ಕಿಚ್ಚ ಸುದೀಪ್ (Sudeep) ಅವರಿಗೆ ಅನಾಮಧೇಯ ಬೆದರಿಕೆ ಪತ್ರ (Threat Letter) ಬರೆದಿದ್ದ ಪ್ರಕರಣವನ್ನು ಸಿಸಿಬಿ ಪೊಲೀಸರು ಭೇದಿಸಿದ್ದು, ಆರೋಪಿ ಡೈರೆಕ್ಟರ್ ರಮೇಶ್ ಕಿಟ್ಟಿಯನ್ನು ಬಂಧಿಸಲಾಗಿದೆ. ಆರೋಪಿ ರಮೇಶ್ ಕಿಟ್ಟಿ, ಸುದೀಪ್ಗೆ ಆಪ್ತನೇ ಆಗಿದ್ದ, ಕಿಚ್ಚ ಸುದೀಪ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷನಾಗಿದ್ದ ಆದರೆ ಸುದೀಪ್ ಅವರೊಟ್ಟಿಗೆ ಹಣಕಾಸು ವಿಷಯವಕ್ಕೆ ಭಿನ್ನಾಭಿಪ್ರಾಯ ಉಂಟಾದ ಕಾರಣ ಅನಾಮಧೇಯ ಬೆದರಿಕೆ ಪತ್ರ ಬರೆದಿದ್ದಾನೆ.
ಈ ಹಿಂದೆ ಹಲವು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ರಮೇಶ್ ಕಿಟ್ಟಿ, 2004 ರಲ್ಲಿ ಒಂದು ಕನ್ನಡ ಸಿನಿಮಾ ನಿರ್ದೇಶನವನ್ನೂ ಮಾಡಿದ್ದಾರೆ. ಆ ಬಳಿಕ ಕಿಚ್ಚ ಸುದೀಪ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾಗಿ ಕೆಲಸ ಮಾಡಲು ಆರಂಭಿಸಿದ್ದಾರೆ.
ಚಾರಿಟೇಬಲ್ ಟ್ರಸ್ಟ್ಗೆ ರಮೇಶ್ ಎರಡು ಕೋಟಿ ಹಣ ಹೂಡಿಕೆ ಮಾಡಿದ್ದರಂತೆ. ಆ ಹಣವನ್ನು ವಾಪಸ್ ಕೇಳಿದಾಗ ಸುದೀಪ್ ಕೊಡಲಿಲ್ಲ ಎಂಬ ಕಾರಣಕ್ಕೆ ಸುದೀಫ್ ಅವರೊಟ್ಟಿಗೆ ವೈಮನಸ್ಯ ಮೂಡಿಸಿಕೊಂಡು ಸುದೀಪ್ಗೆ ಅನಾಮಧೇಯ ಬೆದರಿಕೆ ಪತ್ರ ಬರೆದಿದ್ದಾರೆ. ತಾವೇ ಬೆದರಿಕೆ ಪತ್ರ ಬರೆದಿರುವುದಾಗಿ ಸಿಸಿಬಿ ಪೊಲೀಸರ ಬಳಿ ರಮೇಶ್ ಕಿಟ್ಟಿ ಒಪ್ಪಿಕೊಂಡಿದ್ದಾರೆಂದು ಹೇಳಲಾಗುತ್ತಿದೆ. ಈ ಪ್ರಕರಣದಲ್ಲಿ ಇನ್ನೂ ಕೆಲವರ ಕೈವಾಡ ಇರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದು, ತನಿಖೆ ಮುಂದುವರೆಸಿದ್ದಾರೆ.
