
ದಸರಾ ಕನ್ನಡಿಗರ ನಾಡಹಬ್ಬ. ಮೈಸೂರು ದಸರಾ ಆಚರಣೆಗೆ ಶತಮಾನಗಳ ಇತಿಹಾಸವಿದೆ. 14ನೇ ಶತಮಾನದಿಂದಲೂ ಮೈಸೂರಿನಲ್ಲಿ ದಸರಾ ಆಚರಣೆ ಬಲು ಅದ್ಧೂರಿಯಾಗಿ ಆಚರಣೆ ಆಗುತ್ತಾ ಬರುತ್ತಿದೆ. ಮೊದಲಿಗೆ ಮಹಾರಾಜರು ಅಂಬಾರಿಯಲ್ಲಿ ಕೂತು ನಗರದ ಪ್ರದಕ್ಷಿಣೆ ಹಾಕುತ್ತಿದ್ದರು ಇದಕ್ಕೆ ಜಂಬೂ ಸವಾರಿ ಎನ್ನಲಾಗುತ್ತಿತ್ತು. ಆ ಬಳಿಕ ಅಂಬಾರಿಯಲ್ಲಿ ಚಾಮುಂಡೇಶ್ವರಿ ತಾಯಿಯ ಮೂರ್ತಿಯನ್ನಿಟ್ಟು ಪ್ರದಕ್ಷಿಣೆ ಹಾಕಿಸಲಾಗುತ್ತದೆ. ಈ ಬಾರಿಯೂ ಸಹ ದಸರಾ ಅದ್ಧೂರಿಯಾಗಿ ನಡೆಯಲಿದೆ. ಆದರೆ ಈ ಬಾರಿ ದಸರಾ ಸಣ್ಣ ವಿವಾದಕ್ಕೆ ಕಾರಣವಾಗಿದೆ. ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರಿಗೆ ಸರ್ಕಾರವು ಆಹ್ವಾನ ನೀಡಿರುವುದನ್ನು ಬಿಜೆಪಿಗರು ವಿರೋಧಿಸುತ್ತಿದ್ದಾರೆ. ಅಂದಹಾಗೆ ಈ ‘ದಸರಾ ಉದ್ಘಾಟನೆ’ ಎಂಬುದಕ್ಕೆ ಪ್ರಾಮುಖ್ಯತೆ ದೊರೆತಿದ್ದು ಡಾ ರಾಜ್ಕುಮಾರ್ ಅವರಿಂದ. ದಸರಾ ಅನ್ನು ಮೊದಲ ಬಾರಿ ‘ಉದ್ಘಾಟನೆ’ ಮಾಡಿದ್ದು ಡಾ ರಾಜ್ಕುಮಾರ್ ಅವರೇ.
1993ಕ್ಕೆ ಮುಂಚೆ ದಸರಾ ಉದ್ಘಾಟನೆ ಮಾಡುವ ಸಂಪ್ರದಾಯ ಇರಲಿಲ್ಲ. ಅದಕ್ಕೂ ಮುಂಚೆ ಸ್ಥಳೀಯವಾಗಿ ಪೂಜಾ ಮಾಡಿ ಜಂಬೂ ಸವಾರಿ ಮಾಡಲಾಗುತ್ತಿತ್ತು. ಜಂಬೂ ಸವಾರಿಗೆ ಮುಂಚೆ ಚಿನ್ನದ ಅಂಬಾರಿಗೆ ಮುಖ್ಯ ಮಂತ್ರಿ ಆಗಿದ್ದವರು ಪುಷ್ಪಾರ್ಚನೆ ಮಾಡುವ ಸಂಪ್ರದಾಯ ಇತ್ತು. ಆದರೆ 1993 ರಲ್ಲಿ ನೆರೆಯ ಮಹಾರಾಷ್ಟ್ರದ ಲಾಥೋರ್ನಲ್ಲಿ ಭಾರಿ ಭೂಕಂಪನ ಆಗಿತ್ತು. ಸುಮಾರು 10 ಸಾವಿರ ಜನ ನಿಧನ ಹೊಂದಿದ್ದರು. 10 ಲಕ್ಷ ಜನ ಮನೆ-ಮಠ ಕಳೆದುಕೊಂಡಿದ್ದರು. ನೆರೆ ರಾಜ್ಯದಲ್ಲಿ ವಿಪತ್ತು ಸಂಭಿಸಿದ್ದ ಕಾರಣ ರಾಜ್ಯದಲ್ಲಿ ದಸರಾ ಆಚರಣೆ ಬೇಡ ಎಂಬ ಕೂಗು ಎದ್ದಿತ್ತು.
