ಇದೇ ಮೊದಲ ಬಾರಿಗೆ ಬೆಂಗಳೂರಲ್ಲಿ ಫಿಲ್ಮ್​ಫೇರ್​ ಸಂಭ್ರಮ; ಶುಭ ಕೋರಿದ ಪೂಜಾ ಹೆಗ್ಡೆ, ಹರ್ಷಿಕಾ, ಪ್ರಿಯಾಂಕಾ

| Updated By: Digi Tech Desk

Updated on: Dec 06, 2021 | 12:56 PM

Filmfare Awards: 2022ರ ಮಾರ್ಚ್​ನಲ್ಲಿ 67ನೇ ಫಿಲ್ಮ್​ಫೇರ್​ ಸೌತ್​ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಈ ಪ್ರತಿಷ್ಠಿತ ಕಾರ್ಯಕ್ರಮ ಆಯೋಜನೆಗೊಳ್ಳುತ್ತಿರುವುದು ವಿಶೇಷ.

ಇದೇ ಮೊದಲ ಬಾರಿಗೆ ಬೆಂಗಳೂರಲ್ಲಿ ಫಿಲ್ಮ್​ಫೇರ್​ ಸಂಭ್ರಮ; ಶುಭ ಕೋರಿದ ಪೂಜಾ ಹೆಗ್ಡೆ, ಹರ್ಷಿಕಾ, ಪ್ರಿಯಾಂಕಾ
ಜಿತೇಶ್​, ಪೂಜಾ ಹೆಗ್ಡೆ, ಕಮರ್​, ತಾರಾ
Follow us on

ಫಿಲ್ಮ್​ಫೇರ್​ ಪ್ರಶಸ್ತಿ (Filmfare Awards) ಎಂದರೆ ಕಣ್ಣರಳಿಸಿ ನೋಡುತ್ತದೆ ಚಿತ್ರರಂಗ. ಕಳೆದ 66 ವರ್ಷಗಳಿಂದ ಈ ಪ್ರತಿಷ್ಠಿತ ಪ್ರಶಸ್ತಿ ಸಮಾರಂಭವನ್ನು ನಡೆಸಿಕೊಂಡು ಬರಲಾಗುತ್ತಿದೆ. ಆದರೆ ಒಮ್ಮೆಯೂ ಬೆಂಗಳೂರಿನಲ್ಲಿ ಈ ಕಾರ್ಯಕ್ರಮ ಆಯೋಜನೆ ಆಗಿಲ್ಲ. ಇದೇ ಮೊದಲ ಬಾರಿಗೆ ಗಾರ್ಡನ್​ ಸಿಟಿ ಬೆಂಗಳೂರಿನಲ್ಲಿ ‘ಫಿಲ್ಮ್​ಫೇರ್​ ಅವಾರ್ಡ್ಸ್​ ಸೌತ್​’ (Filmfare Awards South) ಸಮಾರಂಭವನ್ನು ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಜವಾಬ್ದಾರಿಯನ್ನು ಕಮರ್​ ಫಿಲ್ಮ್​ ಫ್ಯಾಕ್ಟರಿ (Kamar Film Factory) ಸಂಸ್ಥೆ ಹೊತ್ತುಕೊಂಡಿದೆ. ಆ ಕುರಿತು ಮಾಹಿತಿ ನೀಡಲು ಸುದ್ದಿಗೋಷ್ಠಿ ಕರೆಯಲಾಗಿತ್ತು. ಈ ಕಾರ್ಯಕ್ರಮಕ್ಕೆ ಬಹುಭಾಷಾ ನಟಿ ಪೂಜಾ ಹೆಗ್ಡೆ (Pooja Hegde) ಮುಖ್ಯ ಅತಿಥಿ ಆಗಿ ಆಗಮಿಸಿದ್ದರು. ಕನ್ನಡದ ಅನುಭವಿ ಕಲಾವಿದೆ ತಾರಾ ಅನುರಾಧ, ನಟಿ ಪ್ರಿಯಾಂಕಾ ಉಪೇಂದ್ರ, ಹರ್ಷಿಕಾ ಪೂಣಚ್ಚ ಕೂಡ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು.

ಫಿಲ್ಮ್​ಫೇರ್​ ಸಮಾರಂಭ ತುಂಬ ಅದ್ದೂರಿಯಾಗಿ ನಡೆಯುತ್ತದೆ. ಎಲ್ಲ ಭಾಷೆಯ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಇದರಲ್ಲಿ ಭಾಗಿ ಆಗುತ್ತಾರೆ. ಇಂಥ ಸಮಾರಂಭವನ್ನು ಆಯೋಜನೆ ಮಾಡುವುದು ಸುಲಭವಲ್ಲ. ಬೆಂಗಳೂರಿನಲ್ಲಿ ಮೊದಲ ಬಾರಿಗೆ ಈ ಅವಾರ್ಡ್​ ಫಂಕ್ಷನ್​ ಮಾಡುತ್ತಿರುವುದಕ್ಕೆ ಕಮರ್​ ಅವರಿಗೆ ಹೆಮ್ಮೆ ಇದೆ. ಹಿಂದೆಂದಿಗಿಂತಲೂ ಅತ್ಯುತ್ತಮವಾಗಿ ಕಾರ್ಯಕ್ರಮ ಆಯೋಜನೆ ಮಾಡುವುದಾಗಿ ಅವರು ಭರವಸೆ ನೀಡಿದ್ದಾರೆ. ‘ಕಳೆದ ಎಲ್ಲ ವರ್ಷಗಳಿಗಿಂತಲೂ ಚೆನ್ನಾಗಿ ನಾನು ಈ ಸಮಾರಂಭವನ್ನು ಈ ಬಾರಿ ಬೆಂಗಳೂರಿನಲ್ಲಿ ಮಾಡಿ ತೋರಿಸುತ್ತೇನೆ. ಬಾಲಿವುಡ್​ ಮಂದಿಗೆ ಇದು ನನ್ನ ಸವಾಲು. ಇದು ನಮಗೆ ಸಿಕ್ಕಿರುವ ದೊಡ್ಡ ಅವಕಾಶ’ ಎಂದು ಕಮರ್​ ಹೇಳಿದ್ದಾರೆ.

