‘ಕೆರೆಬೇಟೆ’ ಚಿತ್ರದಲ್ಲಿ ಮಲೆನಾಡಿನ ವಿಶೇಷ ಆಚರಣೆಯ ಪರಿಚಯ ಮಾಡಿಕೊಡಲಿರುವ ಗೌರಿ ಶಂಕರ್

|

Updated on: Oct 24, 2023 | 1:30 PM

ಮಲೆನಾಡಿನ ಭಾಗದಲ್ಲಿ ಮೀನು ಬೇಟೆಯಾಡುವ ಪದ್ಧತಿಯನ್ನು ‘ಕೆರೆಬೇಟೆ’ ಎನ್ನುತ್ತಾರೆ. ಇದನ್ನೇ ಪ್ರಧಾನವಾಗಿ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಅಪ್ಪಟ ಗ್ರಾಮೀಣ ಸೊಗಡಿನಲ್ಲಿ ಈ ಚಿತ್ರ ಮೂಡಿಬಂದಿದೆ. ‘ರಾಜಹಂಸ’ ಖ್ಯಾತಿಯ ಗೌರಿ ಶಂಕರ್ ಹೀರೋ ಆಗಿ ನಟಿಸಿರುವ ಈ ಸಿನಿಮಾಗೆ ರಾಜ್​ ಗುರು ನಿರ್ದೇಶನ ಮಾಡಿದ್ದಾರೆ.

‘ಕೆರೆಬೇಟೆ’ ಚಿತ್ರದಲ್ಲಿ ಮಲೆನಾಡಿನ ವಿಶೇಷ ಆಚರಣೆಯ ಪರಿಚಯ ಮಾಡಿಕೊಡಲಿರುವ ಗೌರಿ ಶಂಕರ್
‘ಕೆರೆಬೇಟೆ’ ಸಿನಿಮಾ ಟೈಟಲ್ ಪೋಸ್ಟರ್
Follow us on

ಕನ್ನಡ ಚಿತ್ರರಂಗದಲ್ಲಿ (Kannada Film Industry) ಡಿಫರೆಂಟ್​ ಪರಿಕಲ್ಪನೆಯ ಸಿನಿಮಾಗಳು ಆಗಾಗ ಬರುತ್ತವೆ. ಬಿಗ್​ ಬಜೆಟ್​ ಚಿತ್ರಗಳ ನಡುವೆ ಇಂಥ ಸಿನಿಮಾಗಳು ಕೂಡ ಭರ್ಜರಿ ಮನರಂಜನೆ ನೀಡುತ್ತವೆ. ಅಂಥ ಸಿನಿಮಾಗಳ ಸಾಲಿಗೆ ಈಗ ಮತ್ತೊಂದು ಹೊಸ ಚಿತ್ರ ಸೇರ್ಪಡೆ ಆಗುತ್ತಿದೆ. ಪಕ್ಕಾ ಗ್ರಾಮೀಣ ಸೊಗಡಿನ ಕಥಾಹಂದರ ಹೊಂದಿರುವ ಸಿನಿಮಾ ಇದಾಗಿದ್ದು, ‘ಕೆರೆಬೇಟೆ’ (Kerebete) ಎಂದು ಶೀರ್ಷಿಕೆ ಇಡಲಾಗಿದೆ. ಈ ಸಿನಿಮಾದಲ್ಲಿ ಗೌರಿ ಶಂಕರ್ ಅವರು ಹೀರೋ ಆಗಿ ನಟಿಸಿದ್ದಾರೆ. ಭಿನ್ನ ಕಾನ್ಸೆಪ್ಟ್​ ಇರುವ ಈ ಸಿನಿಮಾಗೆ ರಾಜ್ ಗುರು ಅವರು ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಗೌರಿ ಶಂಕರ್ (Gowri Shankar) ಅವರು ‘ಜೋಕಾಲಿ’ ಮತ್ತು ‘ರಾಜಹಂಸ’ ಸಿನಿಮಾಗಳಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದರು.

ಗೌರಿ ಶಂಕರ್​ ನಟಿಸಿದ್ದ ‘ರಾಜಹಂಸ’ ಚಿತ್ರ ಬಿಡುಗಡೆ ಆಗಿ ಐದು ವರ್ಷಕ್ಕೂ ಹೆಚ್ಚು ಸಮಯ ಆಗಿದೆ. ಈಗ ಅವರು ‘ಕೆರೆಬೇಟೆ’ ಸಿನಿಮಾ ಮೂಲಕ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರಲು ರೆಡಿ ಆಗಿದ್ದಾರೆ. ನಿರ್ದೇಶಕ ರಾಜ್​ ಗುರು ಅವರಿಗೆ ಇದು ಮೊದಲ ಸಿನಿಮಾ. ಕಳೆದ 10 ವರ್ಷಗಳಿಂದ ಸ್ಯಾಂಡಲ್​ವುಡ್​ನಲ್ಲಿ ಎ.ಆರ್. ಬಾಬು, ಪವನ್‌ ಒಡೆಯರ್ ಮುಂತಾದ ಡೈರೆಕ್ಟರ್​ಗಳ ಜತೆ ಸಹ ನಿರ್ದೇಶಕರಾಗಿ ಕೆಲಸ ಮಾಡಿರುವ ಅನುಭವವನ್ನು ರಾಜ್ ಗುರು ಹೊಂದಿದ್ದಾರೆ. ಅವರೀಗ ‘ಕೆರೆಬೇಟೆ’ ಚಿತ್ರದ ಮೂಲಕ ಮಲೆನಾಡಿನ ಕಥೆ ಹೇಳಲು ಬರುತ್ತಿದ್ದಾರೆ.

