ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ, ಬಹುಮುಖ ಪ್ರತಿಭೆ ಎಸ್.ಶಿವರಾಂ ಅವರನ್ನು ಕಳೆದುಕೊಂಡು ನಾಡು ಬಡವಾಗಿದೆ. ತ್ಯಾಗರಾಜನಗರದ ಅವರ ನಿವಾಸದಲ್ಲಿ ಇಂದು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಗಣ್ಯರು, ಸಾರ್ವಜನಿಕರು ಆಗಮಿಸಿ ಹಿರಿಯ ನಟನ ದರ್ಶನ ಪಡೆದು ನಮನ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ರಾಜಕೀಯ ನಾಯಕರು ಆಗಮಿಸಿ ದರ್ಶನ ಪಡೆದರು. ಸಚಿವ ಆರ್.ಅಶೋಕ್ ವ್ಯವಸ್ಥೆಯ ಜವಾಬ್ದಾರಿ ಹೊತ್ತಿದ್ದು, ಶಿವರಾಂ ಅವರ ಹೆಸರನ್ನು ಚಿರಸ್ಥಾಯಿಯಾಗಿಸುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಚಿತ್ರರಂಗದ ಹಲವಾರು ಗಣ್ಯರು ಆಗಮಿಸಿ ತಮ್ಮ ಪ್ರಿಯ ಶಿವರಾಮಣ್ಣನವರ ದರ್ಶನ ಪಡೆದು ಅವರೊಂದಿಗಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ.
ಶಿವರಾಮಣ್ಣನವರ ಒಡನಾಟ ಸ್ಮರಿಸಿದ ಭಗವಾನ್, ಅನಂತ್ನಾಗ್, ರಾಘವೇಂದ್ರ ರಾಜ್ಕುಮಾರ್:
ಚಿತ್ರರಂಗದ ಹಿರಿಯ ನಿರ್ದೇಶಕ ಭಗವಾನ್ ಶಿವರಾಂ ಅವರ ನಿಧನಕ್ಕೆ ಸಂತಾಪಗಳನ್ನು ಸೂಚಿಸಿದ್ದಾರೆ. ‘‘ತಿಂಗಳ ಅವಧಿಯಲ್ಲಿ ಎರಡು ರತ್ನಗಳನ್ನು ಕಳೆದುಕೊಂಡಿದ್ದೇವೆ. ಒಂದು ಯುವರತ್ನ. ಮತ್ತೊಂದು ಭಕ್ತಿರತ್ನ’’ ಎಂದು ಅವರು ಕಂಬನಿ ನುಡಿದಿದ್ದಾರೆ. ‘‘ಶಿವರಾಂ ನೇರ ಮತ್ತು ನಿಷ್ಠುರವಾಗಿ ಮಾತನಾಡುತ್ತಿದ್ದ ವ್ಯಕ್ತಿ. ಇವರ ನಿರ್ಮಾಣದ ಒಂದು ಚಿತ್ರ ನಿರ್ದೇಶಿಸಿರುವುದು ನನ್ನ ಪುಣ್ಯ. ನನ್ನ 50 ವರ್ಷದ ಆತ್ಮೀಯ ಗೆಳೆಯನನ್ನ ಕಳೆದುಕೊಂಡಿದ್ದೇನೆ. ಚಿತ್ರರಂಗಕ್ಕೆ ಇದೊಂದು ನಷ್ಟ, ಈ ನಷ್ಟ ತುಂಬಲು ಆಗಲ್ಲ’’ ಎಂದು ಭಗವಾನ್ ಕಂಬನಿ ಮಿಡಿದಿದ್ದಾರೆ.
ನಟ ರಾಘವೇಂದ್ರ ರಾಜ್ಕುಮಾರ್ ಶಿವರಾಂ ಅವರಿಗೆ ನುಡಿನಮನ ಸಲ್ಲಿಸಿದ್ದಾರೆ. ‘‘ಹಿರಿಯ ನಟ ಶಿವರಾಮಣ್ಣ ಸ್ವಾಮಿಗಳೆಂದೇ ನಮಗೆ ಪರಿಚಯ. ತಂದೆಯವರು ಇದ್ದಾಗಲಿಂದಲೂ ನಮಗೆ ತುಂಬ ಆತ್ಮೀಯರಾಗಿದ್ದರು. ಅವರೊಂದಿಗೆ ನಾವೆಲ್ಲರೂ ಶಬರಿಮಲೆಗೆ ಹೋಗುತ್ತಿದ್ದೆವು. ನನ್ನ ತಮ್ಮನ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಅವರು ಬಂದಿದ್ದರು. 2 ಗಂಟೆ ಕಾಲ ನಮ್ಮೊಟ್ಟಿಗಿದ್ದರು’’ ಎಂದು ರಾಘವೇಂದ್ರ ರಾಜ್ಕುಮಾರ್ ಕಂಬನಿ ಮಿಡಿದಿದ್ದಾರೆ. ನಟ ಶಿವರಾಜ್ಕುಮಾರ್ ಕೂಡ ದರ್ಶನ ಪಡೆದು, ಅಂತಿಮ ನಮನ ಸಲ್ಲಿಸಿದ್ದಾರೆ.
