ಶಾಶ್ವತ ಮಾತ್ರವಲ್ಲ ತಾತ್ಕಾಲಿಕವಾಗಿಯೂ ಬಂದ್ ಆಗುತ್ತಿವೆ ಥಿಯೇಟರ್​ಗಳು; ಕಾರಣವೇನು?

|

Updated on: May 09, 2024 | 12:11 PM

ಕಾವೇರಿ ಚಿತ್ರಮಂದಿರ ನೆಲಸಮ ಆದ ಬಗ್ಗೆ, ಮುಂದಾಗುವ ಪರಿಣಾಮಗಳ ಬಗ್ಗೆ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಸುದ್ದಿ ಪ್ರಕಟಿಸಲಾಗಿತ್ತು. ಹಾಗಾದರೆ ಥಿಯೇಟರ್​ ಮುಚ್ಚಲು ಕಾರಣಗಳೇನು? ಸ್ಟಾರ್ ಸಿನಿಮಾಗಳು ಬರುತ್ತಿಲ್ಲವ ಎನ್ನುವುದೊಂದೇ ಕಾರಣವೇ? ಈ ಬಗ್ಗೆ ಈ ಸ್ಟೋರಿಯಲ್ಲಿ ಚರ್ಚಿಸಲಾಗಿದೆ.

ಶಾಶ್ವತ ಮಾತ್ರವಲ್ಲ ತಾತ್ಕಾಲಿಕವಾಗಿಯೂ ಬಂದ್ ಆಗುತ್ತಿವೆ ಥಿಯೇಟರ್​ಗಳು; ಕಾರಣವೇನು?
ಪ್ರದರ್ಶಕರ ಸಂಘದ ಅಧ್ಯಕ್ಷ ಕೆವಿ ಚಂದ್ರಶೇಖರ್
Follow us on

ಥಿಯೇಟರ್​ಗಳು ಒಂದಾದ ಮೇಲೆ ಒಂದರಂತೆ ಬಾಗಿಲು ಹಾಕುತ್ತಿವೆ. ಇತ್ತೀಚೆಗಷ್ಟೇ ಬೆಂಗಳೂರಿನ ಪ್ರತಿಷ್ಠಿತ ಥಿಯೇಟರ್​ಗಳಲ್ಲಿ ಒಂದಾದ ಕಾವೇರಿ ಚಿತ್ರಮಂದಿರ ಮುಚ್ಚಿದೆ. ಇದಕ್ಕೆ ಕಾರಣ ಹಲವು. ಅಸಲಿಗೆ ಥಿಯೇಟರ್​ಗಳು ಮುಚ್ಚಲು ಕಾರಣ ಏನು ಎಂದು ಹುಡುಕಿ ಹೊರಟರೆ ಸಾಕಷ್ಟು ಉತ್ತರಗಳು ಸಿಗುತ್ತವೆ. ಪ್ರದರ್ಶಕರ ಸಂಘದ ಅಧ್ಯಕ್ಷ ಕೆವಿ ಚಂದ್ರಶೇಖರ್ (KV Chandrashekhar) ಅವರು ಈ ವಿಚಾರದ ಬಗ್ಗೆ ಸವಿಸ್ತಾರವಾಗಿ ಮಾತನಾಡಿದ್ದಾರೆ. ಅಸಲಿಗೆ ನಡೆಯುತ್ತಿರೋದು ಏನು ಎಂಬುದನ್ನು ಅವರು ವಿವರಿಸಿದ್ದಾರೆ. ಜೊತೆಗೆ ಥಿಯೇಟರ್​ಗಳು ತಾತ್ಕಾಲಿಕವಾಗಿ ಬಂದ್ ಆಗುತ್ತಿರುವ ಬಗ್ಗೆಯೂ ಮಾತನಾಡಿದ್ದಾರೆ.

