ದುನಿಯಾ ವಿಜಯ್ 2ನೇ ಮಗಳು ಮೋನಿಷಾ ನಟನೆಯ ‘ಸಿಟಿ ಲೈಟ್ಸ್’ ಸಿನಿಮಾಗೆ ಚಾಲನೆ

ಮೋನಿಷಾ ಮತ್ತು ವಿನಯ್ ರಾಜ್​ಕುಮಾರ್​ ಅವರು ‘ಸಿಟಿ ಲೈಟ್ಸ್​’ ಸಿನಿಮಾದ ಪೋಸ್ಟರ್​ನಲ್ಲಿ ಡಿಫರೆಂಟ್ ಗೆಟಪ್​ ಧರಿಸಿದ್ದಾರೆ. ದುನಿಯಾ ವಿಜಯ್ ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ಬೆಂಗಳೂರಿನಲ್ಲಿ ಅದ್ದೂರಿಯಾಗಿ ಮುಹೂರ್ತ ಮಾಡಲಾಗಿದೆ. ಈ ವೇಳೆ ಸಿನಿಮಾ ಬಗ್ಗೆ ಚಿತ್ರತಂಡದವರು ಒಂದಷ್ಟು ಮಾಹಿತಿ ಹಂಚಿಕೊಂಡರು.

ದುನಿಯಾ ವಿಜಯ್ 2ನೇ ಮಗಳು ಮೋನಿಷಾ ನಟನೆಯ ‘ಸಿಟಿ ಲೈಟ್ಸ್’ ಸಿನಿಮಾಗೆ ಚಾಲನೆ
Vinay Rajkumar, Monisha

Updated on: Feb 10, 2025 | 5:13 PM

‘ಸಿಟಿ ಲೈಟ್ಸ್’ ಸಿನಿಮಾದಲ್ಲಿ ದುನಿಯಾ ವಿಜಯ್ ಅವರ 2ನೇ ಮಗಳು ಮೋನಿಷಾ ನಾಯಕಿಯಾಗಿ ನಟಿಸುತ್ತಿದ್ದಾರೆ. ರಾಘವೇಂದ್ರ ರಾಜ್​ಕುಮಾರ್​ ಅವರ ಮಗ ವಿನಯ್ ರಾಜ್​ಕುಮಾರ್​ ನಾಯಕನಾಗಿದ್ದಾರೆ. ಈ ಸಿನಿಮಾಗೆ ದುನಿಯಾ ವಿಜಯ್ ಅವರೇ ನಿರ್ದೇಶನ ಮಾಡುತ್ತಿರುವುದು ವಿಶೇಷ. ಇಂದು (ಫೆ.10) ಈ ಚಿತ್ರಕ್ಕೆ ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಮುಹೂರ್ತ ಮಾಡಲಾಗಿದೆ. ಅನೇಕ ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಸಿನಿಮಾ ಬಗ್ಗೆ ದುನಿಯಾ ವಿಜಯ್, ಮೋನಿಷಾ, ವಿನಯ್ ರಾಜ್​ಕುಮಾರ್​ ಮುಂತಾದವರು ಮಾತನಾಡಿದರು.

ನಟನೆ, ನಿರ್ದೇಶನ ಹಾಗೂ ನಿರ್ಮಾಣದಲ್ಲಿ ದುನಿಯಾ ವಿಜಯ್ ಅವರು ಯಶಸ್ಸು ಕಂಡಿದ್ದಾರೆ. ಈಗ ಅವರ ಮಕ್ಕಳು ಕೂಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಮೊದಲ ಮಗಳು ಮೋನಿಕಾ ಬಳಿಕ 2ನೇ ಪುತ್ರಿ ಮೋನಿಷಾ ಕೂಡ ಬಣ್ಣದ ಲೋಕಕ್ಕೆ ಎಂಟ್ರಿ ನೀಡಿದ್ದಾರೆ. ಅವರು ನಟಿಸಿರುವ ‘ಸಿಟಿ ಲೈಟ್ಸ್’ ಸಿನಿಮಾದ ಹೊಸ ಪೋಸ್ಟರ್ ಬಿಡುಗಡೆ ಆಗಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.