ಶಿವರಾಂ ಅವರ ಅಂತಿಮ ದರ್ಶನ ಪಡೆದ ಅನಂತ್ನಾಗ್ ನಂತರ ಮಾತನಾಡಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ‘ಶಿವರಾಂ ಮತ್ತು ನನ್ನ ಪರಿಚಯ 40 ವರ್ಷಗಳದ್ದು. ಅವರು ನಾವು ಹಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದೇವೆ. ಅವರು ಎಲ್ಲಾ ಪಾತ್ರಗಳನ್ನ ಲೀಲಾಜಾಲವಾಗಿ ಮಾಡಿದವರು. ಹೆಚ್ಚಾಗಿ ಹಾಸ್ಯದ ಪಾತ್ರಗಳಲ್ಲಿ ಕಾಣಿಸಿಕೊಂಡವರು. ಎಲ್ಲಾರನ್ನ ನಗಿಸುವ ಭಾವ ಅವರದ್ದು. ಹೆಚ್ಚು ನಾನು ಅವರು ಪೋನ್ನಲ್ಲಿ ಮಾತಾನಾಡುತ್ತಿದ್ದೆವು. ಎಲ್ಲಕ್ಕಿಂತ ಹೆಚ್ಚಿನದಾಗಿ ಕಲಾವಿದರ ಸಂಘವನ್ನು ಸಂಘಟಿಸಿದ್ದೇ ಅವರು. ಕಲಾವಿಧರ ಸಂಘದ ಕಾರ್ಯದರ್ಶಿಗಳಾಗಿ ನಮನ್ನೆಲ್ಲಾ ಸಂಘಟಿಸಿದ್ದಾರೆ. ಇತ್ತೀಚಿಗೆ ಅವರು ಈ ಕೆಲಸಗಳನ್ನ ಬಿಟ್ಟಿದ್ದರು. ಅವರು ಸದಾ ನಮ್ಮ ಜೊತೆಗೆ ಇರ್ತಾರೆ. ಕನ್ನಡ ಚಿತ್ರರಂಗದ ಒಂದು ಕಂಬವೇ ಹೌದು. ಅವರ ಆತ್ಮಕ್ಕೆ ಶಾಂತಿ ಸಿಗಲಿ’’ ಎಂದು ಅನಂತ್ನಾಗ್ ನುಡಿದಿದ್ದಾರೆ.
ಶಿವರಾಂ ಅವರ ಕೆಲಸದ ಮೇಲಿನ ಪ್ರೀತಿಯನ್ನು ತಿಳಿಸಿದ ಜಗ್ಗೇಶ್, ರಮೇಶ್ ಅರವಿಂದ್:
ಶಿವರಾಂ ಅವರ ಸಮಯಪ್ರಜ್ಞೆಯನ್ನು ಹಾಗೂ ಕೆಲಸದ ಮೇಲಿನ ಪ್ರೀತಿಯನ್ನು ನಟ ರಮೇಶ್ ಅರವಿಂದ್ ಹಂಚಿಕೊಂಡಿದ್ದಾರೆ. ‘‘ನಟ ಶಿವರಾಮಣ್ಣ ನಮ್ಮ ಸೀರಿಯಲ್ನಲ್ಲೂ ಅಭಿನಯಿಸುತ್ತಿದ್ದರು. 9 ಗಂಟೆಗೆ ಸಮಯ ನೀಡಿದರೆ ಅದೇ ಟೈಮ್ಗೆ ಬರುತ್ತಿದ್ದರು. 3 ಪೇಜ್ ಡೈಲಾಗ್ ಕೊಟ್ರೂ ಟೇಕ್ ತೆಗೆದುಕೊಳ್ಳದೆ ಮಾಡುತ್ತಿದ್ದರು. ಅವರ ಜ್ಞಾನ, ಸಾಹಿತ್ಯದ ಮೇಲಿನ ಪ್ರೀತಿ ನಿಜವಾಗಿಯೂ ದೊಡ್ಡದು. ನಟ ಶಿವರಾಮ್ರವರಿಗೆ ಪುಸ್ತಕಗಳ ಮೇಲೆ ಅಪಾರ ಪ್ರೀತಿಯಿತ್ತು. ಇಂತಹ ವ್ಯಕ್ತಿತ್ವ ಸಿಗೋದು ಅಪರೂಪ’’ ಎಂದು ರಮೇಶ್ ಅರವಿಂದ್ ನುಡಿದಿದ್ದಾರೆ.
