ಅಪಘಾತದಲ್ಲಿ ಮೃತಪಟ್ಟ 13 ಜನರ ಕುಟುಂಬಕ್ಕೆ ತಲಾ 1 ಲಕ್ಷ ರೂ. ನೀಡಿದ ಶಿವಣ್ಣ-ಗೀತಾ

ಅಪಘಾತದಲ್ಲಿ ಮೃತಪಟ್ಟ ಶಿವಮೊಗ್ಗ ಜಿಲ್ಲೆಯ ಎಮ್ಮೆಹಟ್ಟಿ ಗ್ರಾಮದ 13 ಜನರ ಕುಟುಂಬಗಳಿಗೆ ಶಿವರಾಜ್​ಕುಮಾರ್​ ಮತ್ತು ಗೀತಾ ದಂಪತಿ ಸಾಂತ್ವನ ಹೇಳಿದ್ದಾರೆ. ಅಲ್ಲದೇ ಪ್ರತಿ ಕುಟುಂಬಕ್ಕೆ ತಲಾ ಒಂದು ಲಕ್ಷ ರೂಪಾಯಿ ನೀಡಿದ್ದಾರೆ. ಈ ಕುಟುಂಬದವರಿಗೆ ನೋವು ಸಹಿಸುವ ಶಕ್ತಿಯನ್ನು ದೇವರ ನೀಡಲಿ ಎಂದು ಶಿವರಾಜ್​ಕುಮಾರ್​-ಗೀತಾ ದಂಪತಿ ಪ್ರಾರ್ಥಿಸಿದ್ದಾರೆ.

ಅಪಘಾತದಲ್ಲಿ ಮೃತಪಟ್ಟ 13 ಜನರ ಕುಟುಂಬಕ್ಕೆ ತಲಾ 1 ಲಕ್ಷ ರೂ. ನೀಡಿದ ಶಿವಣ್ಣ-ಗೀತಾ
ಮೃತರ ಕುಟುಂಬದವರಿಗೆ ಶಿವಣ್ಣ ಮತ್ತು ಗೀತಾ ದಂಪತಿ ಸಾಂತ್ವನ ಹೇಳಿದ್ದಾರೆ
Updated By: ಮದನ್​ ಕುಮಾರ್​

Updated on: Jul 08, 2024 | 4:03 PM

ಕೆಲವೇ ದಿನಗಳ ಹಿಂದೆ ಹಾವೇರಿ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಶಿವಮೊಗ್ಗ ಜಿಲ್ಲೆಯ ಎಮ್ಮೆಹಟ್ಟಿ ಗ್ರಾಮದ 13 ಮಂದಿ ಸಾವನ್ನಪ್ಪಿದ್ದು ನಿಜಕ್ಕೂ ದುರಂತ. ಇಂದು (ಜುಲೈ 8) ನಟ ಶಿವರಾಜ್​ಕುಮಾರ್​ ಹಾಗೂ ಅವರ ಪತ್ನಿ ಗೀತಾ ಎಮ್ಮೆಹಟ್ಟಿ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಮೃತರ ಕುಟುಂಬದವರಿಗೆ ಶಿವಣ್ಣ ಮತ್ತು ಗೀತಾ ದಂಪತಿ ಸಾಂತ್ವನ ಹೇಳಿದ್ದಾರೆ. ಅಲ್ಲದೇ 13 ಜನರ ಕುಟುಂಬಗಳಿಗೆ ತಲಾ ಒಂದು ಲಕ್ಷ ರೂಪಾಯಿ ನೀಡುವ ಮೂಲಕ ಆರ್ಥಿಕ ಸಹಾಯ ಮಾಡಿದ್ದಾರೆ. ಬಳಿಕ ಗಾಯಾಳು ಅರ್ಪಿತಾ ಅವರ ಆರೋಗ್ಯವನ್ನು ಅವರು ವಿಚಾರಿಸಿದ್ದಾರೆ. ಶಿವರಾಜ್​ಕುಮಾರ್​, ಗೀತಾ ಶಿವರಾಜ್​ಕುಮಾರ್​ ಜೊತೆ ಶಾಸಕ ಬಿ.ಕೆ. ಸಂಗಮೇಶ್ ಕೂಡ ಇದ್ದರು.

