ಕೀರ್ತಿ ಸುರೇಶ್ ಅವರು ಬಹುಬೇಡಿಕೆಯ ನಟಿ. ಅವರಿಗೆ ಚಿತ್ರರಂಗದಲ್ಲಿ ಸಖತ್ ಬೇಡಿಕೆ ಇದೆ. ‘ಮಹಾನಟಿ’ ರೀತಿಯ ಸಿನಿಮಾ ಮಾಡಿ ಅವರು ಎಲ್ಲರ ಗಮನ ಸೆಳೆದಿದ್ದಾರೆ. ಅವರ ಬೇಡಿಕೆ ಸದ್ಯಕ್ಕೆ ಕಡಿಮೆ ಆಗುವಂಥದ್ದಲ್ಲ. ಕೀರ್ತಿ ಸುರೇಶ್ ಅವರ ತಾಯಿ ಕೂಡ ಶ್ರೇಷ್ಠ ನಟಿ ಎನಿಸಿಕೊಂಡಿದ್ದರು. ಅವರು ಮಾಡಿದ್ದು ಕನ್ನಡದಲ್ಲಿ ಒಂದೇ ಒಂದು ಸಿನಿಮಾ. ಈ ಬಗ್ಗೆ ಭಗವಾನ್ ಅವರು ಈ ಮೊದಲು ಹೇಳಿಕೊಂಡಿದ್ದರು. ಅವರು ನಟಿಸಿದ ಸಿನಿಮಾ ಬಗ್ಗೆ ಇಲ್ಲಿದೆ ಮಾಹಿತಿ.
ಕೀರ್ತಿ ಸುರೇಶ್ ತಾಯಿ ಹೆಸರು ಮೇನಕಾ. ಅವರು ನಟ ಹಾಗೂ ನಿರ್ಮಾಪಕ ಜಿ. ಸುರೇಶ್ ಕುಮಾರ್ ಅವರನ್ನು ಮದುವೆ ಆದರು. 80ರ ದಶಕದ ಆರಂಭದಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ಏಳು ವರ್ಷಗಳ ಕಾಲ ಅವರು ಹಲವು ಸಿನಿಮಾಗಳಲ್ಲಿ ನಟಿಸಿದರು. ಆ ಬಳಿಕ ಚಿತ್ರರಂಗದಿಂದ ಬ್ರೇಕ್ ಪಡೆದಿದ್ದ ಅವರು, 2011ರಲ್ಲಿ ಮತ್ತೆ ಸಿನಿಮಾ ರಂಗದಲ್ಲಿ ತೊಡಗಿಕೊಂಡರು.
1984ರಲ್ಲಿ ರಿಲೀಸ್ ಆದ ‘ಸಮಯದ ಗೊಂಬೆ’ ಚಿತ್ರದಲ್ಲಿ ಮೇನಕಾ ಅವರು ರಾಜ್ಕುಮಾರ್ ಸಹೋದರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಿಜ ಹೇಳಬೇಕು ಎಂದರೆ ಈ ಚಿತ್ರದಲ್ಲಿ ಮೇನಕಾ ಅವರು ಹೀರೋಯಿನ್ ಆಗಿ ನಟಿಸಬೇಕಿತ್ತು. ಆದರೆ, ಅವರಿಗೆ ಸಿಕ್ಕಿದ್ದು ತಂಗಿ ಪಾತ್ರ. ಮೇನಕಾ ಅವರು ಆ ಸಮಯದಲ್ಲಿ ಹೀರೋಯಿನ್ ಆಗಿ ಮಿಂಚುತ್ತಿದ್ದವರು. ಆದರೆ, ರಾಜ್ಕುಮಾರ್ ಜೊತೆ ನಟಿಸಬೇಕು ಎಂಬ ಏಕೈಕ ಕಾರಣಕ್ಕೆ ಅವರು ಸಹೋದರಿ ಪಾತ್ರವನ್ನು ಮಾಡಲು ಒಪ್ಪಿದರು.
ಇದನ್ನೂ ಓದಿ:ಡಾ ರಾಜ್ಕುಮಾರ್ ಸ್ಮರಿಸಿ, ‘ಪುಷ್ಪ’ ಸಿನಿಮಾ ಟೀಕಿಸಿದ ಪವನ್ ಕಲ್ಯಾಣ್
ದೊರೈ-ಭಗವಾನ್ ಅವರು ‘ಸಮಯದ ಗೊಂಬೆ’ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಈ ಚಿತ್ರಕ್ಕೆ ಚಿ. ಉದಯ್ ಶಂಕರ್ ಅವರು ಸಂಭಾಷಣೆ ಬರೆದಿದ್ದರು. ಈ ಸಿನಿಮಾ ಅಂದಿನ ಕಾಲಕ್ಕೆ ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿತ್ತು. ಚಿತ್ರಲೇಖಾ ಅವರು ಬರೆದ ‘ಸಮಯದ ಗೊಂಬೆ’ ಕಾದಂಬರಿ ಆಧರಿಸಿ ಈ ಸಿನಿಮಾ ಸಿದ್ಧವಾಗಿತ್ತು.
ಕೀರ್ತಿ ಸುರೇಶ್ ಅವರು ಬಾಲ ಕಲಾವಿದೆಯಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ಮಲಯಾಳಂ ಸಿನಿಮಾಗಳಲ್ಲಿ ಅವರು ನಟಿಸಿ ಗಮನ ಸೆಳೆದರು. ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಬುಜ್ಜಿಗೆ ಅವರು ಧ್ವನಿ ನೀಡಿದ್ದಾರೆ. ಅವರು ಇತ್ತೀಚೆಗೆ ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:54 pm, Tue, 20 August 24