ಚಿಕಿತ್ಸೆ ನೀಡಿದರೂ ಹರೀಶ್ ರಾಯ್ ಬದುಕಲಿಲ್ಲ ಯಾಕೆ? ಪೂರ್ತಿ ಮಾಹಿತಿ ನೀಡಿದ ವೈದ್ಯರು

ನಟ ಹರೀಶ್ ರಾಯ್ ಅವರು ಕ್ಯಾನ್ಸರ್ ಕಾಯಿಲೆಯಿಂದ ನಿಧನರಾಗಿದ್ದಾರೆ. ಇದರಿಂದ ಚಿತ್ರರಂಗಕ್ಕೆ ನೋವಾಗಿದೆ. 3 ವರ್ಷದಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ಕಳೆದ ಎರಡು-ಮೂರು ತಿಂಗಳಿಂದ ಚಿಕಿತ್ಸೆಗೆ ಸ್ಪಂದಿಸುತ್ತಿರಲಿಲ್ಲ. ಆ ಬಗ್ಗೆ ವೈದ್ಯರು ‘ಟಿವಿ9’ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ. ನಿಧನಕ್ಕೆ ಕಾರಣವನ್ನು ತಿಳಿಸಿದ್ದಾರೆ.

ಚಿಕಿತ್ಸೆ ನೀಡಿದರೂ ಹರೀಶ್ ರಾಯ್ ಬದುಕಲಿಲ್ಲ ಯಾಕೆ? ಪೂರ್ತಿ ಮಾಹಿತಿ ನೀಡಿದ ವೈದ್ಯರು
Doctor Suresh Babu, Harish Roy
Edited By:

Updated on: Nov 06, 2025 | 6:26 PM

ನಟ ಹರೀಶ್ ರಾಯ್ ಅವರು ಕಳೆದ ಮೂರು ವರ್ಷಗಳಿಂದ ಕ್ಯಾನ್ಸರ್ (Cancer) ವಿರುದ್ಧ ಹೋರಾಡುತ್ತಿದ್ದರು. ಹಲವು ರೀತಿಯ ಚಿಕಿತ್ಸೆಯನ್ನು ಅವರಿಗೆ ನೀಡಲಾಗಿತ್ತು. ಅವರ ಚಿಕಿತ್ಸೆಗೆ ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಹಣದ ಸಹಾಯ ಮಾಡಿದ್ದರು. ಇನ್ನೇನು ಹರೀಶ್ ರಾಯ್ ಅವರು ಗುಣಮುಖರಾಗಿ ಮತ್ತೆ ಸಿನಿಮಾಗಳಲ್ಲಿ ನಟಿಸುತ್ತಾರೆ ಎಂದೇ ಅಭಿಮಾನಿಗಳು ಭಾವಿಸಿದ್ದರು. ಆದರೆ ಅದು ನಿಜವಾಗಲಿಲ್ಲ. ಇಂದು (ನ.6) ಹರೀಶ್ ರಾಯ್ (Harish Roy) ಅವರು ನಿಧನರಾದರು. ಚಿಕಿತ್ಸೆ ನೀಡಿದರೂ ಕೂಡ ಅವರು ಯಾಕೆ ಬದುಕಿ ಉಳಿಯಲಿಲ್ಲ ಎಂಬುದನ್ನು ಕಿದ್ವಾಯಿ ಆಸ್ಪತ್ರೆಯ ವೈದ್ಯರಾದ ಸುರೇಶ್ ಬಾಬು ವಿವರಿಸಿದ್ದಾರೆ.

‘ಮೂರು ವರ್ಷಗಳ ಹಿಂದೆ ಹರೀಶ್ ರಾಯ್ ಅವರು ನಮ್ಮ ಬಳಿ ಬಂದಾಗ ಅವರಿಗೆ ಥೈರಾಯ್ಡ್ ಕ್ಯಾನ್ಸರ್ ಆಗಿತ್ತು. ಆಗಲೇ ಅದು ಶ್ವಾಸಕೋಶಕ್ಕೆ ಹರಡಿತ್ತು. ಆಗ ಅವರಿಗೆ ಕ್ಯಾನ್ಸರ್ ಕೊನೇ ಹಂತದಲ್ಲಿ ಇತ್ತು. ಫೈನಲ್ ಹಂತದಲ್ಲಿ ಕ್ಯಾನ್ಸರ್​​ಗೆ ಚಿಕಿತ್ಸೆ ನೀಡಿದರೆ ಪೂರ್ತಿ ಗುಣ ಮಾಡುವುದು ಕಷ್ಟ ಆಗುತ್ತದೆ. ಮೂರು ವರ್ಷದ ಹಿಂದೆ ಅವರಿಗೆ ನಾವು ಟಾರ್ಗೆಟೆಡ್ ಥೆರಪಿ ಶುರು ಮಾಡಿದ್ದೆವು’ ಎಂದು ಡಾಕ್ಟರ್ ಸುರೇಶ್ ಬಾಬು ಹೇಳಿದ್ದಾರೆ.

