ಕನ್ನಡ ಚಲಚಿತ್ರಗಳಿಗೆ ಮಲ್ಟಿಪ್ಲೆಕ್ಸ್ ಹಾಗೂ ಚಿತ್ರಮಂದಿರಗಳಲ್ಲಿ ಸ್ಕ್ರೀನ್ ಸಿಗದಿರುವ ಬಗ್ಗೆ ಮೊದಲಿನಿಂದಲೂ ಗಂಭೀರ ಚರ್ಚೆ ನಡೆಯುತ್ತಿದೆ. ಆದರೆ ಈ ಬಗ್ಗೆ ಇನ್ನೂ ಯಾವುದೇ ಪರಿಹಾರ ಕಂಡುಕೊಂಡಿಲ್ಲ. ಇದರಿಂದ ಸಣ್ಣ ಸಿನಿಮಾಗಳು ತೊಂದರೆ ಅನುಭವಿಸುತ್ತಿವೆ. ಇತ್ತೀಚೆಗೆ ಸ್ಯಾಂಡಲ್ವುಡ್ನ ನಿರ್ದೇಶಕರೊಬ್ಬರು ಇದೇ ವಿಚಾರವನ್ನು ಪ್ರಸ್ತಾಪಿಸಿದ್ದರು. ಮಾರ್ಚ್ 11ರಂದು ತೆರೆಕಂಡಿದ್ದ ‘ಹರೀಶ ವಯಸ್ಸು 36’ (Hareesha Vayassu 36) ಚಿತ್ರಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಮಂಗಳೂರು ಹಾಗೂ ಬೆಂಗಳೂರಿನ ಮಲ್ಟಿಪ್ಲೆಕ್ಸ್ಗಳಲ್ಲಿ ಚಿತ್ರ ಹೌಸ್ಫುಲ್ ಪ್ರದರ್ಶನವನ್ನೂ ಕಂಡಿತ್ತು. ಆದರೆ ಹಿಂದಿ ಸಿನಿಮಾವೊಂದರಿಂದ ಸ್ಕ್ರೀನ್ಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಆ ಚಿತ್ರ ನಮ್ಮನ್ನು ಕೊಲ್ಲುತ್ತಿದೆ ಎಂದು ನಿರ್ದೇಶಕ ಗುರುರಾಜ್ ಜ್ಯೇಷ್ಠ (Gururaj Jyesta) ವಿಡಿಯೋ ಸಂದೇಶದ ಮೂಲಕ ನೋವು ತೋಡಿಕೊಂಡಿದ್ದರು. ಆದರೆ ಜನರು ‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಚಿತ್ರದ ವಿರೋಧಿಯಾಗಿ ಅವರನ್ನು ಅರ್ಥೈಸಿಕೊಂಡ ಕಾರಣ, ಅವರು ಸ್ಪಷ್ಟನೆ ನೀಡಿದ್ದಾರೆ. ಗುರುರಾಜ್ ಅವರ ಮಾತುಗಳು ಇಲ್ಲಿವೆ.
‘‘ನಿನ್ನೆ ಒಂದು ವಿಡಿಯೋ ಮಾಡಿದ್ದೆ. ಅದನ್ನು ಜನರು ತಪ್ಪಾಗಿ ತಿಳಿಯಬಾರದದು. ಕಾರಣ, ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾವನ್ನು ನಾನೂ ಕುಟುಂಬ ಸಮೇತ ನೋಡಿದ್ದೇನೆ. ನನಗೆ ಸಿನಿಮಾದ ಬಗ್ಗೆ ಪ್ರೀತಿ ಇದೆ. ಎಲ್ಲಾ ಸಿನಿಮಾವನ್ನು ಪ್ರೀತಿಸುವವನೆ. ನಿನ್ನೆ ಮಂಗಳೂರಿನ ಮಲ್ಟಿಪ್ಲೆಕ್ಸ್ ಒಂದರಲ್ಲಿ ಸ್ಕ್ರೀನ್ ಸಿಕ್ಕಲಿಲ್ಲ ಎಂಬ ಬೇಸರದಲ್ಲಿ ಅದರ ಬಗ್ಗೆ ನಾನು ಮಾತನಾಡಿದ್ದೇನೆ. ಜನರು ಅದನ್ನು ದಯವಿಟ್ಟು ತಪ್ಪಾಗಿ ತಿಳಿಯಬಾರದು’’ ಎಂದು ಮನವಿ ಮಾಡಿದ್ದಾರೆ ನಿರ್ದೇಶಕ.
