ಇಂದು (ಏಪ್ರಿಲ್ 24) ರಾಜ್ಕುಮಾರ್ ಅವರ ಜನ್ಮದಿನ. ಈ ದಿನ ಅನೇಕ ಅಭಿಮಾನಿಗಳಿಗೆ ವಿಶೇಷ ದಿನವಾಗಿದೆ. ಈ ದಿನದಂದು ಬೆಂಗಳೂರಿನ ಬಿ. ಪ್ರಕಾಶ್ ಸಿಂಗ್ ಎಂಬುವವರು ರಾಜ್ಕುಮಾರ್ ಅವರಿಗೆ ನುಡಿ ನಮನ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲ ರಾಜ್ಕುಮಾರ್ ಅವರನ್ನು ಭೇಟಿಯಾಗಿದ್ದನ್ನು ನೆನೆದಿದ್ದಾರೆ.
ಕನ್ನಡ ಕಲಾಸರಸ್ವತಿಯ ಕಿರೀಟಕ್ಕೆ ಫಾಲ್ಕೆ ಪ್ರಶಸ್ತಿಯ ಗರಿ ತೊಡಿಸಿದವರು ರಾಜ್ಕುಮಾರ್. ಕನ್ನಡ ಚಿತ್ರರಂಗದ ಕೀರ್ತಿಯನ್ನು ದೇಶ ವಿದೇಶಗಳಲ್ಲಿ ಬೆಳಗಿದ ವ್ಯಕ್ತಿತ್ವ ಅವರದು. ರಾಜ್ ಮೇರುನಟ ಎನಿಸಿಕೊಂಡರೂ ಸಾಮಾನ್ಯರೊಂದಿಗೆ ಬೆರೆಯುವಾಗ ಸ್ವಂತ ಬಂಧುಬಳಗದವರ ಬಳಿ ಇರುವಂತೆಯೇ ಪ್ರೀತಿ ತೋರುತ್ತಿದ್ದರು. ಅದು ಕೃತಕವಾಗಿರದೆ ಅಪ್ಪಟ ಪ್ರೀತಿಯೆ ಆಗಿರುತ್ತಿತ್ತು . ಇಂತಹ ಮಹಾನ್ ವ್ಯಕ್ತಿಯ ಜನ್ಮ ದಿನದಂದು ಶುಭ ಕೋರುವ ಸದಾವಕಾಶ ನನಗೆ ಒದಗಿ ಬಂದಿತ್ತು. ರಾಜ್ ಅವರ ನಿವಾಸಕ್ಕೆ ತೆರಳಿ ಶುಭಕೋರಿದ ಸುಂದರ ಕ್ಷಣಗಳು ನನ್ನ ಮನಸ್ಸಿನಲ್ಲಿ ಎಂದೆಂದಿಗೂ ಅಮರ.
ಅಣ್ಣಾವ್ರು ತಮ್ಮ ಬದುಕಿನ ಪ್ರತಿಘಟ್ಟವನ್ನು ತೆರೆದಿಟ್ಟ ಪುಸ್ತಕದಂತೆ ಪಾರದರ್ಶಕ ಜೀವನವನ್ನು ನಡೆಸಿದರು. ಅವರ ಹುಟ್ಟುಹಬ್ಬದಂದು ಶುಭ ಹಾರೈಸಿ ನಾನು ಪ್ರೀತಿಯಿಂದ ಒಂದು ಲಾಡು ಅಣ್ಣಾವ್ರ ಬಾಯಲ್ಲಿ ಇಟ್ಟೆ ಅವರು ಸಹ ನನ್ನ ಬಾಯಿಗೆ ಲಾಡು ಇಟ್ಟರು. ಆಗ ಲಾಡುವಿನ ಬೊಂದಿಕಾಳು ನೆಲಕ್ಕೆ ಬಿತ್ತು ಆಗ ಅಣ್ಣಾವ್ರು ನಡುಬಗ್ಗಿಸಿ ಆ ಬೂಂದಿ ಕಾಳನ್ನು ತಾವೇ ಆಯ್ದು ಎತ್ತಿಟ್ಟು ತಿನ್ನುವ ಪದಾರ್ಥ ತುಳಿಯಬಾರದು ನೆಲಕ್ಕೆ ಬೀಳಿಸಬಾರದು ಎಂಬುದಾಗಿ ಹೇಳಿದರು ಅವರು ಊಟಕ್ಕೆ ಕುಂತರೆ ಎಲೆಯಲ್ಲಿ ಒಂದು ಚೂರು ಬಿಡದೆ ಊಟ ಮಾಡುವುದು ಅವರ ಅಭ್ಯಾಸ.