ಸುದೀಪ್ ಬಿಜೆಪಿ ಸೇರಲಿದ್ದಾರೆ ಎಂಬ ಗಾಳಿ ಸುಬ್ಬಿದ ಸಂದರ್ಭದಲ್ಲಿಯೇ ಸುದೀಪ್ಗೆ ಎರಡು ಬೆದರಿಕೆ ಪತ್ರಗಳು ಬಂದಿದ್ದವು. ಖಾಸಗಿ ವಿಡಿಯೋ ಲೀಕ್ ಮಾಡುವುದಾಗಿ ಪತ್ರದಲ್ಲಿ ಬೆದರಿಕೆ ಹಾಕಲಾಗಿತ್ತು ಅಲ್ಲದೆ ಅವಾಚ್ಯ ಶಬ್ದಗಳನ್ನು ಸಹ ಬಳಸಲಾಗಿತ್ತು. ಈ ಬಗ್ಗೆ ಸುದೀಪ್ರ ಆಪ್ತ, ನಿರ್ಮಾಪಕ ಜಾಕ್ ಮಂಜು ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸುದೀಪ್ ಸಹ ಈ ಬಗ್ಗೆ ಪ್ರತಿಕ್ರಿಯೆ ನಡೆಸಿ, ಇದು ರಾಜಕೀಯದವರ ಕೃತ್ಯ ಅಲ್ಲ, ಇದನ್ನು ನಮ್ಮವರೇ ಮಾಡಿದ್ದಾರೆ ಅದು ಯಾರೆಂದು ಗೊತ್ತಿದೆ ಅವರಿಗೆ ಕಾನೂನಾತ್ಮಕವಾಗಿ ತಕ್ಕ ಉತ್ತರವನ್ನೇ ನೀಡಲಿದ್ದೇನೆ ಎಂದಿದ್ದರು.
ಇದನ್ನೂ ಓದಿ:ನಕಲಿ ನಂಬರ್ ಪ್ಲೇಟ್ ಇರುವ ಕಾರಿನಲ್ಲಿ ಬಂದು ಸುದೀಪ್ಗೆ ಬೆದರಿಕೆ ಪತ್ರ ಪೋಸ್ಟ್ ಮಾಡಿರುವ ಕಿಡಿಗೇಡಿಗಳು
ಪ್ರಕರಣದ ತನಿಖೆಯ ಪ್ರಾರಂಭಿಕ ಹಂತದಲ್ಲಿ ಸ್ವಿಫ್ಟ್ ಕಾರಿನಲ್ಲಿ ಬಂದ ಅಗಂತುಕರು ದೊಡ್ಡಮಲೂರಿನಲ್ಲಿ ಪೋಸ್ಟ್ ಬಾಕ್ಸ್ಗೆ ಪತ್ರ ಹಾಕಿರುವುದು ಬೆಳಕಿಗೆ ಬಂದಿತ್ತು. ಆದರೆ ಕಾರಿನ ನಂಬರ್ ಪ್ಲೇಟ್ ಪರಿಶೀಲನೆ ಮಾಡಿದಾಗ ನಕಲಿ ನಂಬರ್ ಪ್ಲೇಟ್ ಬಳಸಿರುವುದು ತಿಳಿದು ಬಂದಿತ್ತು. ತನಿಖೆ ಮುಂದುವರೆಸಿದ ಸಿಸಿಬಿ ಪೊಲೀಸರು, ಆಪ್ತರೇ ಈ ಕೃತ್ಯ ಎಸಗಿರುವುದಾಗಿ ಸುದೀಪ್ ಅನುಮಾನ ವ್ಯಕ್ತಪಡಿಸಿದ್ದ ಕಾರಣ ಅವರ ಆಪ್ತವಲಯದವರ ವಿಚಾರಣೆ ನಡೆಸಲಾಗಿ ರಮೇಶ್ ಕಿಟ್ಟಿ ವಿಷಯ ತಿಳಿದು ವಿಚಾರಣೆ ನಡೆಸಿ ಇದೀಗ ಬಂಧಿಸಿದ್ದಾರೆ.
ಕಿಚ್ಚ ಸುದೀಪ ಚಾರಿಟೇಬಲ್ ಟ್ರಸ್ಟ್ ಕೋವಿಡ್ ಸಮಯದಲ್ಲಿ ಬಹಳ ಸಕ್ರಿಯಾಗಿ ಕೆಲಸ ಮಾಡಿತ್ತು. ಆಮ್ಲಜನಕ ಸಿಲಿಂಡರ್ಗಳ ವಿತರಣೆ, ಶಾಲೆಗಳ ದತ್ತು ಸ್ವೀಕಾರ ಸೇರಿದಂತೆ ಒಬ್ಬರಿಗೆ ಚಿಕ್ಕ ಮನೆಯನ್ನು ಕಟ್ಟಿಕೊಡುವ ಕಾರ್ಯವನ್ನೂ ಮಾಡಲಾಗಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