ಮಿಲಿಯನ್ ದಾಟಿ ಮುನ್ನುಗ್ಗುತ್ತಿರುವ ‘ಲ್ಯಾಂಡ್ ಲಾರ್ಡ್’ ಹಾಡು ‘ನಿಂಗವ್ವ ನಿಂಗವ್ವ’

2026ರ ಜನವರಿ 23ರಂದು ‘ಲ್ಯಾಂಡ್​ ಲಾರ್ಡ್’ ಸಿನಿಮಾ ಬಿಡುಗಡೆ ಆಗಲಿದೆ. ಈಗ ಸಾಂಗ್ ರಿಲೀಸ್ ಆಗಿದೆ. ವಿಜಯ್ ಪ್ರಕಾಶ್ ಮತ್ತು ಅನನ್ಯಾ ಭಟ್ ಹಾಡಿರುವ ‘ನಿಂಗವ್ವ ನಿಂಗವ್ವ’ ಗೀತೆ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಹಾಡಿನಲ್ಲಿ ರಚಿತಾ ರಾಮ್ ಮತ್ತು ದುನಿಯಾ ವಿಜಯ್ ಅವರ ಪಾತ್ರಗಳ ಗೆಟಪ್ ಕೂಡ ಡಿಫರೆಂಟ್ ಆಗಿದೆ.

ಮಿಲಿಯನ್ ದಾಟಿ ಮುನ್ನುಗ್ಗುತ್ತಿರುವ ‘ಲ್ಯಾಂಡ್ ಲಾರ್ಡ್’ ಹಾಡು ‘ನಿಂಗವ್ವ ನಿಂಗವ್ವ’
Duniya Vijay, Rachita Ram

Updated on: Dec 22, 2025 | 7:18 PM

ನಟಿ ರಚಿತಾ ರಾಮ್ ಹಾಗೂ ನಟ ದುನಿಯಾ ವಿಜಯ್ (Duniya Vijay) ಅವರು ಜೋಡಿಯಾಗಿ ‘ಲ್ಯಾಂಡ್​ ಲಾರ್ಡ್’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ‘ಸಾರಥಿ ಫಿಲ್ಮ್ಸ್’ ಮೂಲಕ ಕೆ.ವಿ. ಸತ್ಯಪ್ರಕಾಶ್ ಮತ್ತು ಹೇಮಂತ್ ಗೌಡ ಕೆ.ಎಸ್. ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಜಡೇಶ್ ಕೆ. ಹಂಪಿ ಅವರು ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ‘ನಿಂಗವ್ವ ನಿಂಗವ್ವ’ (Ningavva Ningavva) ಹಾಡು ಬಿಡುಗಡೆ ಆಯಿತು. ಅಜನೀಶ್ ಲೋಕನಾಥ್ ಸಂಗೀತ ನೀಡಿರುವ ಈ ಹಾಡಿಗೆ ಯೋಗರಾಜ್ ಭಟ್ ಅವರು ಸಾಹಿತ್ಯ ಬರೆದಿದ್ದಾರೆ. ವಿಜಯ್ ಪ್ರಕಾಶ್ ಮತ್ತು ಅನನ್ಯಾ ಭಟ್ ಕಂಠದಲ್ಲಿ ಈ ಹಾಡು ಮೂಡಿಬಂದಿದೆ.

‘ನಿಂಗವ್ವ ನಿಂಗವ್ವ’ ಹಾಡಿನಿಂದ ‘ಲ್ಯಾಂಡ್​ ಲಾರ್ಡ್’ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿದೆ. ಈ ಹಾಡಿಗೆ ಭೂಷಣ್ ಅವರು ನೃತ್ಯ ಸಂಯೋಜನೆ ಮಾಡಿದ್ದಾರೆ‌. ‘ಆನಂದ್ ಆಡಿಯೋ’ ಮೂಲಕ ಈ ಹಾಡು ಬಿಡುಗಡೆ ಆಗಿದೆ. ಮೂರೇ ದಿನದಲ್ಲಿ 1.5 ಮಿಲಿಯನ್​ಗಿಂತಲೂ ಹೆಚ್ಚು ವೀಕ್ಷಣೆ ಕಾಣುವ ಮೂಲಕ ಈ ಹಾಡು ಮೆಚ್ಚುಗೆ ಪಡೆಯುತ್ತಿದೆ. ಈ ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಭಾಗಿ ಆಗಿದ್ದರು.