ಕೆರೆಬೇಟೆ ಎಂದರೆ ಏನು ಗೊತ್ತಾ?

ಮಲೆನಾಡಿನ ಭಾಗದಲ್ಲಿ ಮೀನು ಬೇಟೆಯಾಡುವ ಪದ್ಧತಿಯನ್ನು ‘ಕೆರೆಬೇಟೆ’ ಎನ್ನುತ್ತಾರೆ. ಮಲೆನಾಡ ಭಾಗದಲ್ಲಿ ವರ್ಷಕೊಮ್ಮೆ ಕೆರೆಬೇಟೆ ಮಾಡಲಾಗುತ್ತದೆ. ದೊಡ್ಡ ಕೆರೆಗಳಲ್ಲಿ ಈ ಬೇಟೆ ನಡೆಯುತ್ತದೆ. ಇದನ್ನು ಪ್ರಧಾನವಾಗಿ ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಅಪ್ಪಟ ಗ್ರಾಮೀಣ ಸೊಗಡಿನಲ್ಲಿ ಈ ಸಿನಿಮಾ ಮೂಡಿಬಂದಿದೆ. ಈ ಚಿತ್ರದ ಮೂಲಕ ಮಲೆನಾಡಿನ ಕೆರೆಬೇಟೆಯನ್ನು ಎಲ್ಲ ಪ್ರದೇಶದ ಜನರಿಗೆ ತೋರಿಸಲಿದ್ದಾರೆ ನಿರ್ದೇಶಕ ರಾಜ್ ಗುರು ಹಾಗೂ ನಟ ಗೌರಿ ಶಂಕರ್. ಗಗನ್ ಬಡೇರಿಯಾ ಅವರ ಸಂಗೀತ ನಿರ್ದೇಶನ ಈ ಸಿನಿಮಾಗಿದೆ.

ಇದನ್ನೂ ಓದಿ: ‘ಚುಚ್ಚಿ ಚುಚ್ಚಿ ಕೊಂದೆಯಲ್ಲೇ..’ ಎಂದಿದ್ದ ಗೌರಿ ಶಂಕರ್​ ಕಮ್​ಬ್ಯಾಕ್​; ಈ ಬಾರಿ ಹಳ್ಳಿ ಸೊಗಡಿನ ಸಿನಿಮಾ

ಜೈ ಶಂಕರ್ ಪಟೇಲ್ ಮತ್ತು ಗೌರಿ ಶಂಕರ್ ಅವರು ‘ಜನಮನ ಸಿನಿಮಾ’ ಬ್ಯಾನರ್‌ ಮೂಲಕ ಈ ಚಿತ್ರವನ್ನು ನಿರ್ಮಿಸಿದ್ದಾರೆ. ‘ಕೆರೆಬೇಟೆ’ ಚಿತ್ರದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಈ ಚಿತ್ರಕ್ಕೆ ಸಿಗಂದೂರು ಮತ್ತು ಸೊರಬ ಸುತ್ತಮುತ್ತ ಶೂಟಿಂಗ್​ ಮಾಡಲಾಗಿದೆ. ಶೀರ್ಷಿಕೆ ಮೂಲಕ ಕುತೂಹಲ ಮೂಡಿಸಿರುವ ಈ ಚಿತ್ರ 2024ರ ಆರಂಭದಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ. ‘ಇದುವರೆಗೂ ಪ್ರೇಕ್ಷಕರು ಕಂಡಿರದ ಒಂದು ಹಳ್ಳಿ ಸೊಗಡಿನ ಕಥೆಯನ್ನು ಕೆರೆಬೇಟೆ ಸಿನಿಮಾ ಹೊಂದಿದೆ. ಸದ್ಯಕ್ಕೆ ಟೈಟಲ್ ಪೋಸ್ಟರ್ ಅನಾವರಣ ಮಾಡಿದ್ದೇವೆ. ಅ.27ರಂದು ಮೋಷನ್ ಪೋಸ್ಟರ್ ರಿಲೀಸ್ ಮಾಡುತ್ತೇವೆ’ ಎಂದು ಗೌರಿ ಶಂಕರ್ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.