಭಿಮಾನಿಗಳು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.
ಇದನ್ನೂ ಓದಿ:
Dilip Kumar Death: ಲೆಜೆಂಡರಿ ನಟ ದಿಲೀಪ್ ಕುಮಾರ್ ಬಗ್ಗೆ ಯಡಿಯೂರಪ್ಪ, ಅಮಿತಾಭ್, ಸೋನು ಸೂದ್ ಹೇಳಿದ್ದೇನು?
ಪೆಟ್ಟು ತಿನ್ನಬೇಕಾಗುತ್ತೆ ಎಂಬ ಭಯದಲ್ಲಿ ಖಾನ್ ಬದಲು ದಿಲೀಪ್ ಕುಮಾರ್ ಎಂದು ಹೆಸರಿಟ್ಟುಕೊಂಡಿದ್ದ ದಿಗ್ಗಜ ನಟ