ಸೈಮಾನಲ್ಲಿ ಮತ್ತೆ ಕನ್ನಡಿಗರಿಗೆ ಅವಮಾನ, ವೇದಿಕೆ ಮೇಲೆ ಎಚ್ಚರಿಕೆ ಕೊಟ್ಟ ದುನಿಯಾ ವಿಜಿ
SIMA Awards 2025: ದುಬೈನಲ್ಲಿ ದಕ್ಷಿಣ ಭಾರತ ಚಿತ್ರರಂಗದ ಪ್ರಶಸ್ತಿ ವಿತರಣಾ ಸಮಾರಂಭವಾದ ಸೈಮಾ ನಡೆಯುತ್ತಿದೆ. ಈ ಹಿಂದೆ ಕೆಲ ಬಾರಿ ಸೈಮಾನಲ್ಲಿ ಕನ್ನಡದ ನಟ-ನಟಿಯರಿಗೆ ಅವಮಾನವಾಗಿದ್ದ ವರದಿಯಾಗಿತ್ತು. ಈ ಬಾರಿ ಮತ್ತೆ ಅದು ಮುಂದುವರೆದಿದ್ದು, ನಟ ದುನಿಯಾ ವಿಜಯ್ ವೇದಿಕೆ ಮೇಲೆಯೇ ಇದನ್ನು ಖಂಡಿಸಿದ್ದಾರೆ.

ದುಬೈನಲ್ಲಿ ಸೈಮಾ 2025 ಪ್ರಶಸ್ತಿ ವಿತರಣಾ ಸಮಾರಂಭ ನಡೆಯುತ್ತಿದೆ. ದಕ್ಷಿಣ ಭಾರತದ ಚಿತ್ರರಂಗಗಳಲ್ಲಿ ಆಯಾ ಭಾಷೆಯ ಅತ್ಯುತ್ತಮ ಸಿನಿಮಾಗಳನ್ನು ಗುರುತಿಸಿ ನಟ-ನಟಿಯರು ಹಾಗೂ ತಂತ್ರಜ್ಞರಿಗೆ ಪ್ರಶಸ್ತಿ ನೀಡುವ ಸಮಾರಂಭ ಇದಾಗಿದೆ. ಕಳೆದ ಬಾರಿ ಸೈಮಾ ಪ್ರಶಸ್ತಿ ಸಮಾರಂಭ ನಡೆದಾಗ ಕನ್ನಡದ ಸೆಲೆಬ್ರಿಟಿಗಳಿಗೆ ಆಯೋಜಕರಿಂದ ಅವಮಾನವಾಗಿತ್ತು, ಸೂಕ್ತ ವಸತಿ, ಪ್ರಯಾಣ ಸೌಲಭ್ಯಗಳನ್ನು ನೀಡಲಾಗಿರಲಿಲ್ಲ. ಆದರೆ ಈ ಬಾರಿ ಎಲ್ಲವೂ ಸರಿ ಹೋಗಲಿದೆ ಎಂಬ ನಿರೀಕ್ಷೆ ಮತ್ತೆ ಹುಸಿಯಾಗಿದ್ದು, ಮತ್ತೊಮ್ಮೆ ಸೈಮಾನಲ್ಲಿ ಕನ್ನಡಿಗರಿಗೆ ಅವಮಾನ ಮಾಡಲಾಗಿದೆ.
ಸೈಮಾ ಕಾರ್ಯಕ್ರಮ ಸಾಮಾನ್ಯವಾಗಿ ಎರಡು ದಿನ ನಡೆಯುತ್ತದೆ. ಪ್ರತಿದಿನವೂ ಎರಡು ಭಾಷೆಯ ಚಿತ್ರರಂಗಗಳವರಿಗೆ ಪ್ರಶಸ್ತಿ ನೀಡಲಾಗುತ್ತದೆ. ನಿನ್ನೆ (ಸೆಪ್ಟೆಂಬರ್ 05) ರ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ತೆಲುಗು ಮತ್ತು ಕನ್ನಡ ಭಾಷೆಯ ಅತ್ಯುತ್ತಮ ಸಿನಿಮಾ ಮತ್ತು ತಂತ್ರಜ್ಞರುಗಳಿಗೆ ಪ್ರಶಸ್ತಿ ವಿತರಣೆ ನಡೆಯಿತು. ನಟ ಸುದೀಪ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ದೊರಕಿತು. ಆದರೆ ತೆಲುಗು ಸಿನಿಮಾದವರಿಗೆ ಮೊದಲ ಆದ್ಯತೆಯನ್ನು ಆಯೋಜಕರು ನೀಡಿದ್ದು ಸ್ಪಷ್ಟವಾಗಿ ಗೋಚರಿಸಿತು. ಇದನ್ನು ದುನಿಯಾ ವಿಜಯ್ ಸೈಮಾ ವೇದಿಕೆ ಮೇಲೆಯೇ ಗಟ್ಟಿಯಾಗಿ ಖಂಡಿಸಿದರು.
