ರಾಜ್ಯಕ್ಕೆ ಒಂದು ಫಿಲ್ಮ್ಸಿಟಿ ಬೇಕು ಎಂಬುದು ಚಿತ್ರರಂಗದವರ ಬಹುವರ್ಷಗಳ ಕೋರಿಕೆ. ಆದರೆ, ಅದು ಈವರೆಗೆ ಈಡೇರಿಲ್ಲ. ಸರ್ಕಾರಗಳು ಬದಲಾದಂತೆ ಇದನ್ನು ನಿರ್ಮಾಣ ಮಾಡಲು ನಿಗದಿಪಡಿಸಿದ ಜಾಗಗಳು ಕೂಡ ಬದಲಾಗುತ್ತಲೇ ಬಂದವು. ಈ ಬಾರಿ ಬಜೆಟ್ನಲ್ಲಿ ಮತ್ತೆ ಇದರ ಪ್ರಸ್ತಾಪ ಆಗಿದೆ. ಮೈಸೂರಿನಲ್ಲಿ ಫಿಲ್ಮ್ ಸಿಟಿ (Film City) ನಿರ್ಮಾಣ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಅವರು ಬಜೆಟ್ನಲ್ಲಿ (Karnataka Budget 2023) ಘೋಷಿಸಿದ್ದಾರೆ. ಸರ್ಕಾರಿ-ಖಾಸಗಿ ಸಹಭಾಗಿತ್ವದಲ್ಲಿ ಚಿತ್ರನಗರಿಯನ್ನು ನಿರ್ಮಿಸಲು ಈ ಬಾರಿ ಸಿದ್ದರಾಮಯ್ಯ ಅವರು ಮುಂದಾಗಿದ್ದಾರೆ.
ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಅವರು ಫಿಲ್ಮ್ ಸಿಟಿಯನ್ನು ರಾಮನಗರದಲ್ಲಿ ಮಾಡುವ ಉದ್ದೇಶ ಹೊಂದಿದ್ದರು. ಬಿಜೆಪಿ ಸರ್ಕಾರವು ಬೆಂಗಳೂರಿನಲ್ಲಿಯೇ ಫಿಲ್ಮ್ ಸಿಟಿ ನಿರ್ಮಿಸುತ್ತೇವೆ ಎಂದು ಹೇಳಿತ್ತು. ಆದರೆ, ಅದಾವುದೂ ಕೈಗೂಡಲಿಲ್ಲ. ಈಗ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಇದನ್ನು ನಿರ್ಮಿಸುವುದಾಗಿ ಘೋಷಿಸಿದ್ದಾರೆ. ಸರ್ಕಾರಿ ಹಾಗೂ ಖಾಸಗಿ ಸಹಭಾಗಿತ್ವ ಇದರಲ್ಲಿ ಇರಲಿದೆ.
ಸಿನಿಮಾ ಕೆಲಸಗಳಿಗೆ ಚಿತ್ರ ನಗರಿ ಅತ್ಯಗತ್ಯ. ಸದ್ಯ ಹೈದರಾಬಾದ್ ಮೊದಲಾದ ಕಡೆಗಳಿಗೆ ತೆರಳಿ ಸೆಟ್ಗಳನ್ನು ನಿರ್ಮಿಸಿ ಶೂಟ್ ಮಾಡಲಾಗುತ್ತಿದೆ. ಕರ್ನಾಟಕದಲ್ಲೇ ಫಿಲ್ಮ್ ಸಿಟಿ ನಿರ್ಮಾಣ ಆದರೆ ಸಿನಿಮಾದವರು ಪರ ರಾಜ್ಯಕ್ಕೆ ತೆರಳುವುದು ತಪ್ಪಲಿದೆ. ಹೀಗಾಗಿ, ಅನೇಕ ವರ್ಷಗಳಿಂದ ಈ ಬೇಡಿಕೆ ಹಾಗೆಯೇ ಇದೆ.
ಇದನ್ನೂ ಓದಿ: ವಧು ವರರಿಗೆ ಗುಡ್ ನ್ಯೂಸ್: ವಿವಾಹ ನೋಂದಾಣಿ ಮತ್ತಷ್ಟು ಸರಳೀಕರಣಗೊಳಿಸಿದ ಸಿದ್ದರಾಮಯ್ಯ
ಇತ್ತೀಚೆಗೆ ಬೆಂಗಳೂರಿನಲ್ಲಿ ಸುಶಾಸನ್ ಗರೀಬ್ ಕಲ್ಯಾಣ್ ರಾಷ್ಟ್ರೀಯ ಸಮಾವೇಶ ನಡೆದಿತ್ತು. ಇದರಲ್ಲಿ ರಿಷಬ್ ಭಾಗಿ ಆಗಿದ್ದರು ‘ಈಗಿನ ಕಾಲದಲ್ಲಿ ಪ್ರೇಕ್ಷಕರನ್ನು ತಲುಪುವುದು ಒಂದು ಸವಾಲು. ಸರ್ಕಾರದಿಂದ ಸಿನಿಮಾದವರಿಗೆ ಸಾಕಷ್ಟು ಬೆಂಬಲ ಸಿಗುತ್ತಿದೆ. ಇದರ ಜೊತೆ ಬೆಂಗಳೂರಿನಲ್ಲಿ ಫಿಲ್ಮ್ ಸಿಟಿ ನಿರ್ಮಾಣ ಆಗಬೇಕು’ ಎಂದು ರಿಷಬ್ ಹೇಳಿದ್ದರು. ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅವರು ಈ ಬೇಡಿಕೆ ಇಟ್ಟಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:30 pm, Fri, 7 July 23