‘ನೆನಪಿರಲಿ’ ಪ್ರೇಮ್-ಜ್ಯೋತಿ, ತರುಣ್ ಸುಧೀರ್-ಸೋನಾಲ್, ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್ ದಂಪತಿ ಬಂದು ‘ನಿಂಗವ್ವ ನಿಂಗವ್ವ’ ಹಾಡನ್ನು ಬಿಡುಗಡೆ ಮಾಡಿದರು. ಹಾಡು ನೋಡಿ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿ ನೀನಾಸಂ ಸತೀಶ್ ಮತ್ತು ಗುರು ದೇಶಪಾಂಡೆ ಅವರು ಅತಿಥಿಗಳಾಗಿದ್ದರು. ‘ಲ್ಯಾಂಡ್​ ಲಾರ್ಡ್’ ಚಿತ್ರಕ್ಕೆ ಸ್ವಾಮಿ ಅವರು ಛಾಯಾಗ್ರಹಣ ಮಾಡಿದ್ದಾರೆ.

ನಿಂಗವ್ವ ನಿಂಗವ್ವ ಹಾಡು:

ಸಿನಿಮಾದ ಬಗ್ಗೆ ದುನಿಯಾ ವಿಜಯ್ ಅವರು ಮಾತನಾಡಿದರು. ‘ಸಾಮಾನ್ಯವಾಗಿ ಹೀರೋಯಿನ್​ಗಳು ಈ ವಯಸ್ಸಿನ ಪಾತ್ರ ಒಪ್ಪಿಕೊಳ್ಳುವುದು ಕಡಿಮೆ. ರಚಿತಾ ರಾಮ್ ಅವರು ಒಪ್ಪಿಕೊಂಡು ಈ ಪಾತ್ರ ಮಾಡಿದ್ದಾರೆ. ನನಗೂ ಕೂಡ ಈ ಸಾಂಗ್ ಬಿಡುಗಡೆ ಆಗುವವರೆಗೂ ನನ್ನ ಪಾತ್ರದ ಬಗ್ಗೆ ಎಲ್ಲರೂ ಏನು ಹೇಳಬಹುದು ಎಂಬ ಕುತೂಹಲವಿತ್ತು. ಈಗ ಎಲ್ಲರೂ ಮೆಚ್ಚುಗೆ ನೀಡುತ್ತಿದ್ದಾರೆ’ ಎಂದು ದುನಿಯಾ ವಿಜಯ್ ಹೇಳಿದರು.

ಇದನ್ನೂ ಓದಿ: ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು

ರಚಿತಾ ರಾಮ್ ಮಾತನಾಡಿ, ‘ಈ ಸಾಂಗ್ ಉತ್ತಮವಾಗಿ ಮೂಡಿಬಂದಿದೆ‌. ಈ ಹಾಡಿನ ಶೂಟಿಂಗ್ ಸಮಯದಿಂದಲೂ ಯಾವಾಗ ಬಿಡುಗಡೆ ಆಗಬಹುದೆಂದು ಕಾಯುತ್ತಿದೆ’ ಎಂದರು. ‘ನಿರ್ಮಾಪಕರು ಯಾವುದೇ ಕೊರತೆ ಬಾರದ ಹಾಗೆ ನಿರ್ಮಾಣ ಮಾಡಿದ್ದಾರೆ. ಸಿನಿಮಾದ ಎಲ್ಲಾ ಹಾಡುಗಳು ಬಹಳ ಚೆನ್ನಾಗಿ ಮೂಡಿಬಂದಿವೆ’ ಎಂದಿದ್ದಾರೆ ನಿರ್ದೇಶಕ ಜಡೇಶ್ ಕೆ. ಹಂಪಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.