‘ನಾನು ಬೆಂಗಳೂರಲ್ಲಿ ಇರಲ್ಲ; ಬೇಜಾರು ಮಾಡ್ಕೋಬೇಡಿ’: ಶಿವಣ್ಣ ಮಹತ್ವದ ನಿರ್ಧಾರ
Shivarajkumar: ‘ನಿಮಗೆ ಎಷ್ಟು ಬೇಜಾರು ಆಗುತ್ತಿದೆಯೋ ನನಗೂ ಅಷ್ಟೇ ಬೇಜಾರಾಗುತ್ತಿದೆ. ನಿಮ್ಮ ಶುಭಾಶಯಗಳನ್ನು ಸೋಶಿಯಲ್ ಮೀಡಿಯಾ ಮೂಲಕವೇ ತಿಳಿಸಿ’ ಎಂದು ಶಿವರಾಜ್ಕುಮಾರ್ ಅವರು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ಶಿವರಾಜ್ಕುಮಾರ್ ಅವರು ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಅವರ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸೋಕೆ ಲಕ್ಷಾಂತರ ಅಭಿಮಾನಿಗಳು ಕಾದಿದ್ದಾರೆ. ಆದರೆ ಈ ಬಾರಿ ತಾವು ಹುಟ್ಟುಹಬ್ಬ ಆಚರಿಸಿಕೊಳ್ಳೋದಿಲ್ಲ ಎಂದು ಶಿವರಾಜ್ಕುಮಾರ್ ಹೇಳಿದ್ದಾರೆ. ಅವರ ಈ ಮಹತ್ವದ ನಿರ್ಧಾರಕ್ಕೆ ಕೊರೊನಾ ಕಾರಣ. ಜು.12ರಂದು ಶಿವಣ್ಣನ ಜನ್ಮದಿನ. ಆದರೆ ಅಂದು ತಾವು ಬೆಂಗಳೂರಿನಲ್ಲಿ ಇರುವುದಿಲ್ಲ ಎಂದು ಮುಂಚಿತವಾಗಿಯೇ ಅಭಿಮಾನಿಗಳಿಗೆ ಅವರು ಮಾಹಿತಿ ನೀಡಿದ್ದಾರೆ. ಎಲ್ಲರೂ ಸೇಫ್ ಆಗಿ ಇರುವಂತೆ ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ವಿಡಿಯೋ ಪೋಸ್ಟ್ ಮಾಡುವ ಮೂಲಕ ಶಿವಣ್ಣ ಮಾಹಿತಿ ನೀಡಿದ್ದಾರೆ. ‘ಎಲ್ಲರಿಗೂ ನಮಸ್ಕಾರ. ನನ್ನ ಹುಟ್ಟುಹಬ್ಬಕ್ಕಿಂತಲೂ ನಿಮ್ಮೆಲ್ಲರ ಆರೋಗ್ಯ ನನಗೆ ಮುಖ್ಯ. ದೇವರ ದಯೆಯಿಂದ ಕೊರೊನಾ ಕಡಿಮೆ ಆಗಿದೆ. ಹಾಗಂತ ನಾವು ಎಚ್ಚರಿಕೆಯಿಂದ ಇರಬೇಕಾದ ಸಮಯ ಇನ್ನೂ ಮುಗಿದಿಲ್ಲ. ಮುಂದೆ ಇನ್ನೂ ಎಚ್ಚರಿಕೆಯಿಂದ ಇರಬೇಕು’ ಎಂದು ಶಿವರಾಜ್ಕುಮಾರ್ ಹೇಳಿದ್ದಾರೆ.
‘ಜು.12 ನಾನು ಹುಟ್ಟಿದ ದಿನ. ಕೆಲವು ಕಾರಣದಿಂದ ನಾನು ಬೆಂಗಳೂರಲ್ಲಿ ಇರುವುದಿಲ್ಲ. ದಯವಿಟ್ಟು ಬೇಜಾರು ಮಾಡಿಕೊಳ್ಳಬೇಡಿ. ನಿಮಗೆ ಎಷ್ಟು ಬೇಜಾರು ಆಗುತ್ತಿದೆಯೋ ನನಗೂ ಅಷ್ಟೇ ಬೇಜಾರಾಗುತ್ತಿದೆ. ನಿಮ್ಮ ಶುಭಾಶಯಗಳನ್ನು ಸೋಶಿಯಲ್ ಮೀಡಿಯಾ ಮೂಲಕ ತಿಳಿಸಿ. ಯಾಕೆಂದರೆ, ನಿಮ್ಮೆಲ್ಲರ ಹಾರೈಕೆ, ಪ್ರೀತಿ, ಪ್ರೋತ್ಸಾಹ ನನಗೆ ಯಾವಾಗಲೂ ಇರಬೇಕು. ಅದನ್ನೇ ನಾನು ಬಯಸೋದು’ ಎಂದು ‘ಹ್ಯಾಟ್ರಿಕ್ ಹೀರೋ’ ಹೇಳಿದ್ದಾರೆ.
‘ಕೊರೊನಾ ನಿಯಂತ್ರಿಸೋಕೆ ಇರುವ ನಿಯಮಗಳನ್ನು ದಯವಿಟ್ಟು ಎಲ್ಲರೂ ಪಾಲನೆ ಮಾಡಿ. ಎಲ್ಲಿ ಹೋದರೂ ಮಾಸ್ಕ್ ಹಾಕಿಕೊಳ್ಳಿ. ಸಾಮಾಜಿಕ ಅಂತರ ಕಾಪಾಡಿಕೊಳ್ಳಿ. ಲಸಿಕೆ ಪಡೆದುಕೊಳ್ಳಿ. ಈ ಮಾತನ್ನು ಮರೆಯಬೇಡಿ. ದಯವಿಟ್ಟು ಬೇಜಾರು ಮಾಡಿಕೊಳ್ಳಬೇಡಿ ಎಂದು ಮತ್ತೆ ಮತ್ತೆ ಕೇಳಿಕೊಳ್ಳುತ್ತಿದ್ದೇನೆ. ಆದಷ್ಟು ಬೇಗ ಕೊರೊನಾ ಕಡಿಮೆ ಆಗಿ, ನಾವೆಲ್ಲರೂ ಸೇರುವಂತೆ ಆಗಲಿ ಎಂದು ಆ ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳೋಣ. ಮನೆಯಲ್ಲಿರಿ, ಸೇಫ್ ಆಗಿರಿ. ಎಲ್ಲರೂ ಸೇಫ್ ಆಗಿರುವಂತೆ ನೋಡಿಕೊಳ್ಳಿ’ ಎಂದು ಶಿವಣ್ಣ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:
ಶಿವರಾಜ್ಕುಮಾರ್-ಸುಧಾರಾಣಿ ‘ಆನಂದ್’ ಚಿತ್ರಕ್ಕೆ 35 ವರ್ಷ; ಅಪರೂಪದ ಫೋಟೋ ಹಂಚಿಕೊಂಡ ನಟಿ