‘ಆರಂಭದಲ್ಲಿ ಚಿಕಿತ್ಸೆಗೆ ಹರೀಶ್ ರಾಯ್ ಅವರು ಚೆನ್ನಾಗಿ ಸ್ಪಂದಿಸಿದರು. ಒಂದೂವರೆ ವರ್ಷದ ತನಕ ಅವರ ಕಾಯಿಲೆ ನಿಯಂತ್ರಣದಲ್ಲಿ ಇತ್ತು. 2ನೇ ಟಾರ್ಗೆಡೆಟ್ ಥೆರಲಿ ನೀಡಿದೆವು. ಅದರಿಂದ ಸುಮಾರು ಒಂದು ವರ್ಷದ ತನಕ ಅವರು ಸ್ಪಂದಿಸಿದರು. ಆ ಬಳಿಕ ಇಮ್ಯೂನೋ ಥೆರಪಿ ಎಂಬ ಇಂಜೆಕ್ಷನ್ ಪ್ರಯತ್ನಿಸಿದೆವು. ದುರಾದೃಷ್ಟವಶಾತ್ ಇಮ್ಯುನೋ ಥೆರಪಿಗೆ ಅವರು ಅಷ್ಟು ಚೆನ್ನಾಗಿ ಸ್ಪಂದಿಸಲಿಲ್ಲ’ ಎಂದಿದ್ದಾರೆ ವೈದ್ಯರು.

‘ಥೈರಾಯ್ಡ್​​ಗೆ ಇದ್ದ ಎಲ್ಲ ಆಯ್ಕೆಗಳನ್ನು ನಾವು ಮುಗಿಸಿದ್ದೆವು. ಕಳೆದ ಒಂದು ತಿಂಗಳಿಂದ ಅವರ ಆರೋಗ್ಯ ಹದಗೆಟ್ಟಿತು. ಇಂದು ಬೆಳಗ್ಗೆ ಸುಮಾರು 10.30ಕ್ಕೆ ಅವರು ನಿಧನರಾದರು. ಅವರು ತುಂಬ ಪಾಸಿಟಿವ್ ಮನೋಭಾವ ಇರುವ ವ್ಯಕ್ತಿ ಆಗಿದ್ದರು. ಓಪಿಡಿ ರೋಗಿಗಳಿಗೆ ಅವರು ಸ್ಫೂರ್ತಿ ತುಂಬುತ್ತಿದ್ದರು. ಮೂರು ವರ್ಷದ ಹಿಂದೆ ಅವರು ಬಂದಾಗ ಇಷ್ಟು ದಿನ ಬದುಕುತ್ತಾರೆ ಎಂಬ ಭರವಸೆ ನಮಗೆ ಇರಲಿಲ್ಲ. ಆದರೆ ಅವರು ಪಾಸಿಟಿವ್ ಮನೋಭಾವದಿಂದ ಚಿಕಿತ್ಸೆಗೆ ಸ್ಪಂದಿಸಿದ್ದರಿಂದ ಇಲ್ಲಿಯ ತನಕ ಬಂದರು. ಚಿಕಿತ್ಸೆ ನಡೆಯುತ್ತಿದ್ದಾಗಲೂ ಕೂಡ ಅವರು ಕೆಲವು ಚಿತ್ರೀಕರಣದಲ್ಲಿ ಭಾಗಿ ಆಗಿದ್ದರು’ ಎಂದು ಡಾಕ್ಟರ್ ಸುರೇಶ್ ಬಾಬು ಹೇಳಿದ್ದಾರೆ.

ಇದನ್ನೂ ಓದಿ: ಹರೀಶ್ ರಾಯ್ ನಿಧನಕ್ಕೂ ಕೆಲವು ಗಂಟೆ ಮುನ್ನ ಪರಿಸ್ಥಿತಿ ಹೇಗಿತ್ತು? ವಿವರಿಸಿದ ಕುಟುಂಬಸ್ಥರು

‘ತಾವು ಇನ್ನು ಇರುವುದಿಲ್ಲ ಎಂಬ ಭಾವನೆ ಅವರಿಗೆ ಯಾವತ್ತೂ ಬಂದಿರಲಿಲ್ಲ. ಇನ್ನೂ ಸಿನಿಮಾಗಳಲ್ಲಿ ನಟಿಸಬೇಕು ಎಂಬ ಹಂಬಲ ಅವರಿಗೆ ಇತ್ತು. ಚಿತ್ರರಂಗದ ಅನೇಕ ಹಿತೈಷಿಗಳು ಬಂದು ಅವರನ್ನು ಮಾತನಾಡಿಸಿದ್ದರು. ಇನ್ನೂ ಹೆಸರು ಮಾಡಬೇಕು ಎಂಬ ಆಸೆ ಹರೀಶ್ ರಾಯ್ ಅವರಿಗೆ ಇತ್ತು. ಕೆಜಿಎಫ್ ಸಿನಿಮಾದ ಮುಂದಿನ ಭಾಗ ಬಂದರೆ ಅದರಲ್ಲಿ ನಟಿಸಬೇಕು ಎಂಬ ಆಸೆ ಇತ್ತು’ ಎಂದಿದ್ದಾರೆ ಚಿಕಿತ್ಸೆ ನೀಡಿದ ವೈದ್ಯರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.