ಆದಿತ್ಯ ಹೊಸ ಸಿನಿಮಾಕ್ಕೆ ಆರ್.ಚಂದ್ರು ಸಾಥ್, ಟೀಸರ್ ಬಿಡುಗಡೆ
Aditya: ನಟ ಆದಿತ್ಯ ನಟನೆಯ ಹೊಸ ಸಿನಿಮಾ ಟೆರರ್ನ ಟೀಸರ್ ಅನ್ನು ಪ್ಯಾನ್ ಇಂಡಿಯಾ ನಿರ್ದೇಶಕ ಆರ್ ಚಂದ್ರು ಬಿಡುಗಡೆಗೊಳಿಸಿದ್ದಾರೆ.
ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು (Rajendra Singh Babu) ಪುತ್ರ ಆದಿತ್ಯ (Aditya) ಇದೀಗ ಹೊಸದೊಂದು ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಒಂದೊಳ್ಳೆ ಗೆಲುವಿನ ನಿರೀಕ್ಷೆಯಲ್ಲಿರುವ ಆದಿತ್ಯ, ಸರಣಿ ಸೋಲುಗಳು ಬೆನ್ನುಬಿದ್ದಿದ್ದರೂ ಪ್ರಯತ್ನ ನಿಲ್ಲಿಸಿಲ್ಲ. ಇದೀಗ ‘ಟೆರರ್’ (Terror) ಹೆಸರಿನ ಸಿನಿಮಾ ಮೂಲಕ ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸಲು ಬಂದಿದ್ದಾರೆ. ಈ ಸಿನಿಮಾಕ್ಕೆ ಸಂಬಂಧಿಸಿದ ಕಾರ್ಯಕ್ರಮ ಇತ್ತೀಚೆಗೆ ನಡೆದಿದ್ದು ಆದಿತ್ಯಗೆ ಕಬ್ಜ ನಿರ್ದೇಶಕ ಆರ್.ಚಂದ್ರು ಸಾಥ್ ನೀಡಿದ್ದಾರೆ.
ನಟ ಆದಿತ್ಯ ಅಭಿನಯದ ‘ಟೆರರ್’ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ನಾಯಕ ಆದಿತ್ಯ ಅವರ ಹುಟ್ಟುಹಬ್ಬದ ಸಲುವಾಗಿ ಚಿತ್ರತಂಡ ವಿಶೇಷ ಟೀಸರ್ ಬಿಡುಗಡೆ ಮಾಡಿದೆ. ಕಬ್ಜ ಮೂಲಕ ಪ್ಯಾನ್ ಇಂಡಿಯಾ ಸಿನಿಮಾ ನಿರ್ದೇಶಕ, ನಿರ್ಮಾಪಕ ಎನಿಸಿಕೊಂಡಿರುವ ಆರ್. ಚಂದ್ರು ‘ಟೆರರ್’ ಚಿತ್ರದ ಟೀಸರ್ ಬಿಡುಗಡೆಗೊಳಿಸಿದ್ದಾರೆ. “ಟೆರರ್’’ ಸಿನಿಮಾದ ಹೆಸರಿನಲ್ಲೆ ಒಂದು ಫೈಯರ್ ಇದೆ. ಟೀಸರಿನಲ್ಲಿ ಕಾಣುವ ಪ್ರತಿಯೊಂದು ಸನ್ನಿವೇಶಗಳು ಗಮನ ಸೆಳೆಯುತ್ತದೆ. ಟೀಸರ್ ನಲ್ಲಿಯೇ ‘ಟೆರರ್’ ದೊಡ್ಡ ಹಿಟ್ ಆಗುವ ಲಕ್ಷಣಗಳು ಕಾಣುತ್ತಿದೆ ಎಂದು ಆರ್ ಚಂದ್ರು ಹಾರೈಸಿದರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್, ನಿರ್ಮಾಪಕರಾದ ದೇವೇಂದ್ರ ರೆಡ್ಡಿ, ರಮೇಶ್ ರೆಡ್ಡಿ, ಪ್ರಕಾಶ್, ಶ್ರೀನಗರ ಕಿಟ್ಟಿ ಮುಂತಾದವರು ಟೀಸರ್ ಬಿಡುಗಡೆ ಸಮಾರಂಭಕ್ಕೆ ಆಗಮಿಸಿ ಆದಿತ್ಯ ಅವರಿಗೆ ಹಾಗೂ ಚಿತ್ರತಂಡಕ್ಕೆ ಶುಭ ಕೋರಿದರು.
ಈ ಕಥೆ ಕೇಳಿದ ಕೂಡಲೇ ನಿರ್ಮಾಪಕ ಸಿಲ್ಕ್ ಮಂಜು ಈ ಸಿನಿಮಾ ಮಾಡಲು ಒಪ್ಪಿಕೊಂಡರು. ಅವರ ಸಹಕಾರದಿಂದಲೇ ಈ ಸಿನಿಮಾ ಮಾಡಲು ಸಾಧ್ಯವಾಗುತ್ತಿದೆ. ಸಿನಿಮಾದಲ್ಲಿ ಆದಿತ್ಯ ನಾಯಕರಾಗಿ ನಟಿಸುತ್ತಿದ್ದಾರೆ. ಶ್ರೀನಗರ ಕಿಟ್ಟಿ ಕೂಡ ಪಾತ್ರವೊಂದರಲ್ಲಿ ಅಭಿನಯಿಸುತ್ತಿದ್ದಾರೆ. ಕೋಟೆ ಪ್ರಭಾಕರ್, ಧರ್ಮ ಮೊದಲಾದವರು ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಈಗಾಗಲೇ 30% ಚಿತ್ರೀಕರಣ ಪೂರ್ಣಗೊಂಡಿದೆ. ಬೆಂಗಳೂರು ಸುತ್ತಮುತ್ತ ಸಿನಿಮಾದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ ಎಂದು ನಿರ್ದೇಶಕ ರಂಜನ್ ಶಿವರಾಮ್ ಗೌಡ ಹೇಳಿದರು.
ಕನ್ನಡ ಚಿತ್ರರಂಗಕ್ಕೆ “A” ಎಂಬ ಉತ್ತಮ ಚಿತ್ರಕೊಟ್ಟ ನಿರ್ಮಾಪಕ ಸಿಲ್ಕ್ ಮಂಜು ಅವರ ನಿರ್ಮಾಣದಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ರಂಜನ್ ಅವರು ಹೇಳಿದ ಕಥೆ ಇಷ್ಟವಾಯಿತು. ನನ್ನ ಹುಟ್ಟುಹಬ್ಬಕ್ಕಾಗಿ ವಿಶೇಷ ಟೀಸರ್ ಬಿಡುಗಡೆ ಮಾಡಿರುವ ಚಿತ್ರತಂಡಕ್ಕೆ ಇಲ್ಲಿ ಆಗಮಿಸಿರುವ ಪ್ರತಿಯೊಬ್ಬರಿಗೂ ನನ್ನ ಧನ್ಯವಾದ ಎಂದರು ನಾಯಕ ಆದಿತ್ಯ. ‘ಎ’ ಸಿನಿಮಾ ಬಿಡುಗಡೆಯಾಗಿ 25 ವರ್ಷ ಆದ ಮೇಲೆ ಮತ್ತೊಂದು ನಿರೀಕ್ಷಿತ ಸಿನಿಮಾ ಮಾಡುತ್ತಿದ್ದೇವೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಸಿಲ್ಕ್ ಮಂಜು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