ನಂದಿನಿ vs ಅಮೂಲ್ ಚರ್ಚೆಯ ನಡುವೆ ಅಣ್ಣಾವ್ರ ಹಳೆ ವಿಡಿಯೋ ವೈರಲ್

|

Updated on: Apr 08, 2023 | 5:05 PM

ರಾಜ್ಯಕ್ಕೆ ಅಮೂಲ್ ಕಾಲಿಟ್ಟ ಬೆನ್ನಲ್ಲೆ ನಂದಿನಿ ಉಳಿಸಿ ಅಭಿಯಾನ ಜಾರಿಯಲ್ಲಿದ್ದು, ಇದರ ನಡುವೆ ಡಾ ರಾಜ್​ಕುಮಾರ್ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗುತ್ತಿದೆ.

ನಂದಿನಿ vs ಅಮೂಲ್ ಚರ್ಚೆಯ ನಡುವೆ ಅಣ್ಣಾವ್ರ ಹಳೆ ವಿಡಿಯೋ ವೈರಲ್
ಡಾ ರಾಜ್​ಕುಮಾರ್
Follow us on

ಅಮೂಲ್ (Amul) ಸಂಸ್ಥೆಯು ರಾಜ್ಯದ ಹಲವು ನಗರಗಳಲ್ಲಿ ಹಾಲು ಮಾರಾಟ ಪ್ರಾರಂಭ ಮಾಡುತ್ತಿರುವ ಬಗ್ಗೆ ಚರ್ಚೆ ಜೋರಾಗಿದೆ. ಅಮೂಲ್​ನ ಈ ನಡೆಯಿಂದ ರಾಜ್ಯದ್ದೇ ಆದ ಕೆಎಂಎಫ್​ನ (KMF) ನಂದಿನಿ ಹಾಲಿಗೆ (Nandini Milk) ದೊಡ್ಡ ಪೆಟ್ಟು ಬೀಳಲಿದೆಯೆಂದು ಹಲವರು ಆತಂಕ ವ್ಯಕ್ತಪಡಿಸಿದ್ದು, ಅಮೂಲ್ ರಾಜ್ಯದಲ್ಲಿ ಹಾಲು ಮಾರಾಟ ಮಾಡವುದನ್ನು ತಡೆಯಬೇಕು ಎಂದಿದ್ದಾರೆ. ಇನ್ನು ಕೆಲವರು ಅಮೂಲ್​ ಸಂಸ್ಥೆಯು ರಾಜ್ಯದಲ್ಲಿ ಹಾಲು ಮಾರಬಾರದು ಎಂಬುದು ಗ್ರಾಹಕ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಂತಾಗುತ್ತದೆ. ಅಮೂಲ್ ಸಂಸ್ಥೆ ನ್ಯಾಯಯುತವಾಗಿಯೇ ರಾಜ್ಯದಲ್ಲಿ ತನ್ನ ಉತ್ಪನ್ನ ಮಾರಾಟಕ್ಕೆ ಮುಂದಾಗಿದೆ ಎಂದಿದ್ದಾರೆ.