ನಟ ಜಗ್ಗೇಶ್ ಶಿವರಾಂ ಅವರಿಗೆ ನುಡಿನಮನ ಸಲ್ಲಿಸಿದ್ದು, ‘‘ಶಿವರಾಂ ಬಗ್ಗೆ ನನಗೆ ತುಂಬಾ ಗೌರವವಿತ್ತು. ಚಿತ್ರರಂಗಕ್ಕೆ ಶಿವರಾಂರವರು ಮಾರ್ಗದರ್ಶಕರಾಗಿದ್ದರು. ಇಂಡಸ್ಟ್ರಿಯಲ್ಲಿ ಒಬ್ಬ ಮೇಷ್ಟ್ರು ಥರಾ ಇದ್ದವರು ಶಿವರಾಮಣ್ಣ. ನಮ್ಮ ಕಲಾವಿದರ ಸಂಘ ಉಳಿದಿರುವುದೇ ಇಂಥ ಮಹಾನ್ ವ್ಯಕ್ತಿಗಳಿಂದ. ತುಂಬು ಜೀವನ ನಡೆಸಿದ್ದಾರೆ, ಇನ್ನೂ ಇರಬೇಕಿತ್ತು ಅನ್ನೋ ಆಸೆ ಇರೋದು ಸಹಜ. ಆಸ್ಪತ್ರೆಗೆ ದಾಖಲಾಗಿದ್ದು ನೆಪ, ದೇವರ ಸೇವೆಯಲ್ಲೇ ಅವರಿಗೆ ಮುಕ್ತಿ ದೊರೆಕಿದೆ. ಸದ್ಗತಿ ದೊರಕಲಿ ಅಂತಾ ದೇವರಲ್ಲಿ ಬೇಡಿಕೊಳ್ಳುತ್ತೇನೆ’’ ಎಂದಿದ್ದಾರೆ.
ಶಿವರಾಂ ಅವರ ಕಾರ್ಯಗಳನ್ನು ಹಂಚಿಕೊಂಡ ದ್ವಾರಕೀಶ್, ಎಸ್.ನಾರಾಯಣ್:
ಚಿತ್ರರಂಗದ ಹಿರಿಯ ನಟ, ನಿರ್ದೇಶಕ ದ್ವಾರಕೀಶ್ ಶಿವರಾಂ ಅವರ ದರ್ಶನ ಪಡೆದು, ಅವರೊಂದಿಗಿನ ನೆನಪುಗಳನ್ನು ಹಂಚಿಕೊಳ್ಳುತ್ತಾ ಭಾವುಕರಾದರು. ‘‘ಶಿವರಾಂರವರು ನಟ, ನಿರ್ದೇಶಕ, ನಿರ್ಮಾಪಕರಾಗಿದ್ದರು. ಅವರು ಕೇವಲ ನಟ ಅಲ್ಲ ನಿರ್ದೇಶಕ, ನಾಟಕ ಪ್ರವೀಣರಾಗಿದ್ದರು. ಆತನ ಸಂದರ್ಶನ, ಮಾತುಗಳನ್ನ ದಿನಾಲೂ ಯೂಟ್ಯೂಬ್ ನಲ್ಲಿ ನೋಡ್ತಿರ್ತಿದ್ದೆ. ನಾನು ಎಷ್ಟೇ ಮಾತನಾಡಿದ್ರು ಕಮ್ಮಿ, ಅಷ್ಟು ಕೆಲಸ ಮಾಡಿದ್ದಾನೆ. ಅಂಗವಿಕಲರಿಗೆ ಸಾಕಷ್ಟು ನೆರವು ಶಿವರಾಮಣ್ಣನಿಂದಾಗಿದೆ. ಬಹಳ ನೋವಾಗ್ತಿದೆ, ಈ ದುಃಖ ಭರಿಸುವ ಶಕ್ತಿ ಅವರ ಕುಟುಂಬಕ್ಕೆ ದೇವರು ನೀಡಲಿ’’ ಎಂದು ಕಂಬನಿ ಮಿಡಿದಿದ್ದಾರೆ.
