ಯುದ್ಧಕ್ಕೆ ಸಿದ್ಧ: ಸುದೀಪ್ ಮಾತಿನ ನಿಜವಾದ ಅರ್ಥ ಏನು? ವಿವರಿಸಿದ ಕಿಚ್ಚನ ಆಪ್ತ ರಾಜು ಗೌಡ
ಕಿಚ್ಚ ಸುದೀಪ್ ಅವರು ‘ಮಾರ್ಕ್’ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಹೇಳಿದ ಮಾತುಗಳು ವಿವಾದಕ್ಕೆ ಕಾರಣ ಆಗಿವೆ. ದರ್ಶನ್ ಅಭಿಮಾನಿಗಳನ್ನು ಉದ್ದೇಶಿಸಿ ಸುದೀಪ್ ಅವರು ಮಾತನಾಡಿದರು ಎಂಬುದು ಕೆಲವರ ವಾದ ಆಗಿದೆ. ಅದರೆ ಸುದೀಪ್ ಮಾತನಾಡಿದ್ದು ಪೈರಸಿ ಮಾಡುವವರ ವಿರುದ್ಧ ಎಂದು ಅವರ ಆಪ್ತ ರಾಜು ಗೌಡ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ‘ಮಾರ್ಕ್’ (Mark) ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮ ನಡೆಯಿತು. ಅಲ್ಲಿ ಕಿಚ್ಚ ಸುದೀಪ್ (Kichcha Sudeep) ನೀಡಿದ ಹೇಳಿಕೆಯಿಂದ ದರ್ಶನ್ (Darshan) ಅಭಿಮಾನಿಗಳು ಗರಂ ಆಗಿದ್ದಾರೆ. ಆದ್ರೆ ಸುದೀಪ್ ಅವರ ಮಾತಿನ ಉದ್ದೇಶ ಮತ್ತು ಹಿನ್ನೆಲೆ ಏನು ಎಂಬುದನ್ನು ಅವರ ಆಪ್ತ ರಾಜು ಗೌಡ ವಿವರಿಸಿದ್ದಾರೆ. ‘ನಾನು ಮತ್ತು ಸುದೀಪ್ ಅವರು ಜೊತೆಯಲ್ಲಿ ಇದ್ದಾಗ ಅವರಿಗೆ ಒಂದು ಫೋನ್ ಕರೆ ಬಂದಿತ್ತು. ಈ ಬಾರಿ ನಿಮ್ಮ ವಿರುದ್ಧ ಭಾರಿ ಪ್ರಬಲವಾಗಿ ಪೈರಸಿ ಸಂಚು ನಡೆದಿದೆ. ಆದಷ್ಟು ನೀವು ನಿಮ್ಮ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿ ಅಂತ ಆ ಫೋನ್ ಕರೆಯಲ್ಲಿ ಹೇಳಲಾಯಿತು. ಸುದೀಪ್ ಅವರ ಅಭಿಮಾನಿಗಳ ಹೆಸರಲ್ಲಿ ನಕಲಿ ಸಂಘಗಳನ್ನು ಸೃಷ್ಟಿ ಮಾಡಿಕೊಂಡು ಏನೇನೋ ಹಾಕುತ್ತಿದ್ದಾರೆ. ಆ ವಿಚಾರವನ್ನೇ ಸುದೀಪ್ ಅವರು ವೇದಿಕೆಯಲ್ಲಿ ಮಾತನಾಡಿದ್ದು’ ಎಂದು ರಾಜು ಗೌಡ ಅವರು ಹೇಳಿದ್ದಾರೆ.
‘ನಾವೆಲ್ಲರೂ ಯುದ್ಧಕ್ಕೆ ಸಿದ್ಧ ಅಂತ ಸುದೀಪ್ ಅವರು ಹೇಳಿದ್ದು ಯಾವುದೇ ಒಬ್ಬ ಸ್ಟಾರ್ ನಟರ ವಿರುದ್ಧವಾಗಿ ಅಲ್ಲ. ಯಾವುದೇ ಒಂದು ಸಿನಿಮಾ ಬಗ್ಗೆಯೂ ಅವರು ಹೇಳಿಕೆ ನೀಡಿಲ್ಲ. ಅವರು ಹೇಳಿದ್ದೇ ಬೇರೆ. ಇಲ್ಲಿ ಆಗುತ್ತಿರುವ ಚರ್ಚೆಯೇ ಬೇರೆ. ಪೈರಸಿ ವಿರುದ್ಧ ನಮ್ಮ ಹೋರಾಟ. ನಕಲಿ ಫ್ಯಾನ್ಸ್ ಸಂಘಗಳಿಂದ ಆಗುತ್ತಿರುವ ಅಪಪ್ರಚಾರ ಸರಿ ಅಲ್ಲ ಅಂತ ಸುದೀಪ್ ಹೇಳಿದ್ದು’ ಎಂದಿದ್ದಾರೆ ರಾಜು ಗೌಡ.
