ಯು/ಎ ಪ್ರಮಾಣಪತ್ರ ಪಡೆದ ‘ಅಂಶು’; ‘ಗಟ್ಟಿಮೇಳ’ ನಟಿಯ ಹೊಸ ಸಿನಿಮಾ

ಕನ್ನಡದ ಕಿರುತೆರೆಯಲ್ಲಿ ‘ಗಟ್ಟಿಮೇಳ’ ಸೀರಿಯಲ್ ಮೂಲಕ ನಿಶಾ ರವಿಕೃಷ್ಣನ್ ಅವರು ಜನಪ್ರಿಯತೆ ಗಳಿಸಿದ್ದಾರೆ. ಈಗ ಅವರು ‘ಅಂಶು’ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾಗೆ ಸೆನ್ಸಾರ್ ಪ್ರಮಾಣ ಪತ್ರ ಸಿಕ್ಕಿದೆ. ನ.21ಕ್ಕೆ ಈ ಸಿನಿಮಾ ತೆರೆಕಾಣಲಿದೆ. ಎಂ.ಸಿ. ಚನ್ನಕೇಶವ ಅವರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿದೆ.

ಯು/ಎ ಪ್ರಮಾಣಪತ್ರ ಪಡೆದ ‘ಅಂಶು’; ‘ಗಟ್ಟಿಮೇಳ’ ನಟಿಯ ಹೊಸ ಸಿನಿಮಾ
ನಿಶಾ ರವಿಕೃಷ್ಣನ್

Updated on: Nov 10, 2024 | 3:27 PM

ಕೆಲವು ದಿನಗಳ ಹಿಂದೆ ಅನಾವರಣ ಆಗಿದ್ದ ಟ್ರೇಲರ್​ನಿಂದ ‘ಅಂಶು’ ಸಿನಿಮಾ ಗಮನ ಸೆಳೆದಿತ್ತು. ಸಮಾಜದ ನಡುವೆ ಘಟಿಸುವ ಕಥೆಯು ಕಮರ್ಶಿಯಲ್ ಶೈಲಿಯಲ್ಲಿ ಮೂಡಿಬಂದಿದೆ ಎಂಬುದನ್ನು ಈ ಟ್ರೇಲರ್​ ಮೂಲಕ ತಿಳಿಸಲಾಗಿತ್ತು. ಅದನ್ನು ನೋಡಿ ಪ್ರೇಕ್ಷಕರಿಗೆ ಕೌತುಕ ಹೆಚ್ಚಿತ್ತು. ಆ ಖುಷಿಯಲ್ಲೇ ರಿಲೀಸ್​ಗೆ ತಯಾರಿ ಮಾಡಿಕೊಳ್ಳುತ್ತಿರುವ ಚಿತ್ರತಂಡದವರು ಈಗ ಇನ್ನೊಂದು ಹೊಸ ವಿಚಾರವನ್ನು ಹಂಚಿಕೊಂಡಿದ್ದಾರೆ. ಈ ಸಿನಿಮಾಗೆ ಸೆನ್ಸಾರ್ ಪ್ರಕ್ರಿಯೆ ಮುಗಿದಿದೆ. ‘ಅಂಶು’ ಸಿನಿಮಾಗೆ ‘ಯು/ಎ’ ಪ್ರಮಾಣಪತ್ರ ನೀಡಲಾಗಿದೆ.

‘ಅಂಶು’ ಸಿನಿಮಾದಲ್ಲಿ ಸಾಮಾಜಿಕ ವಸ್ತುವಿಷಯಕ್ಕೆ ದೃಶ್ಯರೂಪ ನೀಡಿರುವ ಕೆಲಸಕ್ಕೆ ಸೆನ್ಸಾರ್ ಅಧಿಕಾರಿಗಳಿಂದ ಮೆಚ್ಚುಗೆ ಸಿಕ್ಕಿದೆ ಎಂದು ಚಿತ್ರತಂಡದವರು ಹೇಳಿಕೊಂಡಿದ್ದಾರೆ. ಇದರಿಂದಾಗಿ ಸಿನಿಮಾ ತಂಡದ ಆತ್ಮವಿಶ್ವಾಸ ಹೆಚ್ಚಿದೆ. ‘ಗ್ರಹಣ ಎಲ್.ಎಲ್.ಪಿ’ ಬ್ಯಾನರ್ ಮೂಲಕ ರತನ್ ಗಂಗಾಧರ್ ಸಂಪತ್ ಶಿವಶಂಕರ್, ಕೃತಿ ನಾಣಯ್ಯ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