ಹಿರಿಯ ನಿರ್ದೇಶಕ ಎಸ್.ನಾರಾಯಣ್ ಮಾತನಾಡಿ, ‘‘ಅವರ ಹೆಸರಿನ ಜೊತೆ ಅಣ್ಣ ಅಂತಲೇ ಕರೀತಿದ್ವಿ. ಅವರು ಕೇವಲ ಕಲಾವಿದರಲ್ಲ, ಎಲ್ಲಾ ಪೀಳಿಗೆಯ ತಂತ್ರಜ್ಞರು, ಕಲಾವಿದರಿಗೆ ಅವರು ಸ್ಪೂರ್ತಿ. ಮೂಕಿ ಕಾಲದಿಂದ ಈ ಕಾಲದವರೆಗೂ ಚಟುವಟಿಕೆಯಿಂದಿದ್ದ ಏಕೈಕ ಕಲಾವಿದ ಅವರು. ಈ ಸುದ್ದಿ ಕೇಳಿ ಆಘಾತವಾಯಿತು. ನಾಳೆ ನನ್ನ ಮಗನ ರಿಸೆಪ್ಷನ್ ಇದೆ, 8 ಗಂಟೆಗೆ ಬರ್ತೀನಿ ಅಂದಿದ್ರು, ಆದ್ರೆ ವಿಧಿಯ ನಿರ್ಧಾರ. ಮಾಲೆ ಧರಿಸಿದ್ದವರು, ಬಹುಶಃ ಆ ದೇವರೇ ಅವರನ್ನ ಕರೆಸಿಕೊಂಡಿದ್ದಾನೆ’’ ಎಂದಿದ್ದಾರೆ.
ಹಿರಿಯ ನಟಿ ಲೀಲಾವತಿ ಶಿವರಾಂ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದು ‘‘ಶಿವರಾಮಣ್ಣ ನಮ್ಮೆಲ್ಲರ ನೆಚ್ಚಿನ ನಟ ಆಗಿದ್ದರು. ಅವರ ಅರೋಗ್ಯ ಸುಧಾರಣೆಯಾಗಲಿ ಅಂತ ದೇವರಲ್ಲಿ ಪ್ರಾರ್ಥನೆ ಮಾಡಿದ್ದೆ ಅದು ವ್ಯರ್ಥವಾಯಿತು ಎಂದು ಭಾವುಕರಾಗಿದ್ದಾರೆ. ಅವರು ಯಾವಾಗಲೂ ಹಾಸ್ಯ ಮಾಡ್ತಾ ಇದ್ದರು. ಹಾಸ್ಯ ಮಾಡುತ್ತಲೇ ಅದರಲ್ಲೊಂದು ನೀತಿ ಪಾಠ ಹೇಳೋರು. ಅವರ ಅಗಲಿಕೆ ನಮಗೆ ಸಾಕಷ್ಟು ನೋವು ತಂದಿದೆ. ಈ ದುಃಖವನ್ನ ಭರಿಸುವ ಶಕ್ತಿಯನ್ನ ದೇವರು ಅವರ ಕುಟುಂಬಕ್ಕೆ ನೀಡಲಿ’’ ಎಂದಿದ್ದಾರೆ. ನಟ ವಿನೋದ್ರಾಜ್ ಕಂಬನಿ ಮಿಡಿದಿದ್ದು, ‘‘ಶಿವರಾಮಣ್ಣ ಚಿತ್ರರಂಗದಲ್ಲಿ ತುಂಬಾ ಜವಾಬ್ದಾರಿಯುತ ಮನುಷ್ಯನಂತಿದ್ದರು. ಸದಾಕಾಲವೂ ಉತ್ಸುಕರಾಗಿದ್ದ ಶಿವರಾಮಣ್ಣನವರ ಸಾವನ್ನು ನಂಬಲು ಅಸಾಧ್ಯವಾಗಿದೆ. ಈ ದುಃಖವನ್ನ ಭರಿಸುವ ಶಕ್ತಿಯನ್ನ ದೇವರು ಅವರ ಕುಟುಂಬಕ್ಕೆ ನೀಡಲಿ’’ ಎಂದು ಹೇಳಿದ್ದಾರೆ.
