ವರದಕ್ಷಿಣೆ ಕೇಸ್ನಲ್ಲಿ ಜೈಲು ಪಾಲಾಗುವ ಆತಂಕದಲ್ಲಿದ್ದ ನಟಿ ಅಭಿನಯಾ (Abhinaya) ಅವರಿಗೆ ಈಗ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಸುಪ್ರೀಂ ಕೋರ್ಟ್ನಲ್ಲಿ ಅವರಿಗೆ ಜಾಮೀನು ದೊರೆತಿದೆ. ಅಭಿನಯಾ ಜೊತೆಗೆ ಅವರ ತಾಯಿ ಜಯಮ್ಮ ಮತ್ತು ಸಹೋದರ ಚೆಲುವರಾಜು ಕೂಡ ಜಾಮೀನು ಪಡೆದುಕೊಂಡಿದ್ದಾರೆ. ಸದ್ಯಕ್ಕೆ ಈ ಮೂವರು ನಿಟ್ಟುಸಿರು ಬಿಡುವಂತಾಗಿದೆ. ಅತ್ತಿಗೆಗೆ ವರದಕ್ಷಿಣೆ ಕಿರುಕುಳ ನೀಡಿದ ಪ್ರಕರಣದಲ್ಲಿ (Dowry Case) ಅಭಿನಯಾ ಅವರಿಗೆ ಇತ್ತೀಚೆಗೆ ಎರಡು ವರ್ಷ ಜೈಲು ಶಿಕ್ಷೆ ಪ್ರಕಟ ಆಗಿತ್ತು. ಹೈಕೋರ್ಟ್ ನೀಡಿದ ಈ ತೀರ್ಪನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್ (Supreme Court) ಮೊರೆ ಹೋಗಿದ್ದಾರೆ. ಅಲ್ಲಿ ಅವರಿಗೆ ಜಾಮೀನು ಮಂಜೂರಾಗಿದೆ.
ಅತ್ತಿಗೆ ಮೇಲೆ ಕೌಟುಂಬಿಕ ದೌರ್ಜನ್ಯ ನಡೆಸಿದ್ದಕ್ಕಾಗಿ ಅಭಿನಯಾ ಹಾಗೂ ಅವರ ತಾಯಿ ಮತ್ತು ಸಹೋದರನಿಗೆ ಹೈಕೋರ್ಟ್ ಜೈಲು ಶಿಕ್ಷೆ ನೀಡಿತ್ತು. ಪೊಲೀಸರು ಈ ಮೂವರನ್ನೂ ಬಂಧಿಸಿ ಕೋರ್ಟ್ಗೆ ಹಾಜರು ಪಡಿಸಬೇಕಿತ್ತು. ಆದರೆ ಅಷ್ಟರಲ್ಲಾಗಲೇ ಅವರು ತಲೆಮರೆಸಿಕೊಂಡರು. ಬಳಿಕ ಚಂದ್ರಾ ಲೇಔಟ್ ಪೊಲೀಸರು ಲುಕ್ಔಟ್ ನೋಟೀಸ್ ಜಾರಿ ಮಾಡಿದರು. ಅಪರಾಧಿಗಳ ಬಗ್ಗೆ ಸುಳಿವು ಸಿಕ್ಕರೆ ಕೂಡಲೇ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಪೊಲೀಸರು ಮನವಿ ಮಾಡಿಕೊಂಡಿರುವ ಕರಪತ್ರ/ಪೋಸ್ಟರ್ ವೈರಲ್ ಆಗಿದೆ. ಅದರ ಬೆನ್ನಲ್ಲೇ ಅಭಿನಯಾ ಕುಟುಂಬದವರು ಸುಪ್ರೀಂ ಕೋರ್ಟ್ ಮೊರೆ ಹೋದರು.
ಅಭಿನಯಾ ಅವರ ಅಣ್ಣನ ಪತ್ನಿ ಲಕ್ಷ್ಮಿದೇವಿ ಅವರು 2002ರಲ್ಲಿ ವರದಕ್ಷಿಣೆ ಕೇಸ್ ದಾಖಲಿಸಿದ್ದರು. ಅದಕ್ಕೆ ಸಂಬಂಧಪಟ್ಟಂತೆ 2022ರ ಡಿಸೆಂಬರ್ನಲ್ಲಿ ಹೈಕೋರ್ಟ್ ತೀರ್ಪು ನೀಡಿತು. ಆದರೆ ಅದನ್ನು ಪ್ರಶ್ನಿಸಿ ಅಭಿನಯಾ ಕುಟುಂಬದವರು ಈಗ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೂವರಿಗೂ ಷರತ್ತುಬದ್ಧ ಜಾಮೀನು ನೀಡಲಾಗಿದೆ. ಪ್ರಕರಣದ ವಿಚಾರಣೆಯನ್ನು ಮುಂದೂಡಲಾಗಿದೆ.
1998ರಲ್ಲಿ ಅಭಿನಯಾ ಸಹೋದರ ಶ್ರೀನಿವಾಸ್ ಜೊತೆ ಲಕ್ಷ್ಮಿದೇವಿ ವಿವಾಹ ನೆರವೇರಿತ್ತು. ಮದುವೆ ಬಳಿಕ ಶ್ರೀನಿವಾಸ್ ಕುಟುಂಬದವರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ಲಕ್ಷ್ಮಿದೇವಿ ದೂರು ದಾಖಲಿಸಿದ್ದರು. ಹೆರಿಗೆ ಬಳಿಕ ಪತಿ ಮನೆಯವರು ತಮ್ಮನ್ನು ಸೇರಿಸಿಕೊಳ್ಳಲಿಲ್ಲ. ಪೋಷಕರ ಮನೆಯಲ್ಲಿ ಉಳಿದುಕೊಳ್ಳುವಂತೆ ತಮ್ಮ ಮೇಲೆ ಒತ್ತಡ ಹೇರಿದರು. ಕೊಲೆ ಬೆದರಿಕೆಯನ್ನೂ ಹಾಕಿದರು ಎಂದು ದೂರಿನಲ್ಲಿ ಲಕ್ಷ್ಮಿದೇವಿ ತಿಳಿಸಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:30 pm, Fri, 10 February 23