‘ದರ್ಶನ್ ವಿರುದ್ಧವಾಗಿ ಸುದೀಪ್ ಅವರು ಹೇಳಿಕೆ ನೀಡಿಲ್ಲ. ಆ ರೀತಿಯ ಸಂದರ್ಭ ಕೂಡ ಇಲ್ಲ. ಯಾರಿಗೆ ತಟ್ಟಬೇಕೋ ತಟ್ಟುತ್ತೆ ಅಂತ ಸುದೀಪ್ ಅವರು ಹೇಳಿದ್ದು ಪೈರಸಿಯವರಿಗೆ. ಪೈಲ್ವಾನ್ ಸಿನಿಮಾ ಬಂದಾಗ ಪೈರಸಿ ಎಷ್ಟು ಕಾಟ ಕೊಟ್ಟಿತ್ತು ಎಂಬುದು ನಿಮ್ಮೆಲ್ಲರಿಗೂ ಗೊತ್ತು. ನಿರ್ಮಾಪಕರು ಕಣ್ಣೀರು ಹಾಕುವಂತಹ ಪರಿಸ್ಥಿತಿ ಬಂದಿತ್ತು. ಅಂದು ಪೈರಸಿ ಮಾಡಿದವರಿಗೆ ಒಂದು ಗತಿ ಕಾಣಿಸಿದ್ದರೆ ಇಂದು ಈ ಪರಿಸ್ಥಿತಿ ಬರುತ್ತಿರಲಿಲ್ಲ. ಪೈರಸಿ ವಿರುದ್ಧ ಸೈಲೆಂಟ್ ಆಗಿ ಇರಬಾರದು, ಕಾನೂನಿನ ಹೋರಾಟ ಮಾಡಬೇಕು ಎಂಬುದು ಸುದೀಪ್ ಅವರ ಮಾತಿನ ಅರ್ಥ’ ಎಂದು ರಾಜು ಗೌಡ ಅವರು ಹೇಳಿದ್ದಾರೆ.
‘ಸುದೀಪ್ ಅವರ ಅಭಿಮಾನಿಗಳು ಅಂತ ಹೇಳಿಕೊಂಡು ಕೆಲವರು ಅಪಪ್ರಚಾರದ ಪೋಸ್ಟ್ ಹಾಕಿದ್ದರು. ಅಂಥವರು ನಿಜವಾಗಿಯೂ ಸುದೀಪ್ ಅಭಿಮಾನಿಗಳಲ್ಲ. ಕಾಂಜಿಪೀಂಚಿ ಪೋಸ್ಟ್ ಹಾಕುವವರು ಸುದೀಪ್ ಫ್ಯಾನ್ಸ್ ಅಲ್ಲ. ಅವರು ಕ್ಲಾಸ್ ಆಗಿರುತ್ತಾರೆ. ಮಾಸ್ ಆಗಿ ಸುದೀಪಣ್ಣನ ಜೊತೆ ನಿಂತಿದ್ದಾರೆ. ಸುಳ್ಳು ಸುದ್ದಿ ಹರಡುವುದು ಸರಿ ಅಲ್ಲ. ಅಂಥವರಿಗೆ ನಾವು ಎಚ್ಚರಿಕೆ ಕೊಟ್ಟಿದ್ದೇವೆ’ ಎಂದಿದ್ದಾರೆ ರಾಜು ಗೌಡ.
ಇದನ್ನೂ ಓದಿ: ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
‘ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಏನು ಮಾತಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಅವರು ಏನಾದರೂ ಸ್ಪಷ್ಟವಾಗಿ ಒಬ್ಬರ ಹೆಸರು ಹೇಳಿ ಮಾತನಾಡಿದ್ದರೆ ಅವರಿಗೆ ಉತ್ತರ ಕೊಡುತ್ತಾರೆ. ದರ್ಶನ್ ವಿರುದ್ಧವಾಗಿ ಸುದೀಪ್ ಅವರು ಹೇಳಿಕೆ ನೀಡಿಲ್ಲ. ಪೈರಸಿ ಎಂಬುದು ಎಲ್ಲ ಸ್ಟಾರ್ ಹೀರೋಗಳಿಗೂ ಸಮಸ್ಯೆ ಆಗಿದೆ. ಹಾಗಾಗಿ ಅಭಿಮಾನಿಗಳು ಸುಮ್ಮನೆ ಮಾತಾಡೋದಲ್ಲ. ಎಲ್ಲಿ ಮಾತನಾಡಬೇಕೋ ಅಲ್ಲಿ ಮಾತನಾಡಬೇಕು ಎಂಬುದೇ ಸುದೀಪ್ ಅವರ ಮಾತಿನ ಅರ್ಥ’ ಎಂದು ರಾಜು ಗೌಡ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