ಇದನ್ನೂ ಓದಿ:ಯಾರಿಗೂ ತೊಂದರೆ ಮಾಡ್ಬೇಡ, ನಾನೇ ನಿಂಜೊತೆ ಬರ್ತೀನೀ ಅಂತ ವೀರಪ್ಪನ್ಗೆ ಹೇಳಿದ್ರಂತೆ ರಾಜ್ಕುಮಾರ್
ಆಗ ಸಿಎಂ ಆಗಿದ್ದವರು ವೀರಪ್ಪ ಮೋಯ್ಲಿ. ಸಂಪ್ರದಾಯಬದ್ಧವಾಗಿ ಆಚರಿಸಿಕೊಂಡು ಬಂದಿರುವ ಹಾಗೂ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ದಸರಾ ಅನ್ನು ನಿಲ್ಲಿಸುವುದು ಬೇಡ ಎಂಬ ನಿರ್ಧಾರವನ್ನು ವೀರಪ್ಪ ಮೋಯ್ಲಿ ತಳೆದರು. ಆದರೆ ಅವರ ನಿರ್ಧಾರಕ್ಕೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾದವು. ಆಗ ವೀರಪ್ಪ ಮೋಯ್ಲಿ ಅವರು ಡಾ ರಾಜ್ಕುಮಾರ್ ಅವರ ನೆರವು ಪಡೆದರು. ರಾಜ್ಕುಮಾರ್ ಅವರನ್ನು ದಸರಾ ಉದ್ಘಾಟನೆಗೆಂದು ಆಹ್ವಾನಿಸಿದರು. ರಾಜ್ಕುಮಾರ್ ಅವರ ಆಗಮನದಿಂದ ದಸರಾ ಆಚರಣೆಗೆ ಇದ್ದ ವಿರೋಧ ತಣ್ಣಗಾಯ್ತು. ಸುಸೂತ್ರವಾಗಿ ಹಿಂದಿಗಿಂತಲೂ ಅದ್ಧೂರಿಯಾಗಿ ದಸರಾ ಆಚರಣೆ ನಡೆಯಿತು.
ರಾಜ್ಕುಮಾರ್ ಉದ್ಘಾಟನೆ ಮಾಡಿದ ಬಳಿಕ, ಪ್ರತಿವರ್ಷವೂ ಯಾರನ್ನಾದರೂ ಗಣ್ಯರನ್ನು, ಸಾಹಿತಿಗಳನ್ನು ಕರೆಸಿ ದಸರಾ ಉದ್ಘಾಟಿಸುವ ಸಂಪ್ರದಾಯ ಆರಂಭವಾಯ್ತು. ಜಂಬೂ ಸವಾರಿಯ ಹೊರತಾಗಿ ಸಿಎಂ ಆಗಿದ್ದವರು ಬೇರೆ ದಸರಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರಲಿಲ್ಲ. 1994 ರಲ್ಲಿ ಸಿಎಂ ಆದ ಎಚ್ಡಿ ದೇವೇಗೌಡ ಅವರು ಉದ್ಘಾಟನೆ ಕಾರ್ಯಕ್ರಮದಲ್ಲಿಯೂ ಭಾಗವಹಿಸುವ ಮೂಲಕ ಸಿಎಂಗಳು ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿ ಆಗುವ ಸಂಪ್ರದಾಯಕ್ಕೆ ಚಾಲನೆ ನೀಡಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:31 pm, Tue, 16 September 25