‘‘ನಾನೂ ಹಿಂದು, ಆರ್ಎಸ್ಎಸ್ ಮೂಲದಿಂದ ಬಂದವನು’’ ಎಂದಿರುವ ನಿರ್ದೇಶಕರು, ‘‘ನಾನು ಹಿಂದೂ ವಿರೋಧಿಯಲ್ಲ. ನಿರ್ಮಾಪಕರನ್ನು ಉಳಿಸುವ ಉದ್ದೇಶದಿಂದಷ್ಟೇ ನಾನು ಆ ಹೇಳಿಕೆ ನೀಡಿದ್ದೆ. ನಾನು ಯಾರ ವಿರುದ್ಧವೂ ಅಲ್ಲ. ಕೇವಲ ನಮ್ಮ ಸಿನಿಮಾವನ್ನು ಉಳಿಸುವ ಉದ್ದೇಶದಿಂದ ಅಂತಹ ಹೇಳಿಕೆ ಕೊಟ್ಟಿದ್ದೆ. ಯಾರೂ ತಪ್ಪು ತಿಳಿಯಬೇಡಿ.’’
‘‘ಯಾರಿಗಾದರೂ ಬೇಸರವಾಗಿದ್ದರೆ ಕ್ಷಮಿಸಿ. ಕನ್ನಡ ಸಿನಿಮಾ ಉಳಿಸಲು ಆ ಮಾತು ಹೇಳಿದ್ದೆ. ನಿರ್ಮಾಪಕರನ್ನು ಉಳಿಸಲು ನಿರ್ದೇಶಕನಾಗಿ ಆ ಮಾತು ಹೇಳಿದ್ದೆ. ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಹೆಸರನ್ನೂ ನಾನು ಹೇಳಿರಲಿಲ್ಲ. ಕಾರಣ, ಆ ಸಿನಿಮಾವನ್ನೂ ನಾನು ಪ್ರೀತಿಸಿದ್ದೇನೆ’’ ಎಂದು ನುಡಿದಿದ್ದಾರೆ ಗುರುರಾಜ್ ಜ್ಯೇಷ್ಠ.
ಗುರುರಾಜ್ ಜ್ಯೇಷ್ಠ ಮಾತನಾಡಿರುವ ವಿಡಿಯೋ ಇಲ್ಲಿದೆ:
ಇಂದು ಸಚಿವರು, ಶಾಸಕರಿಗೆ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ಪ್ರದರ್ಶನ: ದೇಶದೆಲ್ಲಡೆ ಹೌಸ್ಫುಲ್ ಪ್ರದರ್ಶನ ಕಾಣುತ್ತಿರುವ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾವನ್ನು ಕರ್ನಾಟಕದ ಸಚಿವರು, ಶಾಸಕರು ವೀಕ್ಷಣೆ ಮಾಡಲಿದ್ದಾರೆ. ಅದಕ್ಕಾಗಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ಸದನದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಘೋಷಣೆ ಮಾಡಿದ್ದಾರೆ. ಮಂಗಳವಾರ (ಮಾ.15) ಸಂಜೆ 6.45ಕ್ಕೆ ಬೆಂಗಳೂರಿನ ಮಂತ್ರಿ ಮಾಲ್ನಲ್ಲಿ ಸಚಿವರು, ಶಾಸಕರು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನೋಡಲಿದ್ದಾರೆ. ವಿಧಾನಸಭೆ ಸಚಿವಾಲಯದಿಂದ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಕಾಗೇರಿ ಹೇಳಿದ್ದಾರೆ. ಈಗಾಗಲೇ ಸಿನಿಮಾ ನೋಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಚಿತ್ರಕ್ಕೆ ಕರ್ನಾಟಕದಲ್ಲಿ ತೆರಿಗೆ ವಿನಾಯಿತಿ ಘೋಷಿಸಿದ್ದಾರೆ.
ಇದನ್ನೂ ಓದಿ:
‘ಆ ಹಿಂದಿ ಸಿನಿಮಾ ನಮ್ಮೆಲ್ಲರನ್ನೂ ಕೊಲ್ಲುತ್ತಿದೆ’; ಕನ್ನಡ ಚಿತ್ರಕ್ಕೆ ಸ್ಕ್ರೀನ್ ಸಿಗದೇ ನೋವು ಹೊರಹಾಕಿದ ನಿರ್ದೇಶಕ
Bahubali 3: ‘ಬಾಹುಬಲಿ 3’ ಬರಲಿದೆಯೇ? ಅಭಿಮಾನಿಗಳಿಗೆ ಅಚ್ಚರಿಯ ಮಾಹಿತಿ ನೀಡಿದ ನಿರ್ದೇಶಕ ರಾಜಮೌಳಿ
Published On - 9:03 am, Tue, 15 March 22