ಅಮೂಲ್ ಹಾಲು ಮಾರಾಟಕ್ಕೆ ಅನುಮತಿ ನೀಡಿದರೆ ಉಗ್ರ ಪ್ರತಿಭಟನೆ ಮಾಡುವುದಾಗಿ ಕೆಲವು ಸಂಘಟನೆಗಳು ಎಚ್ಚರಿಕೆ ನೀಡಿವೆ. ಇದು ಹೀಗೆ ನಡೆಯುತ್ತಿರುವಾಗಲೇ ನಂದಿನಿ ಹಾಲಿನ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದ ಡಾ ರಾಜ್​ಕುಮಾರ್ (Dr Rajkumar) ಅವರ ಹಳೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ರಸಮಂಜರಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಡಾ ರಾಜ್​ಕುಮಾರ್ ಅವರು ವೇದಿಕೆ ಮೇಲೆ ಹಾಡಿ ಕುಣಿದ ಬಳಿಕ ನಟ ಶಿವರಾಜ್ ಕುಮಾರ್ ಅವರು, ಅಣ್ಣಾವ್ರಿಗೆ ಆಗ ನಂದಿನಿ ಬ್ರ್ಯಾಂಡ್​ನ ಹೊಸ ಉತ್ಪನ್ನವಾಗಿದ್ದ ನಂದಿನಿ ಫ್ಲೇವರ್ಡ್ ಹಾಲನ್ನು ನೀಡುತ್ತಾರೆ ಅದನ್ನು ಕುಡಿದು ಖುಷಿ ಪಡುವ ಅಣ್ಣಾವ್ರು, ಬಹಳ ರುಚಿಯಾಗಿದೆ ಎಲ್ಲರೂ ಬಳಸಬಹುದು ಎನ್ನುತ್ತಾರೆ. ಬಳಿಕ ಶಿವಣ್ಣ ಹಾಲಿನ ಬಾಟಲಿಯನ್ನು ತಾವೇ ರಾಘವೇಂದ್ರ ರಾಜ್​ಕುಮಾರ್ ಅವರಿಗೆ ಕುಡಿಸುತ್ತಾರೆ, ವೇದಿಕೆ ಮೇಲಿದ್ದ ಇನ್ನೂ ಕೆಲವರಿಗೆ ನೀಡುತ್ತಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನಂದಿನಿ ಹಾಲು ಉಳಿಸಿ, ಕೆಎಂಎಫ್ ಉಳಿಸಿ ಎಂಬ ಅಡಿಬರಹಗಳೊಂದಿಗೆ ಟ್ರೆಂಡ್ ಆಗುತ್ತಿದೆ.

ಇದನ್ನೂ ಓದಿ: ಅಮುಲ್ ಕ್ವಿಕ್ ಇ-ಕಾಮರ್ಸ್ ಪ್ಲಾಟ್​ಫಾರ್ಮ್ ಬೆಂಗಳೂರಿನಲ್ಲಿ ಮುಂದಿನ ವಾರ ಆರಂಭ; ನಂದಿನಿ ಜತೆ ಪೈಪೋಟಿ ಇಲ್ಲವೆಂದ ಕಂಪನಿ

ಕೆಎಂಎಫ್​ನ ನಂದಿನಿ ಉತ್ಪನ್ನಗಳು ಜನಪ್ರಿಯವಾಗುವಲ್ಲಿ ಡಾ ರಾಜ್​ಕುಮಾರ್ ಹಾಗೂ ದೊಡ್ಮನೆ ಪಾಲು ದೊಡ್ಡದು. ಸಹಕಾರಿ ಸಂಸ್ಥೆಯಾಗಿರುವ ಕೆಎಂಎಫ್​ನ ಪರವಾಗಿ ಯಾವುದೇ ಸಂಭಾವನೆ ಪಡೆಯದೆ ಡಾ ರಾಜ್​ಕುಮಾರ್ ಅವರು ಪ್ರಚಾರ ನೀಡಿದ್ದರು. ಅದಾದ ಬಳಿಕ ನಟ ಪುನೀತ್ ರಾಜ್​ಕುಮಾರ್ ಅವರು ಸಹ ನಂದಿನಿ ಉತ್ಪನ್ನಗಳಿಗೆ ಹಣ ಪಡೆಯದೆ ಉಚಿತವಾಗಿ ಜಾಹೀರಾತು ನೀಡಿ ಅದರ ಮಾರುಕಟ್ಟೆ ಹೆಚ್ಚಿಸಲು ಸಹಾಯ ಮಾಡಿದರು. ಇದೀಗ ಡಾ ರಾಜ್​ಕುಮಾರ್ ಹಾಗೂ ಪುನೀತ್ ರಾಜ್​ಕುಮಾರ್ ಅವರ ವಿಡಿಯೋಗಳನ್ನು ಬಳಸಿಕೊಂಡು ಕೆಎಂಎಫ್ ಪರವಾಗಿ, ಅಮೂಲ್ ವಿರುದ್ಧವಾಗಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳು ಹರಿದಾಡುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