ಮೃತರ ಕುಟುಂಬಗಳಿಗೆ ಭೇಟಿ ನೀಡಿದ ಬಳಿಕ ಗೀತಾ ಶಿವರಾಜ್​ಕುಮಾರ್​ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ‘ಈ ದುರ್ಘಟನೆ ನಡೆದಾಗಿನಿಂದ ಇಲ್ಲಿಗೆ ಬರುವ ಧೈರ್ಯ ಮಾಡಲು ನನಗೆ ತುಂಬ ಕಷ್ಟ ಆಯಿತು. 13 ಜನರ ಸಾವಿನ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ದೇವರೇ ನೀಡಬೇಕು. ಅವರಿಗೆ ಆಗಿರುವ ನಷ್ಟವನ್ನು ನಾವು ಯಾರೂ ಕೂಡ ತುಂಬಲು ಸಾಧ್ಯವಿಲ್ಲ. ಅವರ ನೆರವಿಗೆ ಬರಲು ನಮಗೆ ಅವಕಾಶ ಇದೆ ಅಷ್ಟೇ. ನಮ್ಮ ಕೈಲಾದಷ್ಟು ಸಹಾಯ ಮಾಡುತ್ತೇವೆ’ ಎಂದು ಗೀತಾ ಶಿವರಾಜ್​ಕುಮಾರ್​ ಅವರು ಹೇಳಿದ್ದಾರೆ.

‘ಮಾನಸಾ ಎಂಬ ಹುಡುಗಿ ಈ ಅಪಘಾತದಲ್ಲಿ ಮೃತಳಾದಳು. ಆಕೆ ಅಥ್ಲೀಟ್​ ಆಗಿದ್ದಳು. ಐಎಎಸ್​ಗೆ ಓದುತ್ತಿದ್ದಳು. ಆಕೆ ಹೋಗಿದ್ದು ದೊಡ್ಡ ನಷ್ಟ. ತಾಯಿಯನ್ನು ಕಳೆದುಕೊಂಡ ಮಕ್ಕಳು ಇದ್ದಾರೆ. ತಂದೆ ಸ್ಥಿತಿ ಗಂಭೀರವಾಗಿದೆ. ಈ ಊರಿನ ಗ್ರಾಮಸ್ಥರು ಆ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ. ಕಷ್ಟದಲ್ಲಿ ಒಬ್ಬರಿಗೆ ಮತ್ತೊಬ್ಬರು ನೆರವಾಗಬೇಕು ಎಂಬುದಕ್ಕೆ ಎಮ್ಮೆಹಟ್ಟಿ ಗ್ರಾಮದವರು ಮಾದರಿ ಆಗಿದ್ದಾರೆ. ಯಾವಾಗಲೂ ನಾವು ಅವರ ಜೊತೆಗೆ ನಿಲ್ಲುತ್ತೇವೆ’ ಎಂದಿದ್ದಾರೆ ಗೀತಾ ಶಿವರಾಜ್​ಕುಮಾರ್​.

ಇದನ್ನೂ ಓದಿ: ಹಾವೇರಿ ಭೀಕರ ರಸ್ತೆ ಅಪಘಾತಕ್ಕೆ ಕಾರಣವಾದ ಅಂಶಗಳು ಯಾವುವು? ಅಲೋಕ್ ಕುಮಾರ್ ಹೇಳಿದ್ದಿಷ್ಟು

‘ಸಹಾಯ ಮಾಡುವುದು ಸುಲಭ. ಆದರೆ ಈ ಕುಟುಂಬದವರಿಗೆ ಸಮಾಧಾನ ಮಾಡುವುದು ಹೇಗೆ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಈ ಸಂದರ್ಭದಲ್ಲಿ ಗ್ರಾಮಸ್ಥರೆಲ್ಲ ಒಂದಾಗಿ ಇರುವುದೇ ದೊಡ್ಡ ವಿಷಯ. ಕುಟುಂಬದವರಿಗೆ ಆದ ನಷ್ಟ ಪ್ರತಿದಿನವೂ ಕಾಡುತ್ತಾ ಇರುತ್ತದೆ. ನೋವನ್ನು ಸಹಿಸುವ ಶಕ್ತಿ ಆ ದೇವರು ನೀಡಲಿ ಅಂತ ಕೇಳಿಕೊಳ್ಳುತ್ತೇನೆ. ಇಲ್ಲಿಗೆ ಬಂದು ನೋಡಿದಾಗ ಬಹಳ ಬೇಸರ ಆಯಿತು. ಇಂಥ ಘಟನೆ ಆಗಬಾರದಾಯಿತು. ನಮ್ಮ ಕೈಯಲ್ಲಿ ಆದ ಸಹಾಯ ಮಾಡಿದ್ದೇವೆ’ ಎಂದು ಶಿವರಾಜ್​ಕುಮಾರ್​ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.