‘ಕಲ್ಜಿಗ’ ಸಿನಿಮಾದಲ್ಲಿ ತುಳುನಾಡಿನ ದೈವದ ರೋಚಕ ಕಥೆ; ಗಮನ ಸೆಳೆದ ಟ್ರೇಲರ್​

‘ಕಲ್ಜಿಗ’ ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗಿದೆ. ಇದು ಕರಾವಳಿಯ ಕಥೆ. ಹಾಗಾಗಿ ಆ ಪ್ರದೇಶದ ಕಲಾವಿದರೇ ಹೆಚ್ಚಾಗಿ ನಟಿಸಿದ್ದಾರೆ. ‘ಎ2 ಫಿಲ್ಮ್ಸ್​’ ಯೂಟ್ಯೂಬ್ ಚಾನೆಲ್​ನಲ್ಲಿ ಟ್ರೇಲರ್​ ಬಿಡುಗಡೆಯಾಗಿದೆ. ವೀಕ್ಷಕರಿಂದ ಪಾಸಿಟಿವ್​ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ವರ್ಷದ ನಿರೀಕ್ಷಿತ ಸಿನಿಮಾಗಳ ಪಟ್ಟಿಗೆ ‘ಕಲ್ಜಿಗ’ ಕೂಡ ಸೇರ್ಪಡೆ ಆಗಿದೆ. ಸೆಪ್ಟೆಂಬರ್​ 13ರಂದು ಈ ಚಿತ್ರಕ್ಕೆ ರಿಲೀಸ್​ ಆಗುತ್ತಿದೆ.

‘ಕಲ್ಜಿಗ’ ಸಿನಿಮಾದಲ್ಲಿ ತುಳುನಾಡಿನ ದೈವದ ರೋಚಕ ಕಥೆ; ಗಮನ ಸೆಳೆದ ಟ್ರೇಲರ್​
‘ಕಲ್ಜಿಗ’ ಸಿನಿಮಾ ಪೋಸ್ಟರ್​
Follow us
ಮದನ್​ ಕುಮಾರ್​
|

Updated on: Aug 20, 2024 | 9:17 PM

ತುಳುನಾಡಿನ ಸೊಗಡಿನ ಕಥೆಗಳು ಇರುವ ಸಿನಿಮಾಗಳು ಪ್ರೇಕ್ಷಕರಿಗೆ ಹೆಚ್ಚು ಇಷ್ಟ ಆಗುತ್ತಿವೆ. ‘ಕಾಂತಾರ’ ಚಿತ್ರದ ಯಶಸ್ಸಿನ ಬಳಿಕ ಈ ಟ್ರೆಂಡ್​ ಹೆಚ್ಚಾಗಿದೆ. ಈಗ ಅದೇ ಫ್ಲೇವರ್​ನಲ್ಲಿ ‘ಕಲ್ಜಿಗ’ ಸಿನಿಮಾ ಮೂಡಿಬಂದಿದೆ. ಸುಮನ್ ಸುವರ್ಣ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಟ್ರೇಲರ್​ ಬಿಡುಗಡೆ ಮಾಡಲಾಯಿತು. ‘ಹಿಮಾನಿ ಫಿಲ್ಮ್ಸ್​’ ಬ್ಯಾನರ್​ ಮೂಲಕ ‘ಕಲ್ಜಿಗ’ ಸಿನಿಮಾ ನಿರ್ಮಾಣ ಆಗಿದೆ. ಮಂಗಳೂರಿನ ಭಾರತ್ ಸಿನಿಮಾಸ್​ನಲ್ಲಿ ಅದ್ದೂರಿಯಾಗಿ ಟ್ರೇಲರ್​ ಬಿಡುಗಡೆ ಕಾರ್ಯಕ್ರಮ ನಡೆಯಿತು. ವೇದವ್ಯಾಸ ಕಾಮತ್, ರಮಾನಾಥ ರೈ, ಅಶೋಕ್ ರೈ, ದೇವದಾಸ್ ಕಾಪಿಕಾಡ್, ವಿಜಯ ಕುಮಾರ್ ಕೊಡಿಯಾಲ್ ಬೈಲ್ ಮುಂತಾದವರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