‘ಸಿಟಿ ಲೈಟ್ಸ್’ ಚಿತ್ರದ ಮುಹೂರ್ತ ಸಮಾರಂಭದಲ್ಲಿ ರಾಘವೇಂದ್ರ ರಾಜ್​ಕುಮಾರ್​ ಹಾಗೂ ಮಂಗಳಾ ಅವರು ಕ್ಲ್ಯಾಪ್ ಮಾಡಿ ಶುಭ ಹಾರೈಸಿದರು. ಸತೀಶ್ ನೀನಾಸಂ, ಯುವ ರಾಜ್​ಕುಮಾರ್​, ಪ್ರವೀಣ್ ತೇಜ್, ನವೀನ್ ಶಂಕರ್​, ಲೂಸ್ ಮಾದ ಯೋಗಿ, ಬಿ. ಸುರೇಶ್, ಕೆ. ಮಂಜು. ಉಮಾಪತಿ, ಕೆ.ಪಿ. ಶ್ರೀಕಾಂತ್ ಸೇರಿದಂತೆ ಅನೇಕರು ಮುಹೂರ್ತ ಸಮಾರಂಭಕ್ಕೆ ಸಾಕ್ಷಿಯಾದರು.

‘ಜವಾಬ್ ದಾರಿ ದೀಪಗಳು’ ಎಂಬ ಟ್ಯಾಗ್​ಲೈನ್ ಈ ಸಿನಿಮಾದ ಶೀರ್ಷಿಕೆಗೆ ಇದೆ. ಈ ಸಿನಿಮಾ ಮೂಲಕ ವಿನಯ್ ರಾಜ್​ಕುಮಾರ್​ ಅವರು ಹೊಸ ಬಗೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಊರಿನಿಂದ ಇಬ್ಬರು ಬೆಂಗಳೂರಿಗೆ ಬಂದ ನಂತರ ಏನೆಲ್ಲ ಕಷ್ಟ ಎದುರಿಸುತ್ತಾರೆ ಎಂಬುದೇ ಈ ಸಿನಿಮಾದ ಕಥೆ’ ಎಂದು ವಿನಯ್ ರಾಜ್​ಕುಮಾರ್​ ಹೇಳಿದ್ದಾರೆ. ಮೋನಿಷಾ ಅವರು ಲಂಡನ್​ನಲ್ಲಿ ನಟನೆಯ ಪಾಠ ಕಲಿತು ಬಂದಿದ್ದಾರೆ. ‘ಸಿಟಿ ಲೈಟ್ಸ್​’ ಚಿತ್ರಕ್ಕಾಗಿ ತಯಾರಿ ಕೂಡ ಮಾಡಿಕೊಂಡಿರುವುದಾಗಿ ಅವರು ತಿಳಿಸಿದ್ದಾರೆ. ಕಾಕ್ರೋಚ್ ಸುಧಿ ಕೂಡ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ: ದುನಿಯಾ ವಿಜಯ್ ನಟನೆಯ ‘ಲ್ಯಾಂಡ್ ಲಾರ್ಡ್’ ಸಿನಿಮಾದಲ್ಲಿ ರೆಟ್ರೋ ಕಹಾನಿ

ಈ ಸಿನಿಮಾಗೆ ಚರಣ್​ ರಾಜ್​ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಮಾಸ್ತಿ ಸಂಭಾಷಣೆ ಬರೆಯುತ್ತಿದ್ದಾರೆ. ‘ಸಲಗ’ ಮತ್ತು ‘ಭೀಮ’ ಸಿನಿಮಾಗಳ ಮೂಲಕ ಗೆದ್ದಿರುವ ದುನಿಯಾ ವಿಜಯ್ ಅವರು ಈಗ ‘ಸಿಟಿ ಲೈಟ್ಸ್​’ ಮೂಲಕ ಮತ್ತೆ ನಿರ್ದೇಶಕನ ಹ್ಯಾಟ್ ಧರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.