ಅಪ್ಪುಗಾಗಿ ಕಾದಿದ್ದ ಅಣ್ಣಾವ್ರ ಸಹೋದರಿ ನಾಗಮ್ಮತ್ತೆ ನಿಧನ
Dr Rajkumar sister Nagamma: ಡಾ ರಾಜ್ಕುಮಾರ್ ಅವರ ಸಹೋದರಿ, ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ಕುಮಾರ್, ಪುನೀತ್ ರಾಜ್ಕುಮಾರ್ ಅವರನ್ನು ಬಾಲ್ಯದಲ್ಲಿ ಎತ್ತಿ ಆಡಿಸಿದ್ದ ದೊಡ್ಮನೆ ಮಕ್ಕಳ ಪ್ರೀತಿಯ ನಾಗಮ್ಮತ್ತೆ ನಿಧನ ಹೊಂದಿದ್ದಾರೆ. ಅಪ್ಪು ನಿಧನದ ಸುದ್ದಿ ಗೊತ್ತಿರದೇ, ಇನ್ನೂ ಅಪ್ಪು ಬರುತ್ತಾರೆ ಎಂದು ಕಾದಿದ್ದ ನಾಗಮ್ಮತ್ತೆ ಇಹಲೋಕ ತ್ಯಜಿಸಿದ್ದಾರೆ.

ಡಾ ರಾಜ್ಕುಮಾರ್ (Dr Rajkumar) ಅವರ ಸಹೋದರಿ ನಾಗಮ್ಮ ನಿಧನರಾಗಿದ್ದಾರೆ. ನಾಗಮ್ಮ ಅವರಿಗೆ ಅಪ್ಪು ನಿಧನದ ಸುದ್ದಿ ತಿಳಿದಿರಲಿಲ್ಲ. ಕೆಲ ತಿಂಗಳ ಹಿಂದೆ ಗಾಜನೂರಿಗೆ ಹೋಗಿದ್ದ ಯೂಟ್ಯೂಬರ್ ಒಬ್ಬರೊಟ್ಟಿಗೆ ಮಾತನಾಡಿದ್ದ ನಾಗಮ್ಮ, ಅಪ್ಪು ಬಗ್ಗೆ ಪ್ರೀತಿಯಿಂದ ಮಾತನಾಡಿದ್ದರು. ಆದರೆ ಈಗ ಅವರೇ ಇಹಲೋಕ ತ್ಯಜಿಸಿದ್ದಾರೆ. ನಾಗಮ್ಮ ಅವರಿಗೆ ಸಾಕಷ್ಟು ವಯಸ್ಸಾಗಿತ್ತು. ಮಕ್ಕಳು, ಮೊಮ್ಮಕ್ಕಳೊಡನೆ ಗಾಜನೂರಿನಲ್ಲಿ ಅವರು ವಾಸವಿದ್ದರು.
ಅಪ್ಪು, ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ಕುಮಾರ್ ಅವರುಗಳಿಗೆ ಬಲು ಪ್ರೀತಿಯ ನಾಗತ್ತೆಯಾಗಿದ್ದರು ನಾಗಮ್ಮ. ದೊಡ್ಮನೆ ಕುಟುಂಬದವರು ಗಾಜನೂರಿಗೆ ಹೋದಾಗಲೆಲ್ಲ ನಾಗಮ್ಮತ್ತೆಯನ್ನು ತಪ್ಪದೆ ಭೇಟಿ ಆಗಿ ಬರುತ್ತಿದ್ದರು. ದೊಡ್ಮನೆಯಲ್ಲಿ ಯಾವುದೇ ಕಾರ್ಯಕ್ರಮವಾದರೂ ನಾಗಮ್ಮ ಅವರು ಇರುತ್ತಿದ್ದರು. ಆದರೆ ವಯಸ್ಸಿನ ಕಾರಣ ಕಳೆದ ಕೆಲ ವರ್ಷಗಳಿಂದ ಅವರು ಗಾಜನೂರಿನಲ್ಲಿಯೇ ನೆಲೆಸಿದ್ದರು. ವಯಸ್ಸಾಗಿದ್ದ ಕಾರಣ, ಅವರಿಗೆ ಆಘಾತ ಆಗಬಾರದೆಂದು ಪುನೀತ್ ರಾಜ್ಕುಮಾರ್ ನಿಧನದ ಸುದ್ದಿಯನ್ನು ಅವರಿಗೆ ಕುಟುಂಬದವರು ತಿಳಿಸಿರಲಿಲ್ಲ.
ನಾಲ್ಕು ತಿಂಗಳ ಹಿಂದೆ ಸಹ ಯೂಟ್ಯೂಬ್ ಚಾನೆಲ್ ಒಂದರ ಬಳಿ ಮಾತನಾಡಿದ್ದ ನಾಗಮ್ಮ ಅವರು ‘ಅಪ್ಪು ಕಂದ ಒಮ್ಮೆ ಬಂದು ನನ್ನನ್ನು ನೋಡಿಕೊಂಡು ಹೋಗು’ ಎಂದಿದ್ದರು. ಕಳೆದ ಬಾರಿ ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್ ಅವರು ಗಾಜನೂರಿಗೆ ಹೋಗಿದ್ದಾಗ, ಶಿವರಾಜ್ ಕುಮಾರ್ ಕೈ ಹಿಡಿದುಕೊಂಡು ಭವಿಷ್ಯ ಹೇಳಿದ್ದರು. ಕೆನ್ನೆಗೆ ಮುತ್ತು ಕೊಟ್ಟು ಹರಸಿದ್ದರು.
ಇದನ್ನೂ ಓದಿ:ದರ್ಶನ್ ಫ್ಯಾನ್ಸ್ ವಿರುದ್ಧ ಸಮರ: ರಮ್ಯಾ ಬೆಂಬಲಕ್ಕೆ ನಿಂತ ಶಿವರಾಜ್ ಕುಮಾರ್
ಶಿವರಾಜ್ ಕುಮಾರ್ ಅವರು ಇಂದು ಬೆಳಿಗ್ಗೆಯಷ್ಟೆ ಸಿನಿಮಾ ಕಾರ್ಯಕ್ಕಾಗಿ ಗೋವಾಕ್ಕೆ ತೆರಳಿದ್ದರು. ಆದರೆ ನಾಗಮ್ಮನವರ ನಿಧನದ ಸುದ್ದಿ ತಿಳಿದು ಅವರು ಮರಳುತ್ತಿದ್ದಾರೆ ಎನ್ನಲಾಗುತ್ತಿದೆ. ಇನ್ನು ರಾಘವೇಂದ್ರ ರಾಜ್ಕುಮಾರ್ ಮತ್ತು ಕುಟುಂಬದವರು ಹಾಗೂ ಅಶ್ವಿನಿ ಪುನೀತ್ ರಾಜ್ಕುಮಾರ್ ಹಾಗೂ ಮಗಳು ಸಹ ಗಾಜನೂರಿಗೆ ತೆರಳಲಿದ್ದು, ನಾಗಮ್ಮನವರ ಅಂತ್ಯಕ್ರಿಯೆಯಲ್ಲಿ ಭಾಗಿ ಆಗಲಿದ್ದಾರೆ. ನಾಗಮ್ಮನವರ ಅಂತ್ಯಕ್ರಿಯೆ ನಾಳೆ (ಆಗಸ್ಟ್ 2) ಗಾಜನೂರಿನಲ್ಲಿಯೇ ನಡೆಯಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




