
ನಿರ್ದೇಶಕ ಜೋಗಿ ಪ್ರೇಮ್ (Jogi Prem) ಅವರ ಕಂಠದಲ್ಲಿ ಮೂಡಿಬಂದ ಹಾಡುಗಳು ಸೂಪರ್ ಹಿಟ್ ಆಗಿವೆ. ಈಗ ಅವರು ‘ಲೈಫ್ ಟುಡೇ’ ಸಿನಿಮಾದ ಒಂದು ಹಾಡಿಗೆ ಧ್ಬನಿ ನೀಡಿದ್ದಾರೆ. ಇತ್ತೀಚೆಗೆ ಈ ಹಾಡಿನೆ ರೆಕಾರ್ಡಿಂಗ್ ನಡೆಯಿತು. ಈ ಕಾಲದ ಯುವ ಪ್ರೇಕ್ಷಕರಿಗೆ ಇಷ್ಟ ಆಗುವಂತಹ ಟ್ರೆಂಡೀ ಕಹಾನಿ ಈ ಸಿನಿಮಾದಲ್ಲಿ ಇರಲಿದೆ. ಇದು ಪಕ್ಕಾ ಲವ್ ಸಬ್ಜೆಕ್ಟ್ ಇರುವ ಸಿನಿಮಾ. ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ತಯಾರಾಗುತ್ತಿದೆ. ಕಾಂತ ಕನ್ನಲ್ಲಿ ಅವರು ‘ಲೈಫ್ ಟುಡೇ’ (Life Today) ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.
‘ಲೈಫ್ ಟುಡೇ’ ಚಿತ್ರದ ತಮಿಳು ವರ್ಷನ್ ಹಾಡಿಗೆ ಖ್ಯಾತ ಸಂಗೀತ ನಿರ್ದೇಶ ಜಿ.ವಿ. ಪ್ರಕಾಶ್ ಅವರು ಧ್ವನಿ ಆಗಿದ್ದಾರೆ. ಅದರ ಕನ್ನಡ ಅವತರಣಿಕೆ ‘ಸಿಕ್ಕರೇ.. ಸಿಕ್ಕರೇ… ಒಳ್ಳೆ ಹುಡುಗ್ರು ಸಿಕ್ಕರೇ…’ ಗೀತೆಯನ್ನು ಜೋಗಿ ಪ್ರೇಮ್ ಅವರು ಹಾಡಿದ್ದಾರೆ. ಶ್ರೀಧರ್ ವಿ. ಸಂಭ್ರಮ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ರಾಮ್ ನಾರಾಯಣ್ ಅವರು ಸಾಹಿತ್ಯ ಬರೆದಿದ್ದಾರೆ.
ಈ ಗೀತೆ ಸೂಪರ್ ಹಿಟ್ ಆಗುತ್ತದೆ ಎಂದು ಜೋಗಿ ಪ್ರೇಮ್ ಅವರು ಭವಿಷ್ಯ ನುಡಿದಿದ್ದಾರೆ. ಈ ವೇಳೆ ಅವರ ಸಂಭಾವನೆ ಬಗ್ಗೆಯೂ ಪ್ರಸ್ತಾಪ ಆಯಿತು. ಪ್ರೇಮ್ ಒಂದು ಸಾಂಗ್ ಹಾಡಲು 5 ಲಕ್ಷ ರೂಪಾಯಿ ತೆಗೆದುಕೊಳ್ಳುತ್ತಾರೆ ಎಂಬ ಮಾತಿದೆ. ‘ನಾನು 10 ಲಕ್ಷ ರೂಪಾಯಿ ಕೇಳ್ತೀನಿ. ಮುಂಬೈಯವರಿಗೆ ಆದ್ರೆ ಕೊಡ್ತೀರ. ಕನ್ನಡಿಗರಿಗೆ ಯಾಕೆ ಕೊಡಬಾರದು? ನಾನು ಹಾಡುವ ಹಾಡಿನ ಸಂಭಾವನೆಯು ಟ್ರಸ್ಟ್ ಸೇರುತ್ತದೆ. ಅಮ್ಮನ ಟ್ರಸ್ಟ್ ಮೂಲಕ ಅನೇಕ ಸಾಮಾಜಿಕ ಸೇವೆಗೆ ಬಳಕೆ ಆಗುತ್ತೆ’ ಎಂದು ಅವರು ಹೇಳಿದ್ದಾರೆ.
ಸಂಗೀತ ನಿರ್ದೇಶಕ ಶ್ರೀಧರ್ ವಿ. ಸಂಭ್ರಮ್ ಮಾತನಾಡಿ, ‘ಪ್ರೇಮ್ ಅವರು ಹಾಡಲು ಸಿಕ್ಕಿರುವುದೇ ನಮ್ಮ ಪುಣ್ಯ. ನಾನು ಅವರ ಬಹುದೊಡ್ಡ ಅಭಿಮಾನಿ. ಅವರ ಧ್ವನಿಯಲ್ಲಿರುವ ಮುಗ್ಧತೆ ಹಾಗೂ ನೋವಿನ ಗಾಢತೆ ಈ ಗೀತೆಗೆ ಬೇಕಿತ್ತು. ಅದು ಸಿಕ್ಕಿದೆ. ಖಂಡಿತವಾಗಿಯೂ ಲೈಫ್ ಟುಡೇ ಆಲ್ಪಂ ದೊಡ್ಡ ಹಿಟ್ ಆಗುತ್ತದೆ ಎಂಬ ಭರವಸೆ ಇದೆ’ ಎಂದು ಹೇಳಿದರು.
ಇದನ್ನೂ ಓದಿ: ಓಪನ್ ಆಗಿ ಹೇಳ್ತೀನಿ, ಏನು ಬೇಕಾದ್ರೂ ಟ್ರೋಲ್ ಮಾಡಿಕೊಳ್ಳಿ: ಜೋಗಿ ಪ್ರೇಮ್
ಪ್ರೇಮ್ ನೀಡಿರುವ ಪ್ರೋತ್ಸಾಹಕ್ಕೆ ನಿರ್ದೇಶಕ ಕಾಂತ ಕನ್ನಲ್ಲಿ, ನಿರ್ಮಾಪಕ ಪ್ರದೀಪ್, ನಾಯಕ ಕಿರಣ್ ಆದಿತ್ಯ ಅವರು ಧನ್ಯವಾದ ತಿಳಿಸಿದರು. ‘ಈ ಸಿನಿಮಾದಲ್ಲಿ ಈಗಿನ ತಲೆಮಾರಿನ ಪ್ರೇಕ್ಷಕರು ಮೆಚ್ಚುವಂತಹ ಕಥೆ ಇದೆ’ ಎಂದು ಚಿತ್ರತಂಡ ಹೇಳಿದೆ. ಕಿರಣ್ ಆದಿತ್ಯ ಅವರಿಗೆ ಜೋಡಿಯಾಗಿ ಲೇಖಚಂದ್ರ ನಟಿಸಿದ್ದಾರೆ. ರಥರ್ವ, ತಬಲನಾಣಿ, ಕಾಕ್ರೋಚ್ ಸುಧಿ, ಜಗ್ಗಪ್ಪ, ಅಪೂರ್ವ ಮುಂತಾದವರು ಪಾತ್ರವರ್ಗದಲ್ಲಿ ಇದ್ದಾರೆ. ಗುರುಪ್ರಸಾದ್ ಅವರು ಛಾಯಾಗ್ರಹಣ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.