ಮೊದಲಿಗೆ ತೆಲುಗು ಸಿನಿಮಾಗಳವರಿಗೆ ಪ್ರಶಸ್ತಿ ವಿತರಣೆ ಮಾಡಲಾಯ್ತು. ಅವರ ಪ್ರಶಸ್ತಿ ವಿತರಣೆ ಮುಗಿಯುವ ವೇಳೆಗಾಗಲೆ ಸಮಯ ಮೀರಿ ಬಹಳ ತಡವಾಗಿತ್ತು. ಸಹಜವಾಗಿಯೇ ತೆಲುಗು ಚಿತ್ರರಂಗದ ಸೆಲೆಬ್ರಿಟಿಗಳು ಕಾರ್ಯಕ್ರಮದಿಂದ ನಿರ್ಗಮಿಸಿದರು. ತಡವಾಗಿದ್ದ ಕಾರಣ ಜನರು ಸಹ ಬಹುತೇಕ ನಿರ್ಗಮಿಸಿದರು. ವೇದಿಕೆ ಮುಂಭಾಗ ಬಹುತೇಕ ಖಾಲಿ ಆದ ಬಳಿಕ ಕನ್ನಡಿಗರಿಗೆ ಪ್ರಶಸ್ತಿ ನೀಡಲು ಆಯೋಜಕರು ಮುಂದಾದರು.
ಇದನ್ನೂ ಓದಿ:ಸೈಮಾ 2025: ಸುದೀಪ್ ಅತ್ಯುತ್ತಮ ನಟ, ಉಪೇಂದ್ರ ಅತ್ಯುತ್ತಮ ನಿರ್ದೇಶನ; ಸಂಪೂರ್ಣ ವಿನ್ನರ್ ಪಟ್ಟಿ
ದುನಿಯಾ ವಿಜಯ್ ಅವರಿಗೆ ‘ಭೀಮ’ ಸಿನಿಮಾಕ್ಕಾಗಿ ಅತ್ಯುತ್ತಮ ನಿರ್ದೇಶಕ ಕ್ರಿಟಿಕ್ಸ್ ಅವಾರ್ಡ್ ಘೋಷಣೆಯಾಯ್ತು. ಪ್ರಶಸ್ತಿ ಸ್ವೀಕರಿಸಲು ವೇದಿಕೆಗೆ ಹೋದ ದುನಿಯಾ ವಿಜಯ್ ಅಲ್ಲಿಯೇ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ‘ಯಾರೂ ಇಲ್ಲದಿದ್ದಾಗ ಸ್ಟೇಜ್ ಗೆ ಕರೆದು ಕನ್ನಡಿಗರಿಗೆ ಅವಾರ್ಡ್ಸ್ ಕೊಡೊದು ಎಷ್ಟು ಸರಿ? ಕನ್ನಡ ಭಾಷೆ ಮೇಲಿದೆ ಅದನ್ನ ಕೆಳಗಿಳಿಸೋ ಪ್ರಯತ್ನ ಮಾಡಬೇಡಿ. ಮುಂದಿನ ಕಾರ್ಯಕ್ರಮಕ್ಕೆ ಈ ರೀತಿ ಮಾಡಬೇಡಿ, ಹೀಗಾದರೆ ಇನ್ನು ಮುಂದೆ ನಾವ್ಯಾರು ಸೈಮಾ ಕಾರ್ಯಕ್ರಮಕ್ಕೆ ಬರೋದಿಲ್ಲ. ಪ್ರತಿ ಬಾರಿ ಕನ್ನಡವನ್ನು ಕೆಳಗಿಳಿಸಿ ಬೇರೆ ಭಾಷೆಯ ಯಾವ ಸ್ಟಾರು ಇಲ್ಲದಿದ್ದಾಗ ನಮ್ಮನ್ನ ವೇದಿಕೆಗೆ ಕರೆಯೋದು ಯಾಕೆ?’ ಎಂದು ಖಾರವಾಗಿಯೇ ಅವರು ಪ್ರಶ್ನೆ ಮಾಡಿದರು.
ಸುದೀಪ್ ಅವರ ಪರವಾಗಿ ವಿ ನಾಗೇಂದ್ರ ಅವರು ಪ್ರಶಸ್ತಿ ಸ್ವೀಕಾರ ಮಾಡಿದರು. ಆ ವೇಳೆಗಾಗಲೇ ವೇದಿಕೆ ಮುಂಭಾಗ ಯಾರೂ ಇರಲಿಲ್ಲ. ಈ ರೀತಿ ಆಗುತ್ತಿರುವುದು ಇದು ಮೊದಲೇನೂ ಅಲ್ಲ. ಈ ಹಿಂದೆ ನಟ ದರ್ಶನ್ ಹಾಗೂ ಇನ್ನೂ ಕೆಲವರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಕನ್ನಡದ ನಟರನ್ನು ಹಿಂದಿನ ಸಾಲಿನಲ್ಲಿ ಕೂರಿಸುತ್ತಾರೆ. ನಮಗೆ ಆದ್ಯತೆ ನೀಡುವುದಿಲ್ಲ ಎಂದು ಆರೋಪಿಸಿದ್ದ ದರ್ಶನ್, ಸೈಮಾ ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂಬ ನಿಲವು ತಳೆದಿದ್ದರು. ಬಳಿಕ ಬೆಂಗಳೂರಿನಲ್ಲಿ ಕಾರ್ಯಕ್ರಮ ನಡೆದಾಗಲಷ್ಟೆ ಹೋಗಿ ಮುಂದಿನ ಸಾಲಿನಲ್ಲಿಯೇ ಕೂತಿದ್ದರು. ಈಗ ಮತ್ತೊಮ್ಮೆ ಅದೇ ಅವಮಾನ ಮುಂದುವರೆದಿದೆ. ಕನ್ನಡದ ಸೆಲೆಬ್ರಿಟಿಗಳು ಒಟ್ಟಾಗಿ ನಿರ್ಣಯ ತೆಗೆದುಕೊಳ್ಳುವ ಸಮಯ ಬಂದಂತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:57 pm, Sat, 6 September 25