ಈ ವರ್ಷದಲ್ಲಿ ಐದು ತಿಂಗಳು ಪೂರ್ಣಗೊಳ್ಳುತ್ತಾ ಬಂದಿದೆ. ಈವರೆಗೆ ಒಂದೇ ಒಂದು ಸ್ಟಾರ್ ಸಿನಿಮಾ ರಿಲೀಸ್ ಆಗಿಲ್ಲ. ಜನರು ಥಿಯೇಟರ್​ಗೆ ಬರದೆ ಇರಲು ಇದೇ ಕಾರಣವೇ ಎನ್ನುವ ಪ್ರಶ್ನೆ ಮೂಡೋದು ನಿಜ. ಆದರೆ, ಇದನ್ನು ಚಂದ್ರಶೇಖರ್ ಅವರು ಅಲ್ಲಗಳೆಯುತ್ತಾರೆ. ‘ಉದ್ಯಮ ನಡೆಯುತ್ತಿಲ್ಲ ಅನ್ನೋ ಕಾರಣಕ್ಕೆ ಥಿಯೇಟರ್​ಗಳು ಮುಚ್ಚುತ್ತಿವೆ. ಸ್ಟಾರ್ ಹೀರೋಗಳ ಸಿನಿಮಾ ಬರುತ್ತಿಲ್ಲ ಅನ್ನೋ ಕಾರಣಕ್ಕೆ ಜನರು ಥಿಯೇಟರ್​ಗೆ ಬರುತ್ತಿಲ್ಲ ಅನ್ನೋದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಒಳ್ಳೆಯ ಕಂಟೆಂಟ್ ಇರುವ ಸಿನಿಮಾ ಬರುತ್ತಿವೆ. ಆದಾಗ್ಯೂ ಪ್ರೇಕ್ಷಕ ಕೈ ಹಿಡಿಯುತ್ತಿಲ್ಲ’ ಎಂದು ಬೇಸರ ಹೊರಹಾಕಿದ್ದಾರೆ ಅವರು.

ಪರಭಾಷೆಯಲ್ಲಿ ಪರಿಸ್ಥಿತಿ ಹೇಗಿದೆ? ಅಲ್ಲಿನ ಜನರು ಸಿನಿಮಾ ವೀಕ್ಷಿಸುತ್ತಿದ್ದಾರಾ? ಹೀಗೊಂದು ಪ್ರಶ್ನೆ ಎದುರಾಗೋದು ಸಹಜ. ಇದಕ್ಕೆ ಚಂದ್ರಶೇಖರ್ ಅವರು ವಿವರಣೆ ನೀಡಿದ್ದು ಹೀಗೆ. ‘ನಮ್ಮಲ್ಲಿ ಯಾವ ರೀತಿಯ ಪರಿಸ್ಥಿತಿ ಇದೆಯೋ ತಮಿಳುನಾಡು, ತೆಲುಗು ಪ್ರದೇಶದಲ್ಲಿ ಇದೇ ರೀತಿಯ ಪರಿಸ್ಥಿತಿ ಇದೆ. ಕೇರಳದಲ್ಲಿ ಮಾತ್ರ ಸಿನಿಮಾಗಳು ಯಶಸ್ಸು ಕಾಣುತ್ತಿವೆ. ಕೇರಳ ಪ್ರೇಕ್ಷಕರು ಬೇರೆಯದೇ ರೀತಿ ಇದ್ದಾರೆ. ಸೂಪರ್ ಸ್ಟಾರ್ ಹೀರೋಗಳನ್ನು ಮಾತ್ರ ನೋಡ್ತೀವಿ ಎನ್ನುವ ಮನಸ್ಥಿತಿ ಅವರದ್ದಲ್ಲ’ ಎಂದಿದ್ದಾರೆ ಅವರು.