ಅಣ್ಣಾವ್ರು ತಮ್ಮ ತಂದೆಯ ಕಾಲದಿಂದಲೂ ಕನ್ನಡ ರಂಗಭೂಮಿಯಲ್ಲಿ ಬೆಳೆದವರಾದರಿಂದ ಶಿಸ್ತನ್ನು ಬಾಳಲ್ಲಿ ರೂಢಿಸಿಕೊಂಡಿದ್ದರು. ಡಾ. ರಾಜ್ ಅವರನ್ನು ಕಂಡರೆ ಒಮ್ಮೆಗೇ ಮೂರು ವ್ಯಕ್ತಿತ್ವಗಳನ್ನು ಕಾಣಬಹುದಾಗಿತ್ತು. ಹೇಗೆಂದರೆ ಅವರು ಮಾತನಾಡುವಾಗ ಒಂದು ಚಿಕ್ಕ ಮಗುವಿನ ಮುಗ್ಧತೆ, ಅಭಿಮಾನದ ನೋಟ ಚಿರಯೌವ್ವನದ ಸ್ಪರದ್ರೂಪಿ ಯುವಕನಾಗಿ, ವಾಸ್ತವದಲ್ಲಿ ನೋಡಿದಾಗ ಹಿರಿಯ ವಯಸ್ಸಿನ ಅಪ್ಪಾಜಿಯಾಗಿ ಕಾಣುತ್ತಿದ್ದರು.
ಹಿರಿಯರಿಗೆ ಗೌರವ ಕಿರಿಯರಿಗೆ ಪ್ರೀತಿ ನೀಡುವುದೇ ರಾಜ್ಕುಮಾರ್ ನೀತಿಯಾಗಿತ್ತು. ಅಣ್ಣಾವ್ರು ಸಾಕಷ್ಟು ಸಹಾಯ ಮಾಡಿಲ್ಲವೆಂದು ಕುಹಕದ ಮಾತಿದೆ. ಆದರೆ ರಾಜಕುಮಾರ್ ಟ್ರಸ್ಟ್ ಮೂಲಕ ಸಾಕಷ್ಟು ದಾನಧರ್ಮ ಮಾಡಿದ್ದಾರೆ. ಮುಖ್ಯವಾಗಿ ಬಲಗೈಯಲ್ಲಿ ದಾನ ಮಾಡಿದರೆ ಎಡಗೈಗೆ ಗೊತ್ತಾಗಬಾರದು ಎಂಬ ನೀತಿಯನ್ನು ಅನುಸರಿಸಿದ್ದಾರೆ.
ಇದಕ್ಕೆ ಸಾಕ್ಷಿ ಅಣ್ಣಾವ್ರು ತಮ್ಮ ಕಾಲಾನಂತರ ಇಬ್ಬರು ಅಂಧರ ಬಾಳಿಗೆ ಹೊಸಬೆಳಕು ನೀಡಿದ್ದಲ್ಲದೆ ತಮ್ಮ ಎಲ್ಲ ಅಭಿಮಾನಿಗಳಿಗೂ ನೇತ್ರದಾನ ಮಾಡುವಂತೆ ಪ್ರೇರಣೆ ನೀಡಿದ್ದಾರೆ.
ಇದನ್ನೂ ಓದಿ: ರಾಜ್ಕುಮಾರ್ ಕಿಡ್ನ್ಯಾಪ್ ಆದಾಗ ಆತ್ಮಹತ್ಯೆಗೆ ಯತ್ನಿಸಿದ್ದ ಅಭಿಮಾನಿಯ ಎಕ್ಸ್ಕ್ಲ್ಯೂಸಿವ್ ಸಂದರ್ಶನ