ಕನ್ನಡ ಸಿನಿಪ್ರೇಮಿಗಳು ಎಂದೂ ಮರೆಯದ ಹೆಸರು ಡಾ. ರಾಜ್ಕುಮಾರ್. ಭಾರತೀಯ ಚಿತ್ರರಂಗದಲ್ಲಿ ಮೇರು ನಟನಾಗಿ ಮಿಂಚಿದ ಅವರಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಅಣ್ಣಾವ್ರಿಗೆ ಸರಿಸಾಟಿ ಆಗುವಂತಹ ಮತ್ತೊಬ್ಬ ನಟ ಜನಿಸಿಲ್ಲ ಎಂದರೆ ಅತಿಶಯೋಕ್ತಿ ಏನಿಲ್ಲ. ರಾಜ್ಕುಮಾರ್ ಅವರು ಇಹಲೋಕ ತ್ಯಜಿಸಿ ಹಲವು ವರ್ಷಗಳೇ ಕಳೆದಿದ್ದರೂ ಕೂಡ ಇಂದಿಗೂ ಅವರ ಮೇಲಿನ ಅಭಿಮಾನ ಕಡಿಮೆ ಆಗಿಲ್ಲ. ಜನರು ಇಂದಿಗೂ ಹಲವು ರೀತಿಯಲ್ಲಿ ಅವರ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸುತ್ತಲೇ ಇದ್ದಾರೆ.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಡಾ. ರಾಜ್ಕುಮಾರ್ ಅವರ ಒಂದು ಚಿತ್ರ ವೈರಲ್ ಆಗುತ್ತಿದೆ. ಕಲಾವಿದರೊಬ್ಬರ ಕೈಚಳಕದಲ್ಲಿ ಅರಳಿರುವ ಈ ಕಲಾಕೃತಿ ಕಂಡರೆ ಎಲ್ಲರಿಗೂ ಒಮ್ಮೆ ಅಚ್ಚರಿ ಆಗುತ್ತಿದೆ. ಮೇಲ್ನೋಟಕ್ಕೆ ನೋಡಿದರೆ ಇದೇನು ಇಷ್ಟೊಂದು ಸಿಂಪಲ್ ಆಗಿದೆ ಎನಿಸುತ್ತದೆ. ಪೆನ್ಸಿಲ್ನಿಂದ ರಚಿಸಿದ ಸರಳ ಕಲಾಕೃತಿ ರೀತಿ ಕಾಣಿಸುತ್ತದೆ. ಆದರೆ ಕಣ್ಣಿಟ್ಟು ಗಮನಿಸಿದರೆ ಅದರಲ್ಲೊಂದು ಅದ್ಭುತವೇ ಅಡಗಿದೆ.
ಹೌದು, ಈ ವಿಶೇಷ ಕಲಾಕೃತಿ ರಚನೆ ಆಗಿರುವುದು ರಾಜ್ಕುಮಾರ್ ಅವರ ಹೆಸರಿನ ಮೂಲಕ. ಅಂದರೆ ರಾಜ್ಕುಮಾರ್ ಹೆಸರನ್ನು ಬಳಸಿಕೊಂಡೇ ಇದನ್ನು ರಚಿಸಲಾಗಿದೆ. ಆ ಹೆಸರಿನ ಹೊರತಾಗಿ ಬೇರೆ ಯಾವುದೇ ಚುಕ್ಕಿ ಅಥವಾ ಗೆರೆಗಳನ್ನು ಬಳಸಿಲ್ಲ. ಅಂದಹಾಗೆ, ಈ ಚಿತ್ರ ರಚಿಸಿರುವುದು ಮಂಡ್ಯದ ಕಲಾವಿದ ನರಸಿಂಹಾಚಾರ್. ಅವರ ಈ ಪ್ರತಿಭೆ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಡಾ. ರಾಜ್ ಕುಟುಂಬದ ಅಭಿಮಾನಿಗಳ ಪೇಜ್ಗಳಲ್ಲಿ ಈ ಚಿತ್ರ ವೈರಲ್ ಆಗಿದೆ. ‘ರಾಜ್ಕುಮಾರ್ ಎಂಬ ಹೆಸರಿನಲ್ಲಿಯೇ ಅಣ್ಣಾವ್ರ ಭಾವ ಚಿತ್ರ ಬಿಡಿಸಿದ ಈ ಕಲಾವಿದನಿಗೆ ನಮ್ಮ ನಮನಗಳು’ ಎಂದು ಫ್ಯಾನ್ಸ್ ಧನ್ಯವಾದ ತಿಳಿಸಿದ್ದಾರೆ. ಹಲವಾರು ಅಭಿಮಾನಿಗಳು ಕಮೆಂಟ್ಗಳ ಮೂಲಕ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಎಲ್ಲ ಬಗೆಯ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡವರು ಡಾ. ರಾಜ್. ಇತರೆ ಕ್ಷೇತ್ರಗಳಿಂದ ಎಷ್ಟೇ ಅವಕಾಶ ಬಂದರೂ ಅವರು ಸಿನಿಮಾ ಹೊರತಾಗಿ ಬೇರೆ ಏನನ್ನೂ ಸ್ವೀಕರಿಸಲಿಲ್ಲ. ತೆರೆಮೇಲೆ ಮಾತ್ರವಲ್ಲದೆ ನಿಜಜೀವನದಲ್ಲಿಯೂ ಅವರು ಆದರ್ಶ ವ್ಯಕ್ತಿಯಾಗಿ ಬದುಕಿದರು. ಆ ಕಾರಣದಿಂದಲೇ ಅವರನ್ನು ಅಭಿಮಾನಿಗಳು ಆರಾಧ್ಯ ದೈವದಂತೆ ಕಾಣುತ್ತಾರೆ. ಎಷ್ಟೇ ವರ್ಷಗಳು ಉರುಳಿದರು ಅಣ್ಣಾವ್ರ ಮೇಲಿನ ಅಭಿಮಾನ ಕಡಿಮೆ ಆಗುವುದಿಲ್ಲ.
ಇದನ್ನೂ ಓದಿ:
ರಾಜ್ಕುಮಾರ್ ಕಿಡ್ನ್ಯಾಪ್ ಆದಾಗ ಆತ್ಮಹತ್ಯೆಗೆ ಯತ್ನಿಸಿದ್ದ ಅಭಿಮಾನಿಯ ಎಕ್ಸ್ಕ್ಲ್ಯೂಸಿವ್ ಸಂದರ್ಶನ
ಡಾ. ರಾಜ್ಕುಮಾರ್ ಸಹಾಯವನ್ನು ನಾನು ಯಾವತ್ತೂ ಮರೆಯುವುದಿಲ್ಲ: ಹಿರಿಯ ಹಾಸ್ಯ ನಟ ಎಂ ಎಸ್ ಉಮೇಶ್