ನಟಿ ತಾರಾ ಅನುರಾಧ ಅವರು ಶುಭಕೋರಿದ್ದಾರೆ. ‘ಫಿಲ್ಮ್​ಫೇರ್​ ಎಂದರೆ ಎಲ್ಲ ಭಾಷೆಯ ಚಿತ್ರರಂಗದವರು ಸೇರಿ ಆಚರಿಸುವ ಹಬ್ಬ. ಅದನ್ನು ಮೊದಲ ಬಾರಿಗೆ ಬೆಂಗಳೂರಿನಲ್ಲಿ ಆಯೋಜಿಸುತ್ತಿರುವುದು ಖುಷಿಯ ವಿಚಾರ. ಇದಕ್ಕಾಗಿ ಕಮರ್​ ಮತ್ತು ಅವರ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಮತ್ತೆ ಮತ್ತೆ ಈ ಕಾರ್ಯಕ್ರಮ ಬೆಂಗಳೂರಿನಲ್ಲೇ ಆಯೋಜನೆಗೊಳ್ಳುವಂತೆ ಆಗಲಿ’ ಎಂದು ತಾರಾ ಅನುರಾಧ ಹೇಳಿದರು.

ಪೂಜಾ ಹೆಗ್ಡೆ ಅವರಿಗೆ ಫಿಲ್ಮ್​ಫೇರ್​ ಎಂದರೆ ಚಿಕ್ಕ ವಯಸ್ಸಿನಿಂದಲೂ ಏನೂ ಒಂಥರ ಸಂಭ್ರಮ. ‘ಚಿಕ್ಕವಳಿದ್ದಾಗ ನಾನು ಫಿಲ್ಮ್​ಫೇರ್​ ಕಾರ್ಯಕ್ರಮ ನೋಡಲು ಫ್ಯಾಮಿಲಿ ಜತೆ ಹೋಗಿದ್ದೆ. ಆದರೆ ನಮ್ಮ ಬಳಿ ಪಾಸ್​ ಇರಲಿಲ್ಲ. ನನ್ನ ಸ್ನೇಹಿತರ ಪೋಷಕರ ಜತೆ ನುಸುಳಿಕೊಂಡು ಹೋಗಿ, ಅವರ ತೊಡೆ ಮೇಲೆ ಕುಳಿತು ನಾನು ಫಿಲ್ಮ್​ಫೇರ್​ ಸಮಾರಂಭ ನೋಡಿದ್ದೆ. ಇಂದು ನಾನು ಫಿಲ್ಮ್​ಫೇರ್​ ಕಾರ್ಯಕ್ರಮದ ಭಾಗವಾಗುತ್ತೇನೆ ಎಂದು ಕನಸಿನಲ್ಲಿಯೂ ಆಗ ಊಹಿಸಿರಲಿಲ್ಲ. ಇದರಲ್ಲಿ ಭಾಗಿ ಆಗುತ್ತಿರುವುದು ಖುಷಿ ನೀಡಿದೆ. ಬೆಂಗಳೂರಿನಲ್ಲಿ ನಡೆಯಲಿರುವುದು ಇನ್ನೂ ಸಂತಸದ ವಿಚಾರ. ನಾನು ಕರ್ನಾಟಕ ಮೂಲದವಳು ಎಂದು ಹೇಳಿಕೊಳ್ಳಲು ಹೆಮ್ಮೆ ಆಗುತ್ತದೆ’ ಎಂದರು ಪೂಜಾ ಹೆಗ್ಡೆ.

ಇದನ್ನೂ ಓದಿ:

‘ರಾಧೆ ಶ್ಯಾಮ್​’ ಚಿತ್ರದ ಕಥೆ ಲೀಕ್​; ಪ್ರಭಾಸ್​-ಪೂಜಾ ಹೆಗ್ಡೆ ಸಿನಿಮಾದ ಈ ಹಾಡಿನಲ್ಲಿ ಅಡಗಿದೆ ಸ್ಟೋರಿ

ಇನ್ನೂ ನಿಂತಿಲ್ಲ ಶಿವಣ್ಣನ ಕಣ್ಣೀರು; ಅಪ್ಪು ನೆನೆದು ಬಿಕ್ಕಿ ಬಿಕ್ಕಿ ಅಳುತ್ತಿರುವ ಮುತ್ತಣ್ಣ

Published On - 9:09 am, Mon, 6 December 21