ಚೆಲುವರಾಜ್, ಜಯಚಂದ್ರ ಯಲ್ಲಪ್ಪ, ಡಾ. ಮಧುರಾಜ್ಮ ಪ್ರಮೋದ್ ಚಿನ್ನಸ್ವಾಮಿ ಅವರು ಸಹ-ನಿರ್ಮಾಪಕರಾಗಿದ್ದಾರೆ. ಈ ಮೊದಲು ಫಸ್ಟ್ ಲುಕ್ ಟೀಸರ್ ಮೂಲಕ ಸದ್ದು ಮಾಡಿದ್ದ ಈ ಸಿನಿಮಾದಲ್ಲಿ ‘ಗಟ್ಟಿಮೇಳ’ ಸೀರಿಯಲ್ ಖ್ಯಾತಿಯ ನಿಶಾ ರವಿಕೃಷ್ಣನ್ ಅವರು ನಾಯಕಿಯಾಗಿ ಅಭಿನಯಿಸಿದ್ದಾರೆ. ಆ ಸೀರಿಯಲ್​ನಲ್ಲಿ ರೌಡಿ ಬೇಬಿ ಅವತಾರದಲ್ಲಿ ಕಾಣಿಸಿದ್ದ ನಿಶಾ ಅವರು ಈಗ ‘ಅಂಶು’ ಚಿತ್ರದಲ್ಲಿ ಭಾವನಾತ್ಮಕ ಪಾತ್ರದ ಮೂಲಕ ಹಿರಿತೆರೆಯಲ್ಲಿ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದ್ದಾರೆ.

ಸ್ಯಾಂಡಲ್​ವುಡ್​ ಮಟ್ಟಿಗೆ ವಿರಳ ಎಂಬಂತಹ ಸೈಕ್ಯಾಡೆಲಿಕ್ ಥ್ರಿಲ್ಲರ್ ಶೈಲಿಯ ಸಿನಿಮಾವಾಗಿ ‘ಅಂಶು’ ಮೂಡಿಬಂದಿದೆ. ಎಂ.ಸಿ. ಚನ್ನಕೇಶವ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಇದು ಅವರ ಮೊದಲ ಸಿನಿಮಾ ಆಗಿದ್ದು, ಚೊಚ್ಚಲ ಪ್ರಯತ್ನದಲ್ಲೇ ಸಮಾಜಮುಖಿ ಕಥೆಯನ್ನು ಆಯ್ದುಕೊಂಡಿದ್ದಾರೆ. ಸುನೀಲ್ ನರಸಿಂಹಮೂರ್ತಿ ಅವರು ಈ ಸಿನಿಮಾಗೆ ಛಾಯಾಗ್ರಹಣ ಮಾಡಿದ್ದಾರೆ.

ಇದನ್ನೂ ಓದಿ: ಭಿನ್ನವಾಗಿ ಶಂಕರ್ ನಾಗ್ ಹುಟ್ಟುಹಬ್ಬ ಆಚರಿಸಿದ ‘ಮರ್ಯಾದೆ ಪ್ರಶ್ನೆ’ ತಂಡ

ನವೆಂಬರ್​ 21ಕ್ಕೆ ‘ಅಂಶು’ ಸಿನಿಮಾ ಬಿಡುಗಡೆ ಆಗಲಿದೆ. ಆಶಾ ಎಂ. ಥಾಮಸ್ ಅವರು ವಸ್ತ್ರವಿನ್ಯಾಸ ಮಾಡಿದ್ದಾರೆ. ಕೆ.ಸಿ. ಬಾಲರಂಗನ್ ಅವರು ಸಂಗೀತ ನೀಡಿದ್ದಾರೆ. ವಿಘ್ನೇಶ್ ಶಂಕರ್ ಅವರ ಹಿನ್ನೆಲೆ ಸಂಗೀತ ಈ ಸಿನಿಮಾಗೆ ಇದೆ. ಮಹೇಂದ್ರ ಗೌಡ ಅವರು ಸಂಭಾಷಣೆ ಮತ್ತು ಸಾಹಿತ್ಯ ಬರೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.