ಕಿರುತೆರೆ ನಟ ಸಾಗರ್ ಗೌಡ ಕಿರುತೆರೆಯಲ್ಲಿ ಶಿವರಾಮಣ್ಣನವರೊಂದಿಗಿನ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ‘‘ಇತ್ತೀಚಿಗೆ ಮೇಲುಕೋಟೆಯಲ್ಲಿ ಚಿತ್ರೀಕರಣ ಮಾಡಿದ್ದೆವು. ಅ ಕಾರ ಹ ಕಾರ ಸರಿಯಾಗಿ ಮಾತನಾಡಲ್ಲ ಈಗಿನವರು ಅಂತ ಶಿವರಾಮಣ್ಣನವರು ಹೇಳುತ್ತಿದ್ದರು. ಅವರ ಕಾಲದಲ್ಲಿ ಅನುಸರಿಸುತ್ತಿದ್ದ ಫಿಟ್ನೆಸ್ ಟಿಪ್ಸ್ ಕೇಳ್ತಿದ್ವಿ. ಕಾಫಿ, ಟೀ ಕಮ್ಮಿ ಮಾಡಿ ಗ್ರೀನ್ ಟೀ ಕುಡಿಯೋದು ಅಭ್ಯಾಸ ಮಾಡಿಕೊಳ್ಳಿ ಅಂತಿದ್ದರು. ಇಡೀ ನಮ್ಮ ಸೀರಿಯಲ್ ತಂಡಕ್ಕೆ ದೇವರು ಈ ನೋವನ್ನು ಭರಿಸುವ ಶಕ್ತಿ ನೀಡಲಿ’’ ಎಂದು ಸಾಗರ್ ಗೌಡ ನುಡಿದಿದ್ದಾರೆ.
ಹಿರಿಯ ನಟಿ ಗಿರಿಜಾ ಲೋಕೇಶ್, ನಟಿಯರಾದ ಅನುಪ್ರಭಾಕರ್, ಪ್ರೇಮಾ, ನಟರಾದ ಶ್ರೀನಾಥ್, ಶ್ರೀಮುರುಳಿ, ಶ್ರೀನಿವಾಸ್, ಸುಂದರ್ರಾಜ್, ರವಿಶಂಕರ್, ದೇವರಾಜ್, ಗಾಯಕ ವಿಜಯ್ ಪ್ರಕಾಶ್ ಮೊದಲಾದವರು ಮಾತನಾಡಿ ಶಿವರಾಮಣ್ಣನವರ ಭಕ್ತಿ, ಪ್ರೀತಿಯಿಂದ ಸ್ಥಾಪಿಸಿದ ಲೈಬ್ರರಿ ಮೊದಲಾದವುಗಳ ಕುರಿತು ನೆನಪುಗಳನ್ನು ಹಂಚಿಕೊಂಡಿದ್ದಾರೆ.
ಶಿವರಾಂ ಅವರ ಫೋಟೋಗ್ರಫಿ ಹವ್ಯಾಸದ ಕುರಿತು ಕ್ರಿಕೆಟ್ ತಾರೆ ಅನಿಲ್ ಕುಂಬ್ಳೆ ಮಾತು:
ಖ್ಯಾತ ಕ್ರಿಕೆಟ್ ತಾರೆ ಅನಿಲ್ ಕುಂಬ್ಳೆ ಶಿವರಾಂ ಅವರ ಅಂತಿಮ ದರ್ಶನ ಪಡೆದು ಮಾತನಾಡಿ, ‘‘ನನಗೆ ಶಿವರಾಮ್ ಸರ್ ತುಂಬಾನೇ ಬೇಕಾದವರು. ಮನೆಗೆ ಬಂದಾಗ ಕೆಲ ವಿಚಾರದ ಬಗ್ಗೆ ಮಾತಾಡೋರು. ಮನೆಯಲ್ಲಿ ಪೂಜೆ ಆಗಲಿ ಯಾವುದೇ ಕಾರ್ಯಕ್ರಮ ಇದ್ರು ಕರೀತಾ ಇದ್ದರು. ತುಂಬಾ ನೋವಿನ ವಿಚಾರ. ಅರಗಿಸಿಕೊಳ್ಳೋಕೆ ಆಗುತ್ತಿಲ್ಲ. ಮನೆಗೆ ಕರೀತಾನೇ ಇದ್ದರು. ಮನೆಗೆ ಬಂದು ಲೈಬ್ರರಿ ನೋಡು ಅಂದಿದ್ದರು. ಕೆಲವೊಂದು ಫೋಟೋಗ್ರಫಿ ಮಾಡಿದ್ದೀನಿ ನೋಡಿ ಅಂದಿದ್ದರು. ಅವರ ಕೋರಿಕೆ ನೇರವೇರಿಸೋಕೆ ಆಗಿಲ್ಲ ನನಗೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಶಿವರಾಂ ಅವರಿಗೆ ರಾಜಕೀಯ ನಾಯಕರ ನುಡಿನಮನ:
ಶಿವರಾಂ ಅಂತಿಮ ದರ್ಶನ ಬಳಿಕ ಸಿಎಂ ಬೊಮ್ಮಾಯಿ ಹೇಳಿಕೆ ನೀಡಿ, ‘‘ಶಿವರಾಂ ನಿರ್ಮಾಪಕರಾಗಿ ರಾಷ್ಟ್ರಪ್ರಶಸ್ತಿ ಪಡೆದವರು. ಪುಟ್ಟಣ್ಣ ಕಣಗಾಲ್ರಂಥ ದಿಗ್ಗಜರ ಜತೆ ಕೆಲಸ ಮಾಡಿದವರು. ಮೊನ್ನೆಯಷ್ಟೇ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ್ದೆವು. ಹಿರಿಯ ನಟ ಶಿವರಾಂ ಅವರಲ್ಲಿ ದೈವ ಭಕ್ತಿ ಹೆಚ್ಚಾಗಿತ್ತು’’ ಎಂದು ನುಡಿದಿದ್ದಾರೆ.
‘‘ಶಿವರಾಂ ಒಳ್ಳೆಯ ಹಾಸ್ಯನಟ, ಚಿತ್ರರಂಗಕ್ಕೆ ಇದೊಂದು ನಷ್ಟ’’ ಎಂದು ಅಂತಿಮ ದರ್ಶನ ಪಡೆದ ನಂತರ ವಿಪಕ್ಷ ನಾಯಕ ಸಿದ್ದರಾಮಯ್ಯ ನುಡಿದಿದ್ದಾರೆ. ‘‘ಪುನೀತ್‌ರನ್ನ ಕಳೆದುಕೊಂಡಿದ್ದೆವು. ಇದು ಮತ್ತೊಂದು ಆಘಾತ. ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ಕೊಡಲಿ’’ ಎಂದು ಅವರು ಹೇಳಿದ್ದಾರೆ. ಸಚಿವ ಬಿಸಿ ಪಾಟೀಲ್ ಮಾತನಾಡಿ ಶಿವರಾಂ ಅವರೊಂದಿಗೆ ‘ಕೌರವ’ ಸಿನಿಮಾಸದಲ್ಲಿ ನಟಿಸಿದ ಸಂದರ್ಭವನ್ನು ಮೆಲುಕು ಹಾಕಿದ್ದಾರೆ. ಮಾಜಿ ಸಿಎಂ ಎಸ್ಎಂ ಕೃಷ್ಣ ಹಿರಿಯ ನಟನ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್, ಶಾಸಕ ಜಮೀರ್ ಅಹ್ಮದ್, ಮಾಜಿ ಎಂಎಲ್‌ಸಿ ಟಿ.ಎ.ಶರವಣ ಮೊದಲಾದವರು ಶಿವರಾಂ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಭಾನುವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಬೆಳಗ್ಗೆ 7.30ರಿಂದ 10 ಗಂಟೆಯ ತನಕ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. 11 ಗಂಟೆಯ ನಂತರ ಅಂತ್ಯಕ್ರಿಯೆ ನೆರವೇರಲಿದೆ. ಕೊವಿಡ್ ಮಾರ್ಗಸೂಚಿಯನ್ನು ಪಾಲಿಸಿ, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ಸರ್ಕಾರದ ಅಧಿಕೃತ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ:
ಭಾನುವಾರ ಶಿವರಾಂ ಅಂತ್ಯಕ್ರಿಯೆ; ಹಿರಿಯ ನಟನ ಹೆಸರನ್ನು ಚಿರಸ್ಥಾಯಿಯಾಗಿಸುವ ಭರವಸೆ ನೀಡಿದ ಸಚಿವ ಆರ್.ಅಶೋಕ್