ಸಿನಿಮಾಗಳು ಇಲ್ಲ ಎಂದರೆ ಗಾಂಧಿನಗರ ತಾತ್ಕಾಲಿಕವಾಗಿ ಸ್ತಬ್ಧವಾಗಿರುತ್ತದೆ. ‘ಈ ವಾರ ಸಿನಿಮಾಗಳು ರಿಲೀಸ್ ಆಗುತ್ತಿಲ್ಲ ಎಂದರೆ ತಾತ್ಕಾಲಿಕವಾಗಿ ಮುಚ್ಚಲೇಬೇಕು. ಹಳೆಯ ಸಿನಿಮಾಗಳನ್ನು ಹಾಕೋಣ ಎಂದರೆ ಹೊಸ ಸಿನಿಮಾಗಳನ್ನೇ ಜನರು ನೋಡುತ್ತಿಲ್ಲ ಹೀಗಿರುವಾಗ ಹಳೆಯ ಸಿನಿಮಾಗಳನ್ನು ನೋಡೋದು ಯಾರು? ಮುಂದಿನವಾರ ಒಂದು ಸಿನಿಮಾ ಬರುತ್ತದೆ ಎನ್ನುವ ಘೋಷಣೆ ಆಗಿರುತ್ತದೆ. ಮುಂಬರೋ ಸಿನಿಮಾ ಚೆನ್ನಾಗಿದೆ ಎಂದರೆ ಥಿಯೇಟರ್​​ನ ತಾತ್ಕಾಲಿಕವಾಗಿ ಮುಚ್ಚಿಡುತ್ತಾರೆ. ಅಲ್ಲಿರುವ ಕೆಲಸಗಾರರಿಗೆ ಸಂಬಳ ಕೊಡಲೇಬೇಕು. ಪವರ್ ಬಿಲ್​ನಲ್ಲಿ ಸ್ವಲ್ಪ ಉಳಿಯುತ್ತದೆ ಅಷ್ಟೇ’ ಎಂದಿದ್ದಾರೆ ಅವರು.

‘10 ವರ್ಷಗಳ ಹಿಂದೆ ಬಾಡಿಗೆ ಇತ್ತು. ಆದರೆ, ಈಗ ಆ ಕಾನ್ಸೆಪ್ಟ್ ಹೋಗಿದೆ. ಆದರೆ, ಈಗ ಹೇಗಾಗಿದೆ ಎಂದರೆ ಮೊದಲ ವಾರ ಬಾಡಿಗೆ ಅದರ ಮುಂದಿನ ವಾರ ಪರ್ಸಂಟೇಜ್ ಎನ್ನುವ ಮಾತು ಬರುತ್ತಿದೆ. ಇದರಿಂದ ಪ್ರದರ್ಶಕರಿಗೆ ಕಷ್ಟ ಆಗುತ್ತಿದೆ. ಥಿಯೇಟರ್ ಮುಚ್ಚಲು ಇದು ಮುಖ್ಯ ಕಾರಣ. ನಿರ್ಮಾಪಕರು ಮಾಡುತ್ತಿರುವುದು ತಪ್ಪು ಎಂದು ನಾನು ಹೇಳುತ್ತಿಲ್ಲ. 10 ವರ್ಷಗಳ ಹಿಂದೆ ಎಲ್ಲರೂ ಇರಬೇಕು ಎನ್ನುವ ಅಭಿಪ್ರಾಯ ಇತ್ತು. ಆದರೆ, ಈಗ ಹಾಗಿಲ್ಲ’ ಎಂದಿದ್ದಾರೆ ಚಂದ್ರಶೇಖರ್.

ಇದನ್ನೂ ಓದಿ: ಕಾವೇರಿ ಥಿಯೇಟರ್​ ನೆಲಸಮ; ಏಕಪರದೆ ಚಿತ್ರಮಂದಿರಗಳ ಅಂತ್ಯದಿಂದ ಪ್ರೇಕ್ಷಕರ ಜೇಬಿಗೆ ಕತ್ತರಿ

ಟಿಕೆಟ್ ಬೆಲೆ ಕೂಡ ಗಗನಕ್ಕೆ ಏರಿದೆ. ಈ ರೀತಿ ಟಿಕೆಟ್ ಬೆಲೆ ಇಡೋಕೆ ಪ್ರದರ್ಶಕರು ರೆಡಿ ಇಲ್ಲ. ಆದರೆ, ಹಂಚಿಕೆದಾರರು-ನಿರ್ಮಾಪಕರ ಒತ್ತಡಕ್ಕೆ ಮಣಿದು ಇಷ್ಟು ದೊಡ್ಡ ಮೊತ್ತದ ಟಿಕೆಟ್ ದರ ಇಡಬೇಕಾಗುತ್ತದೆ ಎಂದಿದ್ದಾರೆ ಚಂದ್ರಶೇಖರ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 11:41 am, Thu, 9 May 24