‘ಕಲ್ಜಿಗ’ ಚಿತ್ರ ರಿಲೀಸ್​ಗೆ ಸಜ್ಜಾಗಿದೆ. ಧರ್ಮದ ಹಾದಿಯಲ್ಲಿ ಅಧರ್ಮದ ನೆರಳು ಬಿದ್ದ ಬಳಿಕ ಘಟಿಸುವ ರೋಚಕ ಕಥೆ ಈ ಸಿನಿಮಾದಲ್ಲಿ ಇದೆ ಎಂದು ಚಿತ್ರತಂಡ ಹೇಳಿದೆ. ಶರತ್ ಕುಮಾರ್ ಎ.ಕೆ. ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಹಂಸಲೇಖ ಅವರು ಸಂಗೀತ ನೀಡಿ, ಸಾಹಿತ್ಯ ಬರೆದಿದ್ದಾರೆ ಎಂಬುದು ವಿಶೇಷ. ಸಚಿನ್ ಶೆಟ್ಟಿ ಅವರು ಛಾಯಾಗ್ರಹಣ ಮಾಡಿದ್ದಾರೆ. ಪ್ರಸಾದ್ ಕೆ. ಶೆಟ್ಟಿ ಅವರು ಹಿನ್ನೆಲೆ ಸಂಗೀತ ನೀಡಿದ್ದಾರೆ. ಯಶ್ವಿನ್ ಕೆ. ಶೆಟ್ಟಿಗಾರ್ ಅವರ ಸಂಕಲನ ಈ ಸಿನಿಮಾಗಿದೆ. ‘ಕಾಂತಾರ’ ಖ್ಯಾತಿಯ ಸನೀಲ್ ಗುರು ಅವರು ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡಿದ್ದಾರೆ.

ತುಳು ಸಿನಿಮಾರಂಗದಲ್ಲಿ ‘ಕಿಂಗ್ ಆಫ್ ಆ್ಯಕ್ಷನ್’ ಎಂದು ಫೇಮಸ್​ ಆಗಿರುವ ಅರ್ಜುನ್ ಕಾಪಿಕಾಡ್ ಅವರು ‘ಕಲ್ಜಿಗ’ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದಾರೆ. ಅವರಿಗೆ ಜೋಡಿಯಾಗಿ ಸುಶ್ಮಿತಾ ಭಟ್ ಕೂಡ ಪ್ರಮುಖ ಪಾತ್ರವನ್ನು ಮಾಡಿದ್ದಾರೆ. ‘ಗಿರ್ಗಿಟ್’, ‘ಸರ್ಕಸ್’, ‘ಗಮ್ಜಾಲ್’ ಮುಂತಾದ ತುಳು ಚಿತ್ರಗಳ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದ ಸುಮನ್ ಸುವರ್ಣ ಅವರಿಗೆ ಸ್ವತಂತ್ರ ನಿರ್ದೇಶಕನಾಗಿ ‘ಕಲ್ಜಿಗ’ ಚೊಚ್ಚಲ ಸಿನಿಮಾ.

ಇದನ್ನೂ ಓದಿ: ದೈವದ ಪಾತ್ರ ಮಾಡಿದ ರಿಷಬ್​ ಶೆಟ್ಟಿಗೆ ‘ಅತ್ಯುತ್ತಮ ನಟ’ ರಾಷ್ಟ್ರ ಪ್ರಶಸ್ತಿ

‘ಕಲ್ಜಿಗ’ ಸಿನಿಮಾದ ಟ್ರೇಲರ್​ ಬಿಡುಗಡೆಗೆ ಕಾರ್ಯಕ್ರಮದಲ್ಲಿ ದೈವ ನರ್ತಕರಾದ ಮಾಯಿಲ ಕುತ್ತಾರು, ರಾಘವ ಕುತ್ತಾರು ಹಾಗೂ ಜನಪದ ಪಾಡ್ದನ ಗಾಯಕಿ ಕುತ್ತಾರು ತಿಮ್ಮಕ್ಕ ಅವರನ್ನು ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ 500ಕ್ಕೂ ಅಧಿಕ ಮಂದಿ ನೆರೆದಿದ್ದರು. ಎಲ್ಲರಿಂದ ಟ್ರೇಲರ್​ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿರುವುದರಿಂದ ‘ಕಲ್ಜಿಗ’ ಚಿತ್ರತಂಡದ ಆತ್ಮವಿಶ್ವಾಸ ಹೆಚ್ಚಾಗಿದೆ. ಎಲ್ಲ ಕೆಲಸಗಳನ್ನು ಮುಗಿಸಿಕೊಂಡಿರುವ ಈ ಸಿನಿಮಾ ಸೆಪ್ಟೆಂಬರ್​ 13ರಂದು ಬಿಡುಗಡೆ ಆಗಲಿದೆ. ಕರ್ನಾಟಕದ ಜೊತೆಗೆ ಹೊರರಾಜ್ಯಗಳಲ್ಲಿ ಹಾಗೂ ವಿದೇಶದಲ್ಲಿ ಸಿನಿಮಾವನ್ನು ರಿಲೀಸ್​ ಮಾಡಲು ತಯಾರಿ ನಡೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.