‘ಎಲ್ಲೋ ಜೋಗಪ್ಪ ನಿನ್ನ ಅರಮನೆ’ (Ello Jogappa Ninna Aramane) ಶೀರ್ಷಿಕೆಯಲ್ಲಿ ಹೊಸ ಕನ್ನಡ ಸಿನಿಮಾ (Kannada Cinema) ಮೂಡಿಬರುತ್ತಿದೆ. ಹಯವದನ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಬಹುತೇಕ ಶೂಟಿಂಗ್ ಮುಗಿಸಿದ್ದ ಈ ಸಿನಿಮಾ ತಂಡ ಒಂದು ಸಾಂಗ್ನ ಚಿತ್ರೀಕರಣವನ್ನು ಮಾತ್ರ ಬಾಕಿ ಉಳಿಸಿಕೊಂಡಿತ್ತು. ಈಗ ಅದು ಕೂಡ ಪೂರ್ಣಗೊಂಡಿದೆ. ‘ಹೌದಾ ಹುಲಿಯಾ ಹೌದೌದು..’ ಎಂಬ ಈ ಗೀತೆಗೆ ಮೋಹನ್ ಮಾಸ್ಟರ್ ನೃತ್ಯ ನಿರ್ದೇಶನ ಮಾಡಿದ್ದಾರೆ. ನಾಯಕ ನಟ ಅಂಜನ್ ನಾಗೇಂದ್ರ ಅವರು ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದಾರೆ. ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ಆರ್ಟ್ ಡೈರೆಕ್ಟರ್ ಹೊಸಮನೆ ಮೂರ್ತಿ ಅವರು ಹಾಕಿದ್ದ ಅದ್ದೂರಿಯಾದ ಸೆಟ್ನಲ್ಲಿ ಮಾಸ್ ಸಾಂಗ್ ಚಿತ್ರೀಕರಣ ನಡೆದಿದೆ.
ಈ ಸಿನಿಮಾಗಾಗಿ ನಟ ಅಂಜನ್ ನಾಗೇಂದ್ರ ಅವರು ದೇಶಾದ್ಯಂತ ಪ್ರಯಾಣ ಮಾಡಿದ್ದಾರೆ. ಅದಕ್ಕೆ ಕಾರಣ ಕೂಡ ಇದೆ. ಈ ಸಿನಿಮಾದ ಕಥೆಯಲ್ಲಿ ಒಂದು ಜರ್ನಿ ಇರಲಿದೆ. ‘ಈ ಚಿತ್ರಕ್ಕಾಗಿ ಇಡೀ ಇಂಡಿಯಾ ಸುತ್ತಿದ್ದೇನೆ. ಇದು ಒಂದು ಜರ್ನಿ ಸಿನಿಮಾ. ತಂದೆ ಮತ್ತು ಮಗನ ಬಾಂಧವ್ಯದ ಕಹಾನಿ ಇದೆ. ಬೆಂಗಳೂರಿನಿಂದ ಶುರುವಾದ ಪ್ರಯಾಣ ಹಿಮಾಲಯದವರೆಗೆ ಹೋಗುತ್ತದೆ. ಭಾವನಾತ್ಮಕವಾದ ಈ ಸಿನಿಮಾ ಯುವ ಜನರಿಗೆ ಹೆಚ್ಚು ಮನರಂಜನೆ ನೀಡುತ್ತದೆ’ ಎಂದು ಅಂಜನ್ ಹೇಳಿದ್ದಾರೆ.
ಹಲವು ರಾಜ್ಯಗಳ ಅನೇಕ ಲೊಕೇಷನ್ಗಳಲ್ಲಿ ಈ ಸಿನಿಮಾದ ಶೂಟಿಂಗ್ ಮಾಡಲಾಗಿದೆ. ಆ ಬಗ್ಗೆ ನಿರ್ದೇಶಕ ಹಯವದನ ಮಾತನಾಡಿದ್ದಾರೆ. ‘ಈ ಸಿನಿಮಾ ಮೂಲ ಪಾತ್ರವು ಹೋಗಿ ಹಿಮಾಲಯವನ್ನು ತಲುಪುತ್ತದೆ. ಆ ಪ್ರಯಾಣಕ್ಕೆ ಒಂದು ಉದ್ದೇಶ ಕೂಡ ಇದೆ. ಈ ಸಿನಿಮಾ ಎಲ್ಲರಿಗೂ ಕನೆಕ್ಟ್ ಆಗಲಿದೆ. ಎಲ್ಲೋ ಜೋಗಪ್ಪ ನಿನ್ನ ಅರಮನೆ ಎಂಬುದು ಜನಪದ ಗೀತೆಯ ಸಾಲು. ಹಾಗೆಯೇ ‘ಜೋಗಿ’ ಸಿನಿಮಾದ ಹಾಡಿನಲ್ಲೂ ಈ ಸಾಲು ಬಳಕೆ ಆಗಿದೆ. ನಮ್ಮ ಕಥೆ ಕೂಡ ಈ ಶೀರ್ಷಿಕೆಗೆ ನ್ಯಾಯ ಸಲ್ಲಿಸುತ್ತದೆ’ ಎಂದಿದ್ದಾರೆ ನಿರ್ದೇಶಕರು.
ಈ ಸಿನಿಮಾದಲ್ಲಿ ಅಂಜನ್ ನಾಗೇಂದ್ರ ಮತ್ತು ಹೊಸ ನಟಿ ವೆನ್ಯಾ ರೈ ಅವರು ಜೋಡಿಯಾಗಿ ನಟಿಸಿದ್ದಾರೆ. ಸಂಜನಾ ದಾಸ್ ಕೂಡ ಒಂದು ಪ್ರಮುಖ ಪಾತ್ರ ನಿಭಾಯಿಸುತ್ತಿದ್ದಾರೆ. ಬಿರಾದರ್, ಶರತ್ ಲೋಹಿತಾಶ್ವ, ದಾನಪ್ಪ, ಸ್ವಾತಿ, ದಿನೇಶ್ ಮಂಗಳೂರು, ಲಕ್ಷ್ಮೀ ನಾಡಗೌಡ ಮುಂತಾದವರು ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಶಿವ ಪ್ರಸಾದ್ ಸಂಗೀತ, ನಟರಾಜ್ ಮದ್ದಾಲ ಛಾಯಾಗ್ರಹಣ, ರವಿಚಂದ್ರನ್ ಸಂಕಲನ ಈ ಚಿತ್ರಕ್ಕಿದೆ. ಪ್ರಮೋದ್ ಮರವಂತೆ ಮತ್ತು ರವೀಂದ್ರ ಮುದ್ದಿ ಸಾಹಿತ್ಯ ಬರೆದಿದ್ದಾರೆ. ಭಜರಂಗಿ ಮೋಹನ್ ನೃತ್ಯ ನಿರ್ದೇಶನ ಮಾಡಿದ್ದಾರೆ. ನರಸಿಂಹ ಸಾಹಸ ನಿರ್ದೇಶನ ಈ ಸಿನಿಮಾಗಿದೆ. ‘ಪೆಂಡೋರಾಸ್ ಬಾಕ್ಸ್ ಪ್ರೊಡಕ್ಷನ್’ ಮತ್ತು ‘ಕೃಷ್ಣಛಾಯಾ ಚಿತ್ರ’ ಬ್ಯಾನರ್ ಮೂಲಕ ಪವನ್ ಸಿಮಿಕೇರಿ ಹಾಗೂ ಸಿಂಧು ಹಯವದನ ಅವರು ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:07 pm, Sun, 23 July 23